ಕನ್ನಡ ಕಡ್ಡಾಯ ನೀತಿಯ ವಿರುದ್ಧ ಸಲ್ಲಿಸಲಾದ ಅರ್ಜಿಗೆ ಸರ್ಕಾರ ಇನ್ನೂ ಆಕ್ಷೇಪಣೆ ಸಲ್ಲಿಸದ ಹಿನ್ನೆಲೆಯಲ್ಲಿ, 3 ವಾರಗಳ ಗಡುವು ನೀಡಿ ಹೈಕೋರ್ಟ್ ಎಚ್ಚರಿಸಿದೆ. CBSE ಮತ್ತು ICSE ಶಾಲೆಗಳ ಶಿಕ್ಷಕರು ,ಪೋಷಕರು ಸಲ್ಲಿಸಿರುವ ಈ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.

ಬೆಂಗಳೂರು: ರಾಜ್ಯ ಸರ್ಕಾರದ "ಕನ್ನಡ ಕಡ್ಡಾಯ" ನೀತಿಯ ವಿರುದ್ಧ CBSE ಮತ್ತು ICSE ಪಠ್ಯಕ್ರಮ ಹೊಂದಿರುವ ಶಾಲೆಗಳ ಕೆಲವು ಶಿಕ್ಷಕರು ಮತ್ತು ಪೋಷಕರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದರು. ಈ ಸಂಬಂಧ ಸರ್ಕಾರಕ್ಕೆ 3 ವಾರಗಳೊಳಗೆ ಸ್ಪಷ್ಟ ಆಕ್ಷೇಪಣೆ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಅರ್ಜಿ ಎರಡು ವರ್ಷಗಳ ಹಿಂದೆ ಹೈಕೋರ್ಟ್‌ಗೆ ಸಲ್ಲಿಸಲಾಗಿತ್ತು. ಆದರೆ ಈವರೆಗೂ ಸರ್ಕಾರ ಈ ಅರ್ಜಿಗೆ ಯಾವುದೇ ಆಕ್ಷೇಪಣೆ ಸಲ್ಲಿಸದೆ ವಿಳಂಬ ಮಾಡಿದೆ. ಇದರ ಬೆನ್ನಲ್ಲೇ ಶುಕ್ರವಾರ ಹೈಕೋರ್ಟ್‌ ದ್ವಿಸದಸ್ಯ ಪೀಠದ ಎದುರು ವಿಚಾರಣೆ ನಡೆಯಿತು.

ಅರ್ಜಿ ಸಲ್ಲಿಸಿದ್ದು, ಯಾರು?

CBSE ಮತ್ತು ICSE ಮಾನ್ಯತೆ ಪಡೆದ ಕೆಲ ಖಾಸಗಿ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪೋಷಕರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. "ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕೆಂಬ ಸರ್ಕಾರದ ನಿರ್ಧಾರವು ಸಂಸ್ಥೆಗಳ ಸ್ವಾಯತ್ತತೆಗೆ ಧಕ್ಕೆಯಾಗಿದೆ ಮತ್ತು ಇದರಿಂದ ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡ ಉಂಟಾಗುತ್ತದೆ ಎಂಬುದು ಇವರ ವಾದವಾಗಿದೆ.

ಆಕ್ಷೇಪಣೆ ಸಲ್ಲಿಸುವಲ್ಲಿ ವಿಳಂಬ:

ಹೈಕೋರ್ಟ್‌ನಲ್ಲಿ ಈ ಪ್ರಕರಣ ವಿಚಾರಣೆಗೆ ಬಂದಾಗ ಅರ್ಜಿದಾರರ ಪರ ವಕೀಲರು, “ಸರ್ಕಾರ ಎರಡು ವರ್ಷಗಳಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಆದ್ದರಿಂದ ಮಧ್ಯಂತರ ಆದೇಶ ನೀಡಬೇಕೆಂದು” ಮನವಿ ಮಾಡಿದರು.

ಪೀಠದ ಸ್ಪಷ್ಟ ಎಚ್ಚರಿಕೆ:

ಈ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕಾಮೇಶ್ವರ ರಾವ್ ಹಾಗೂ ನ್ಯಾಯಮೂರ್ತಿ ಸಿಎಂ ಜೋಶಿ ಅವರ ದ್ವಿಸದಸ್ಯ ಪೀಠ, “ಸರ್ಕಾರ ಮುಂದಿನ ಮೂರು ವಾರಗಳಲ್ಲಿ ಅರ್ಜಿಗೆ ಸಂಬಂಧಿಸಿದಂತೆ ಸ್ಪಷ್ಟ ಆಕ್ಷೇಪಣೆ ಸಲ್ಲಿಸಬೇಕು. ಇಲ್ಲದಿದ್ದರೆ ಅರ್ಜಿದಾರರ ಮನವಿಯನ್ನು ಪರಿಗಣಿಸಿ ಮಧ್ಯಂತರ ಆದೇಶ ನೀಡಲಾಗುತ್ತದೆ” ಎಂದು ಮೌಖಿಕ ಎಚ್ಚರಿಕೆ ನೀಡಿತು.

ಆಕ್ಷೇಪಣೆ ಸಲ್ಲಿಸಲು ಕೊನೆಯ ಅವಕಾಶ:

ಸರ್ಕಾರ ಇದೀಗ ಎಚ್ಚೆತ್ತುಕೊಂಡು ತ್ವರಿತವಾಗಿ ನ್ಯಾಯಾಲಯದ ಮುಂದಿಲ್ಲಿ ಸ್ಪಷ್ಟ ನಿಲುವು ಇಡುವ ಅಗತ್ಯವಿದೆ. ಇಲ್ಲವಾದರೆ, ಸರ್ಕಾರದ ಪ್ರತಿಸ್ಪಂದನೆಯಿಲ್ಲದ ಕಾರಣದಿಂದ ಅರ್ಜಿದಾರರ ಪರವಾಗಿ ತಾತ್ಕಾಲಿಕ ಪರಿಹಾರ ನೀಡುವ ಸಾಧ್ಯತೆ ಹೆಚ್ಚಾಗಲಿದೆ ಎಂದು ನ್ಯಾಯಪೀಠ ಸೂಚಿಸಿದೆ.