Asianet Suvarna News Asianet Suvarna News

ದ್ವಿತೀಯ ಪಿಯುಸಿ ಅರ್ಧ ವಾರ್ಷಿಕ ಪರೀಕ್ಷೆ ಮುಂದಕ್ಕೆ, ಹೊಸ ದಿನಾಂಕ ಪ್ರಕಟ

* ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಪದವಿ ಪೂರ್ವ ಶಿಕ್ಷಣ ಇಲಾಖೆ 
* ದ್ವಿತೀಯ ಪಿಯುಸಿ ಅರ್ಧವಾರ್ಷಿಕ ಪಬ್ಲಿಕ್‌ ಪರೀಕ್ಷೆ ಮುಂದಕ್ಕೆ
* ಹೊಸ ದಿನಾಂಕವನ್ನು ಪ್ರಕಟಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ 

Karnataka pu board decides to postpone Second PU mid term examination rbj
Author
Bengaluru, First Published Nov 18, 2021, 11:19 PM IST

ಬೆಂಗಳೂರು, (ನ.18): ವಿದ್ಯಾರ್ಥಿಗಳ ಪ್ರತಿಭಟನೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ  (Pre University Examination) ಮಣಿದಿದ್ದು, ದ್ವಿತೀಯ ಪಿಯುಸಿ ಅರ್ಧ ವಾರ್ಷಿಕ ಪರೀಕ್ಷೆಗಳನ್ನು (Second PUC Mid- Term Examination) ಮುಂದೂಡಿದೆ.

 ದ್ವಿತೀಯ ಪಿಯುಸಿ (Second PUC) ಅರ್ಧ ವಾರ್ಷಿಕ ಪರೀಕ್ಷೆಗಳನ್ನು (Exams) ಮುಂದೂಡಿ ಪಿಯುಸಿ ಅರ್ಧವಾರ್ಷಿಕ ಪರೀಕ್ಷೆಯ ಹೊಸ ದಿನಾಂಕವನ್ನೂ ಸಹ ಪ್ರಕಟಿಸಲಾಗಿದೆ.

Karnataka II PUC| ರಾಜ್ಯ ಪಿಯು ಬೋರ್ಡ್ ಪರೀಕ್ಷೆಯಲ್ಲಿ ಭಾರೀ ಬದಲಾವಣೆ!

ಈ ಹಿಂದೆ ನಿಗದಿಯಾಗಿದ್ದಂತೆ ನ.29ರಿಂದ ಡಿ.30ರವರೆಗೆ ಪರೀಕ್ಷೆಗಳು ನಡೆಯುವುದಿಲ್ಲ. ಅದರ ಬದಲಿಗೆ ಡಿ.9 ರಿಂದ 23ರವರೆಗೆ ಪರೀಕ್ಷೆಗಳು ನಡೆಯಲಿದ್ದು,  ಉತ್ತರ ಪತ್ರಿಕೆಗಳ ಮೌಲ್ಯಮಾಪನವೂ ಕಾಲೇಜಿನ ಹಂತದಲ್ಲಿಯೇ ನಡೆಯಲಿದೆ.

ನವೆಂಬರ್ 16ರಂದು ಪಿಯು ಕಾಲೇಜು ಶಿಕ್ಷಕರ ಸಂಘಟನೆಗಳ ಪ್ರತಿನಿಧಿಗಳು ಪಿಯು ಮಂಡಳಿ ನಿರ್ದೇಶಕರನ್ನು ಭೇಟಿಯಾಗಿದ್ದರು. ನವೆಂಬರ್ 17ರಂದು ವಿದ್ಯಾರ್ಥಿಗಳು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಮಂಡಳಿಯು ತನ್ನ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದರು.

ಅರ್ಧವಾರ್ಷಿಕ ಪರೀಕ್ಷೆಯನ್ನು ಬೋರ್ಡ್ ಪರೀಕ್ಷೆಯಾಗಿ ನಡೆಸುವುದಾಗಿ ನವೆಂಬರ್ 12ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ಪಿಯು ಮಂಡಳಿ ನಿರ್ದೇಶಕರು ತಿಳಿಸಿದ್ದರು. ಮಂಡಳಿಯೇ ಪ್ರಶ್ನಪತ್ರಿಕೆಗಳನ್ನು ಸಿದ್ಧಪಡಿಸಲಿದ್ದು, ಜಿಲ್ಲಾಮಟ್ಟದಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಮಂಡಳಿಯು ಹೇಳಿತ್ತು. ಇದನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಿರೋಧಿಸಿದ್ದರು.

ಈ ಮೊದಲು ಅರ್ಧವಾರ್ಷಿಕ ಪರೀಕ್ಷೆಗಳನ್ನು ಕಾಲೇಜು ಹಂತದಲ್ಲಿಯೇ ನಡೆಸಲಾಗುತ್ತಿತ್ತು. ಕಾಲೇಜುಗಳಲ್ಲಿ ಮುಕ್ತಾಯವಾಗಿರುವ ಪಠ್ಯಕ್ರಮವನ್ನು ಗಮನಿಸಿ ಪ್ರಶ್ನಪತ್ರಿಕೆಗಳನ್ನು ರೂಪಿಸಲಾಗುತ್ತಿತ್ತು. ಆದರೆ ಈ ಬಾರಿ ಮಂಡಳಿ ಹೊಸ ಪರೀಕ್ಷಾ ಕ್ರಮವನ್ನು ಸಲಹೆ ಮಾಡಿ, ಪಠ್ಯಕ್ರಮದ ಅರ್ಧದಷ್ಟು ಪಾಠಗಳನ್ನು ಆಧರಿಸಿ ಪ್ರಶ್ನಪತ್ರಿಕೆ ರೂಪಿಸಲಾಗುವುದು ಎಂದು ಹೇಳಿತ್ತು. ಆದರೆ ಕಾಲೇಜುಗಳಲ್ಲಿ ಇಷ್ಟು ಪಾಠವೇ ಆಗಿಲ್ಲ ಎನ್ನುವುದು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಆಕ್ಷೇಪವಾಗಿತ್ತು.

ಸಭೆ ಮಾಡಲಾಗಿತ್ತು
ಅರ್ಧವಾರ್ಷಿಕ ಪರೀಕ್ಷೆಯನ್ನು ಇಲಾಖೆಯಿಂದ ನಡೆಸುವ ನಿರ್ಧಾರಕ್ಕೆ ವಿದ್ಯಾರ್ಥಿಗಳಿಂದ ವಿರೋಧ ಹಾಗೂ ಈ ಸಂಬಂಧ ಕೆಲ ಅಂಶಗಳನ್ನು ಪುನರ್‌ ಪರಿಶೀಲಿಸುವಂತೆ ಪಿಯು ಉಪನ್ಯಾಸಕರು ಮತ್ತು ಪ್ರಾಂಶುಪಾಲರಿಂದ ಮನವಿ ಬಂದ ಹಿನ್ನೆಲೆಯಲ್ಲಿ ನಿರ್ದೇಶಕರು ಬುಧವಾರ ಪ್ರಾಂಶುಪಾಲರ ಸಂಘದ ಅಧ್ಯಕ್ಷರೂ ಆದ ಹಾಲಿ ವಿಧಾನ ಪರಿಷತ್‌ ಸದಸ್ಯ ಶ್ರೀಕಂಠೇಗೌಡ, ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್‌.ನಿಂಗೇಗೌಡ, ಅನುದಾನಿತ ಶಾಲಾ ಕಾಲೇಜುಗಳ ಬೋಧಕ, ಬೋಧಕೇತರ ಸಿಬ್ಬಂದಿಗಳ ಸಂಘದ ಅಧ್ಯಕ್ಷ ಕರಬಸಪ್ಪ ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ನಿರ್ದೇಶಕರು ಮಲ್ಲೇಶ್ವರದ ಕಚೇರಿಯಲ್ಲಿ ಸಭೆ ನಡೆಸಿ ಅಭಿಪ್ರಾಯ ಪಡೆದರು.

ದ್ವಿತೀಯ ಪಿಯು ಜತೆಗೆ ಪ್ರಥಮ ಪಿಯು ಅರ್ಧವಾರ್ಷಿಕ ಪರೀಕ್ಷೆಯನ್ನೂ ಒಂದೇ ಅವಧಿಯಲ್ಲಿ ನಡೆಸಲು ಸಲಹೆಗಳು ಬಂದಿದ್ದವು. ಉಪನ್ಯಾಸಕರ ಒತ್ತಾಯದಂತೆ ಜಿಲ್ಲೆ, ತಾಲ್ಲೂಕು ಕೇಂದ್ರಗಳ ಬದಲು ಆಯಾ ಕಾಲೇಜುಗಳಲ್ಲೇ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಅವಕಾಶ ಮಾಡಿಕೊಡಲು ಇಲಾಖೆ ಒಪ್ಪಿತ್ತು. ಸಭೆಯಲ್ಲಿ ಡಿ.13ರಿಂದ 24ರವರೆಗೆ ಪರೀಕ್ಷೆ ನಡೆಸಲು ಚರ್ಚೆ ನಡೆಯಿತಾದರೂ, ಈ ಅವಧಿಯಲ್ಲಿ ಕೆಪಿಎಸ್ಸಿ ಪರೀಕ್ಷೆಗಳು ಇರುವುದರಿಂದ ಪರಿಶೀಲಿಸಬೇಕಾಗುತ್ತದೆ. ಗುರುವಾರ ಸಚಿವರೊಂದಿಗೆ ಸಭೆ ನಡೆಸಿ ಪರಿಷ್ಕೃತ ವೇಳಾಪಟ್ಟಿಸಿದ್ಧಪಡಿಸಿ ಪ್ರಕಟಿಸುವುದಾಗಿ ನಿರ್ದೇಶಕರು ಸಭೆಗೆ ತಿಳಿಸಿದ್ದರು.

Follow Us:
Download App:
  • android
  • ios