ಬೆಂಗಳೂರು(ನ.28): ಶುಲ್ಕ ಪಾವತಿಸದ ಮಕ್ಕಳಿಗೆ ಡಿ.1ರಿಂದ ಆನ್‌ಲೈನ್‌ ಶಿಕ್ಷಣ ತಡೆಹಿಡಿಯುವ ನಿರ್ಧಾರವನ್ನು ಖಾಸಗಿ ಶಾಲೆಗಳು ಸದ್ಯಕ್ಕೆ ಕೈಬಿಟ್ಟಿವೆ. ಎಲ್ಲ ಮಕ್ಕಳಿಗೂ ಆನ್‌ಲೈನ್‌ ಶಿಕ್ಷಣ ಮುಂದುವರೆಸಲು ಒಪ್ಪಿಕೊಂಡಿದ್ದು, ಖಾಸಗಿ ಶಾಲಾ ಸಂಘಟನೆಗಳ ಪ್ರತಿನಿಧಿಗಳ ಜೊತೆ ಸರ್ಕಾರ ನಡೆಸಿದ ಸಭೆ ತಾತ್ಕಾಲಿಕ ಯಶಸ್ಸು ಕಂಡಿದೆ.

"

ಪೋಷಕರಿಗೆ ಮನವರಿಕೆ ಮಾಡಿ ಶುಲ್ಕ ವಿವಾದ ಬಗೆಹರಿಸುವುದು ಸೇರಿದಂತೆ ಒಟ್ಟು ಆರು ಬೇಡಿಕೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳದೆ ಹೋದರೆ ಮತ್ತೆ ಸಭೆ ನಡೆಸಿ ಆನ್‌ಲೈನ್‌ ಶಿಕ್ಷಣ ಮುಂದುವರೆಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವ ಎಚ್ಚರಿಕೆಯನ್ನು ಸಂಘಟನೆಗಳು ನೀಡಿವೆ.

ಶುಲ್ಕ ಕಟ್ಟಿ, ಇಲ್ಲ ಆನ್‌ಲೈನ್ ಕ್ಲಾಸ್ ಕಟ್; ಖಾಸಗಿ ಶಾಲೆಗಳ ಬೆದರಿಕೆ ವಿದ್ಯಾರ್ಥಿಗಳಿಗೆ ಆತಂಕ

ಬೆಂಗಳೂರಿನ ನೃಪತುಂಗ ರಸ್ತೆಯ ಇಲಾಖೆಯ ಕಚೇರಿಯಲ್ಲಿ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್‌ ಅವರು ಶುಕ್ರವಾರ ನಡೆಸಿದ ಸಭೆಯಲ್ಲಿ ಕ್ಯಾಮ್ಸ್‌, ಕುಸ್ಮಾ, ಮಿಸ್ಕಾ, ರುಪ್ಸಾ, ಐಸಿಎಸ್‌ಇ ಶಾಲಾ ಪ್ರತಿನಿಧಿಗಳ ಸಂಘ, ಅಲ್ಪಸಂಖ್ಯಾತ ಶಾಲೆಗಳ ಒಕ್ಕೂಟಗಳ ಸಂಘಟನೆಗಳು ಭಾಗವಹಿಸಿದ್ದವು.

‘ಇದುವರೆಗೂ ಶೇ.40ರಷ್ಟುಪೋಷಕರು ತಮ್ಮ ಮಕ್ಕಳಿಗೆ ಶುಲ್ಕ ಪಾವತಿಸಿ ಶಾಲೆಗಳಿಗೆ ದಾಖಲಾತಿ ಮಾಡಿಸಿಲ್ಲ. ದಾಖಲಾತಿ ಮಾಡದಿದ್ದರೂ ಈ ಬಾರಿ ಮಕ್ಕಳನ್ನು ಮುಂದಿನ ವರ್ಷಕ್ಕೆ ಪಾಸ್‌ ಓವರ್‌ ಮಾಡುತ್ತಾರೆಂದು ಕೊಂಡಿದ್ದಾರೆ. ಮಕ್ಕಳ ಕನಿಷ್ಠ ಕಲಿಕೆಗೆ ಅವಕಾಶ ಕಲ್ಪಿಸುವಲ್ಲಿ ಪೋಷಕರ ಜವಾಬ್ದಾರಿ ಕೂಡ ಇದೆ. ಶಾಲಾ ದಾಖಲಾತಿ ಮಾಡದೆ ಕನಿಷ್ಠ ಕಲಿಕೆಗೆ ವಂಚಿಸುವುದು ಮಕ್ಕಳ ಹಕ್ಕುಗಳ ಉಲ್ಲಂಘನೆ ಹಾಗೂ ಶಿಕ್ಷಣ ಹಕ್ಕು ಕಾಯ್ದೆಯ(ಆರ್‌ಟಿಇ) ಉಲ್ಲಂಘನೆಯಾಗುತ್ತದೆ. ಇದನ್ನು ಸರ್ಕಾರ ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ಕೋರಿವೆ.

‘ತಮಿಳುನಾಡಿನಲ್ಲಿ ಶೇ.75ರಷ್ಟುಶುಲ್ಕ ಪಡೆಯಲು ಅಲ್ಲಿನ ಹೈಕೋರ್ಟ್‌ ಅವಕಾಶ ನೀಡಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಶೇ.75ರಷ್ಟುಶುಲ್ಕ ಪಡೆಯಲು ಸರ್ಕಾರ ಒಪ್ಪಿಗೆ ನೀಡಬೇಕು. ಶಾಲೆಗಳ ಆರ್ಥಿಕ ಸಂಕಷ್ಟಪರಿಹಾರಕ್ಕೆ ಬಡ್ಡಿ ರಹಿತ ಸಾಲ ನೀಡಬೇಕು. ಆರ್‌ಟಿಇ ಮಕ್ಕಳ ಪ್ರವೇಶಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲೆಗಳಿಗೆ ಬಾಕಿ ಇರುವ ಹಣವನ್ನು ಕೂಡಲೇ ಬಿಡುಗಡೆ ಮಾಡಲು ಕ್ರಮ ವಹಿಸಬೇಕು’ ಎಂದು ಆಗ್ರಹಿಸಿವೆ.

ಆನ್‌ಲೈನ್‌ ಕ್ಲಾಸ್‌ ನಡೆಯುತ್ತಿದ್ದರಿಂದ ಒಬ್ಬಳೆ ಇದ್ದಳು : ಈ ವೇಳೆ ಅಪ್ರಾಪ್ತೆ ಮೇಲೆ ನಡೆಯಿತು ಅತ್ಯಾಚಾರ

ಇದಕ್ಕೆ ಆಯುಕ್ತರು ಉತ್ತರಿಸಿ, ‘ಸಚಿವ ಸುರೇಶ್‌ ಕುಮಾರ್‌ ಅವರೊಂದಿಗೆ ತಮ್ಮ ಬೇಡಿಕೆಗಳ ಈಡೇರಿಕೆ ಬಗ್ಗೆ ಚರ್ಚಿಸಲಾಗುವುದು. ಸರ್ಕಾರ ಹಾಗೂ ಪೋಷಕರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕೇ ಹೊರತು ಏಕಾಏಕಿ ಆನ್‌ಲೈನ್‌ ಶಿಕ್ಷಣ ನಿಲ್ಲಿಸುವ ಪ್ರಯತ್ನಗಳನ್ನು ನಡೆಸುವಂತಿಲ್ಲ ಎಂದು ಸೂಚಿಸಿದ್ದಾರೆ’ ಎಂದರು.

ಇದಕ್ಕೆ ಸ್ಪಂದಿಸಿದ ಶಾಲಾ ಪ್ರತಿನಿಧಿಗಳು, ‘ಆನ್‌ಲೈನ್‌ ಶಿಕ್ಷಣವನ್ನು ಸದ್ಯಕ್ಕೆ ತಡೆಹಿಡಿಯುವುದಿಲ್ಲ. ಆದರೆ, ಶುಲ್ಕ ಸಮಸ್ಯೆ ಬಗೆಹರಿಸದಿದ್ದರೆ ಹೆಚ್ಚುಕಾಲ ಆನ್‌ಲೈನ್‌ ಶಿಕ್ಷಣ ಮುಂದುವರೆಸಲು ಸಾಧ್ಯವಿಲ್ಲ. ಸರ್ಕಾರದೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಂಡು ಮತ್ತೊಂದು ಸಭೆ ಕರೆಯಬೇಕು. ಸರ್ಕಾರದ ಸ್ಪಂದನೆ ಆಧರಿಸಿ ನಮ್ಮ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹೇಳಿ ತಮ್ಮ ಪಟ್ಟನ್ನು ತಾತ್ಕಾಲಿಕವಾಗಿ ಸಡಿಲಿಸಿದರು.

ಖಾಸಗಿ ಶಾಲೆಗಳ ಬೇಡಿಕೆ

* ಪೋಷಕರಿಗೆ ಮೊದಲ ಕಂತಿನ ಶುಲ್ಕ ಮಾತ್ರ ಕಟ್ಟಿಎಂದು ಶಿಕ್ಷಣ ಸಚಿವರು ಮತ್ತು ಅಧಿಕಾರಿಗಳು ಹೇಳಿಕೆ ನೀಡಬಾರದು

* 2ನೇ ಕಂತಿನ ಶುಲ್ಕ ಪಾವತಿಗೆ ಅವಕಾಶ ನೀಡಬೇಕು. 2 ಕಂತಿನಿಂದ ಒಟ್ಟು ಶೇ.75ರಷ್ಟುಶುಲ್ಕ ಪಡೆಯಲು ಅನುಮತಿ ನೀಡಬೇಕು.

* ಕೋವಿಡ್‌ ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಆಹಾರ ಕಿಟ್‌ ಹಾಗೂ ಗೌರವಧನ ನೀಡಬೇಕು.

* ಕಳೆದ ಸಾಲಿನ ಬಾಕಿ ಶುಲ್ಕ ಪಾವತಿಸುವಂತೆ ಹೈಕೋರ್ಟ್‌ ಆದೇಶದ ಬಗ್ಗೆ ಪೋಷಕರಿಗೆ ಸ್ಪಷ್ಟೀಕರಣದ ಮರು ಆದೇಶ ನೀಡಬೇಕು.

* ಹೊಸ ಶಾಲೆಗಳಲ್ಲಿನ ಸುರಕ್ಷತಾ ನಿಯಮಗಳನ್ನು ಹಳೆಯ ಶಾಲೆಗಳಲ್ಲೂ ಬಲವಂತದ ಅನುಷ್ಠಾನ ಬೇಡ.

* 2019-20ನೇ ಸಾಲಿ ಆರ್‌ಟಿಇ ಬಾಕಿ 135.7 ಕೋಟಿ ರು. ನೀಡಬೇಕು, 2020-21ನೇ ಸಾಲಿನ ಮರುಪಾವತಿ ಪ್ರಕ್ರಿಯೆ ಆರಂಭಿಸಬೇಕು.

* ಸಾಲ ನೀಡಿರುವ ಬ್ಯಾಂಕುಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸಬೇಕು.ಬಡ್ಡಿ ರಹಿತ ಸಾಲ ನೀಡಲು ಕ್ರಮ ವಹಿಸಬೇಕು.