ಶಾಲೆ ಆರಂಭದ ಬಗ್ಗೆ ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟ ತಜ್ಞರು!

* ಏಕಾಏಕಿ ರಾಜ್ಯಾದ್ಯಂತ ಶಾಲೆ ಆರಂಭಿಸೋದು ಬೇಡ: ತಜ್ಞರು

* 3ನೇ ಅಲೆ, ರಾಜ್ಯ ಸರ್ಕಾರಕ್ಕೆ ಡಾ| ದೇವಿಶೆಟ್ಟಿಸಮಿತಿ ಮಧ್ಯಂತರ ವರದಿ

* ಸ್ಥಳೀಯ ಸಂಸ್ಥೆಗಳಿಗೆ ನಿರ್ಧಾರ ಕೈಗೊಳ್ಳಲು ಅಧಿಕಾರ ನೀಡಿ

Karnataka high level body recommends reopening of schools in staggered manner pod

ಬೆಂಗಳೂರು(ಜೂ.22): ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣ ಇಳಿಮುಖವಾಗಿದೆ ಎಂಬ ಒಂದೇ ಕಾರಣಕ್ಕೆ ಏಕಾಏಕಿ ರಾಜ್ಯಾದ್ಯಂತ ಶಾಲೆಗಳನ್ನು ಪುನರಾರಂಭ ಮಾಡಬಾರದು. ಬದಲಿಗೆ, ಶಿಕ್ಷಕರು, ಪೋಷಕರಿಗೆ ಗರಿಷ್ಠ ಸಂಖ್ಯೆಯಲ್ಲಿ ಲಸಿಕೆ ಹಾಕಿಸಬೇಕು. ಬಳಿಕ ಆಯಾ ಪ್ರದೇಶದಲ್ಲಿನ ಸುರಕ್ಷತೆ ಆಧರಿಸಿ ‘ವಿಕೇಂದ್ರೀಕರಣ ವ್ಯವಸ್ಥೆ’ ಅಡಿ ಶಾಲೆಗಳ ಆರಂಭಕ್ಕೆ ಸ್ಥಳೀಯವಾಗಿ ನಿರ್ಧಾರ ಮಾಡಬಹುದು.

- ಹೀಗೆಂದು ಡಾ.ದೇವಿಶೆಟ್ಟಿನೇತೃತ್ವದಲ್ಲಿ 3ನೇ ಅಲೆ ಸಿದ್ಧತೆ ಕುರಿತು ರಚಿಸಿರುವ ಉನ್ನತ ಮಟ್ಟದ ತಜ್ಞರ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ತಿಳಿಸಿದೆ.

ಮಕ್ಕಳಿಗೆ ಶಾಲೆ ಪುನರಾರಂಭ ಮಾಡುವುದರಿಂದ ಉಪಯೋಗ ಹಾಗೂ ಸಮಸ್ಯೆ ಎರಡೂ ಇವೆ. ಎರಡನ್ನೂ ಕೂಲಂಕಷವಾಗಿ ಪರಿಶೀಲಿಸಿ ಸರ್ಕಾರ ಅಗತ್ಯ ನಿರ್ಧಾರ ತೆಗೆದುಕೊಳ್ಳಬೇಕು. ತೀರಾ ಸುರಕ್ಷಿತ ಎಂದು ನಿರ್ಧಾರವಾದ ಸ್ಥಳಗಳಲ್ಲಿ ಕೇಂದ್ರ-ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ಶಾಲೆ ಪುನರಾರಂಭಕ್ಕೆ ಸ್ಥಳೀಯ ಆಡಳಿತಗಳಿಗೆ ಅನುಮತಿ ನೀಡಬೇಕು ಎಂದು ಸಲಹೆ ನೀಡಿರುವುದಾಗಿ ಸಮಿತಿಯ ಸದಸ್ಯರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.

ಇದು ಕೇವಲ ಸಾಧ್ಯಾಸಾಧ್ಯತೆಗಳ ಬಗೆಗಿನ ಸಲಹೆ ಮಾತ್ರ. ಈ ಬಗ್ಗೆ ಮಂಗಳವಾರ ಮಧ್ಯಾಹ್ನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಸಭೆಯಲ್ಲಿ ಚರ್ಚಿಸಿ ಬಳಿಕ ಅಂತಿಮ ನಿರ್ಧಾರ ಪ್ರಕಟಣೆಯಾಗುವ ಸಾಧ್ಯತೆ ಇದೆ.

ಆದರೆ, ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸುವ ಮೊದಲು ಪ್ರತಿಯೊಬ್ಬ ಶಿಕ್ಷಕರಿಗೂ ಲಸಿಕೆ ನೀಡಿರಬೇಕು. ಜತೆಗೆ ಮಕ್ಕಳ ಪೋಷಕರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಬೇಕು. ಜತೆಗೆ ಶಾಲಾ ಸಿಬ್ಬಂದಿ, ಶಾಲಾ ವಾಹನ ಸಿಬ್ಬಂದಿ ಸೇರಿದಂತೆ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂಪರ್ಕಕ್ಕೆ ಬರುವ ಭಾಗಶಃ ಜನರಿಗೆ ಲಸಿಕೆ ನೀಡಬೇಕು ಎಂದು ವರದಿಯಲ್ಲಿ ತಿಳಿಸಿದ್ದೇವೆ ಎಂದು ಹೇಳಿದರು.

ಸ್ಥಳೀಯವಾಗಿ ಸೋಂಕು ತೀರಾ ಕಡಿಮೆ ಇರುವ ಸುರಕ್ಷಿತ ಪ್ರದೇಶದಲ್ಲಿ ಶಾಲೆ ಪುನರಾರಂಭಕ್ಕೆ ನಿರ್ಧರಿಸಲು ಸ್ಥಳೀಯ ಆಡಳಿತಕ್ಕೆ ಅನುಮತಿ ನೀಡಬೇಕು. ಈ ವೇಳೆ ಕೇಂದ್ರ ಸರ್ಕಾರ ಹಾಗೂ ರಾಜ್ಯದ ಮಾರ್ಗಸೂಚಿಯ ಅಡಿಯಲ್ಲೇ ನಿರ್ಧಾರ ತೆಗೆದುಕೊಳ್ಳಬೇಕು.

ಕೇಂದ್ರ ಸರ್ಕಾರವು ಅಕ್ಟೋಬರ್‌ವರೆಗೆ ಶಾಲೆಗಳನ್ನು ತೆರೆಯಬಾರದು ಎಂದು ಅಭಿಪ್ರಾಯಪಟ್ಟಿದ್ದು, ಇದೇ ವೇಳೆ ಶಾಲೆ ತೆರೆಯುವ ಸಮಯ ಹಾಗೂ ರೀತಿಯನ್ನು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿರುವುದಾಗಿ ತಿಳಿಸಿದೆ. ಇದೇ ವೇಳೆ ಗರಿಷ್ಠ ಸಂಖ್ಯೆಯಲ್ಲಿ ಶಿಕ್ಷಕರಿಗೆ ಲಸಿಕೆ ನೀಡಬೇಕು. ಶಾಲೆಗಳಲ್ಲಿ ಮಕ್ಕಳ ನಡುವೆ ಅಂತರ ಕಾಯ್ದುಕೊಳ್ಳಬೇಕು. 2-3 ಗಂಟೆ ಮಾತ್ರ ಶಾಲೆಗಳನ್ನು ತೆರೆದಿರಬೇಕು. ಪಠ್ಯ ಪುಸ್ತಕ, ಸ್ಟೇಷನರಿ ವಿನಿಮಯ ಮಾಡಿಕೊಳ್ಳಬಾರದು ಎಂಬುದು ಸೇರಿ ಕೆಲವು ಸಲಹೆ ನೀಡಿದೆ. ಇವೆಲ್ಲವನ್ನೂ ಪರಿಗಣಿಸಿ ಪ್ರತ್ಯೇಕ ಮಾರ್ಗಸೂಚಿ ಮಾಡಬೇಕು ಎಂದು ಸಲಹೆ ನೀಡಿದೆ.

ಶಾಲೆ ತರಗತಿಯಿಲ್ಲದೆ ಆಗುತ್ತಿರುವ ಸಮಸ್ಯೆ:

ಶಾಲೆಗಳು ದೀರ್ಘಕಾಲ ಪುನರಾರಂಭವಾಗದಿದ್ದರೆ ಹಳ್ಳಿ ಹಾಗೂ ನಗರ ಪ್ರದೇಶದ ಮಕ್ಕಳ ನಡುವೆ ಅಸಮಾನತೆ ಬೆಳೆಯಲಿದೆ. ಆನ್‌ಲೈನ್‌ ತರಗತಿಗಳಿಂದ ನೆಟ್‌ವರ್ಕ್, ಡಿವೈಸ್‌ ಲಭ್ಯತೆ ಮತ್ತಿತರ ಕಾರಣಗಳಿಂದಾಗಿ ನಗರ ಪ್ರದೇಶದ ಮಕ್ಕಳು ಹಳ್ಳಿ ಮಕ್ಕಳಿಗಿಂತ ಹೆಚ್ಚು ಉಪಯೋಗ ಪಡೆಯಬಹುದು.

ಇನ್ನು, ಶಾಲೆಯ ಪರಿಕಲ್ಪನೆಯನ್ನು ಮಕ್ಕಳು ಮರೆತರೆ ಮತ್ತೆ ಶಾಲೆಗೆ ತಲುಪಿಸುವುದು ತುಂಬಾ ಕಷ್ಟವಾಗಬಹುದು. ಜತೆಗೆ ಬಾಲ ಕಾರ್ಮಿಕ ಸಮಸ್ಯೆ, ಕೊಳಗೇರಿ ಮತ್ತಿತರ ಕಡೆ ಮಕ್ಕಳು ಭಿಕ್ಷಾಟನೆಗೆ ದೂಡಲ್ಪಡುವುದು, ಜೀತದಾಳು ಪದ್ಧತಿಗಳು ಉಂಟಾಗಬಹುದು. ಹೀಗಾಗಿ ಸುರಕ್ಷಿತ ಸ್ಥಳಗಳಲ್ಲಿ ಶಾಲೆ ಪುನರಾರಂಭದ ಬಗ್ಗೆ ಪರಿಶೀಲಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಶಾಲೆ ತೆರೆಯುವುದರಿಂದ ಆಗುವ ಸಮಸ್ಯೆ:

ಇದೇ ವೇಳೆ ಶಾಲೆಗಳು ತೆರೆಯುವುದರಿಂದ ಆಗುವ ಸಮಸ್ಯೆಗಳನ್ನೂ ಪಟ್ಟಿಮಾಡಿದ್ದು, ಇವುಗಳಿಗೆ ಪರಿಹಾರ ಕಂಡುಕೊಂಡು ಹಂತ-ಹಂತವಾಗಿ ಶಾಲೆ ಪುನರಾರಂಭ ಮಾಡಲು ಸಮಿತಿ ಸಲಹೆ ನೀಡಿದೆ.

ಮಕ್ಕಳಿಗೆ ಶಾಲೆಗಳಲ್ಲಿ ಸೋಂಕು ತಗಲಿದರೆ ಮನೆಗಳಲ್ಲೂ ಸೋಂಕು ಹರಡುತ್ತದೆ. ಮಕ್ಕಳ ಆರೋಗ್ಯ ಸೂಕ್ಷ್ಮವಾಗಿರುವುದರಿಂದ ಇದು ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ.

ಹೀಗಾಗಿ ಪೋಷಕರು, ಶಿಕ್ಷಕರಿಗೆ ಲಸಿಕೆ ನೀಡಬೇಕು. ಸಾಧ್ಯವಾದರೆ 12ರಿಂದ 18 ವರ್ಷದ ಮಕ್ಕಳಿಗೂ ಲಸಿಕೆ ನೀಡಬೇಕು. ಇದರ ನಡುವೆಯೇ ಹಂತ-ಹಂತವಾಗಿ ಶಾಲೆ ಪುನರಾರಂಭ ಮಾಡಬಹುದು ಎಂದು ತಿಳಿಸಲಾಗಿದೆ.

- ರಾಜ್ಯದಲ್ಲಿರುವ ಒಟ್ಟು 0-18 ವರ್ಷದ ಮಕ್ಕಳ ಸಂಖ್ಯೆ: 2,38,38,995 (2.38 ಕೋಟಿ)

- 3ನೇ ಅಲೆಯಲ್ಲಿ ಸಂಭವನೀಯ ಸೋಂಕಿತರ ಸಂಖ್ಯೆ: 1.59 ಲಕ್ಷ

- ಅತಿ ಕೆಟ್ಟಪರಿಸ್ಥಿತಿಯ ಅಂದಾಜು: 3.40 ಲಕ್ಷ

- ಅಗತ್ಯವಾಗಲಿರುವ ಐಸಿಯು, ಎಚ್‌ಡಿಯು, ವೆಂಟಿಲೇಟರ್‌ ಬೆಡ್‌: 6,801

- ಸಾಮಾನ್ಯ ಬೆಡ್‌: 23,804

- ಕೊರೋನಾ ಆರೈಕೆ ಕೇಂದ್ರ ಬೆಡ್‌: 43,354

 

ವರದಿಯಲ್ಲಿ ಏನಿದೆ?

- ಮೊದಲು ಶಿಕ್ಷಕರು, ಪೋಷಕರಿಗೆ ಗರಿಷ್ಠ ಲಸಿಕೆ ನೀಡಬೇಕು

- ಸಾಧ್ಯವಾದರೆ 12ರಿಂದ 18ರ ಮಕ್ಕಳಿಗೂ ಲಸಿಕೆ ನೀಡಬೇಕು

- ಶಾಲೆಯ ಸಹಾಯಕರು, ಬಸ್‌ ಚಾಲಕರಿಗೂ ಲಸಿಕೆ ನೀಡಿ

- ನಂತರ ಆಯಾ ಪ್ರದೇಶದ ಸುರಕ್ಷತೆ ಆಧರಿಸಿ ನಿರ್ಧರಿಸಿ

- ಶಾಲೆ ತೆರೆಯುವುದರಿಂದ ಲಾಭವೂ ಇದೆ, ನಷ್ಟವೂ ಇದೆ

- ಕೇಂದ್ರ, ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ನಿರ್ಧರಿಸಿ

Latest Videos
Follow Us:
Download App:
  • android
  • ios