ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳನ್ನು ಅಧ್ಯಕ್ಷ ಮಹೇಶ್ ಜೋಶಿ ಖಂಡಿಸಿದ್ದಾರೆ. ವೈಯಕ್ತಿಕ ಧ್ವೇಷದಿಂದ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ ಜೋಶಿ, ತನಿಖೆಗೆ ಸಿದ್ಧ ಎಂದಿದ್ದಾರೆ. ಅನುದಾನ ಬಳಕೆ ಪಾರದರ್ಶಕವಾಗಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಸಹಕಾರ ಇಲಾಖೆ ತನಿಖೆಗೆ ಆದೇಶ ನೀಡಿದೆ. ಇದಕ್ಕೆ ಸ್ಪಂದಿಸಿರುವ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, “ಯಾವುದೇ ಅವ್ಯವಹಾರ ನಡೆದಿಲ್ಲ. ಎಲ್ಲವೂ ಪಾರದರ್ಶಕವಾಗಿದೆ. ವೈಯಕ್ತಿಕ ಧ್ವೇಷ ಮತ್ತು ಹಗೆತನದಿಂದಲೇ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ. ಯಾವುದೇ ತನಿಖೆಗೆ ಅಥವಾ ವಿಚಾರಣೆಗೆ ನಾನು ಸಿದ್ಧನಿದ್ದೇನೆ” ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೂ ತಿಳಿಸಿದ್ದಾರೆ.

ಎಸ್. ಜಿ. ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ಜಯಪ್ರಕಾಶ್ ಗೌಡ ಮತ್ತು ವಸುಂಧರಾ ಭೂಪತಿ ಸೇರಿದಂತೆ ಹಲವರು ಮಹೇಶ್ ಜೋಶಿ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜೋಶಿ, “ಇವರು ನನ್ನ ಮೇಲೆ ವೈಯಕ್ತಿಕ ಧ್ವೇಷ ಹೊಂದಿದ್ದಾರೆ. ಚುನಾವಣೆ ಸಮಯದಲ್ಲಿ ಮತ ಹಾಕದಂತೆ ತಡೆಯಲಾಗಿತ್ತು ಎಂಬ ಕಾರಣದಿಂದಾಗಿ ಈ ಆರೋಪಗಳು ಕೇಳಿಬರುತ್ತಿವೆ. ತನಿಖೆಯ ಬಗ್ಗೆ ನನಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ತನಿಖೆಗೆ ನಾನು ಪೂರ್ಣವಾಗಿ ಸಿದ್ಧನಿದ್ದೇನೆ,” ಎಂದು ಹೇಳಿದ್ದಾರೆ.

ಅವರ ಪ್ರಕಾರ, ಎಲ್ಲಾ ಅನುದಾನಗಳ ಬಳಕೆ ಸರ್ವಾನುಮತದ ಒಪ್ಪಿಗೆಯಿಂದ ನಡೆದಿದ್ದು, ಯಾವುದೇ ಅನುಮಾನ ಇಲ್ಲ. ವಿದೇಶ ಪ್ರಯಾಣಗಳ ವಿಷಯದಲ್ಲೂ ಎಲ್ಲಾ ದಾಖಲೆಗಳು ಲಭ್ಯವಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚದ ಮಾಹಿತಿ ನೀಡುವುದು ಪರಿಷತ್ತಿನ ಅಧ್ಯಕ್ಷರ ಹೊಣೆಗಾರಿಕೆ ಅಲ್ಲ ಎಂದು ಜೋಶಿ ತಿಳಿಸಿದರು. “ಆ ಖರ್ಚಿನ ಲೆಕ್ಕಾಚಾರವನ್ನು ಆಯಾ ಜಿಲ್ಲಾಡಳಿತವೇ ನೀಡಬೇಕು” ಎಂದಿದ್ದಾರೆ.

ಮುಂದಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಭಾನು ಮುಸ್ತಾಕ್ ಅವರನ್ನು ಆಯ್ಕೆ ಮಾಡಿರುವುದರ ಕುರಿತು, “ಇದು ಯಾವುದೇ ಹಗರಣ ಮುಚ್ಚುವಿಕೆಗೆ ಸಂಬಂಧಪಟ್ಟುದಲ್ಲ. ಕಾರ್ಯಕಾರಿ ಸಮಿತಿಯ ನಿರ್ಣಯದಂತೆ ಮುಂಚಿತವಾಗಿ ಭಾನು ಮುಸ್ತಾಕ್ ಅವರನ್ನು ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ. ಮುಂಚಿತ ಆಯ್ಕೆ ಮಾಡಬಾರದು ಎಂಬ ನಿಯಮ ಸಾಹಿತ್ಯ ಪರಿಷತ್ತಿನ ಕಾಯ್ದೆಯಲ್ಲಿ ಇಲ್ಲ. ಮಹಿಳೆಯನ್ನೇ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ನಿರ್ಣಯ ಪರಿಷತ್ತಿನದು. ಮುಂದಿನ ವರ್ಷವೂ ನಾಲ್ಕೈದು ತಿಂಗಳು ಮುಂಚಿತವಾಗಿ ಅಧ್ಯಕ್ಷರ ಆಯ್ಕೆಗೆ ಅವಕಾಶವಿದೆ, ಕಾಮಾಲೆ ಕಾಣೋದೆಲ್ಲ ಹಳದಿ ಅಲ್ಲ. ನೋಡುವ ದೃಷ್ಟಿಕೋನ ಸರಿಯಾಗಿರಬೇಕು,” ಎಂದು ಮಹೇಶ್ ಜೋಶಿ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳ ಹಿನ್ನೆಲೆ ಕರ್ನಾಟಕ ಸರ್ಕಾರವು ಹಣಕಾಸಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದು, 2022-23ನೇ ಸಾಲಿನ ಹಣಕಾಸಿನ ವ್ಯವಹಾರಗಳ ಬಗ್ಗೆ ತನಿಖೆ ನಡೆಯುತ್ತಿದೆ. ಉಪ-ಕಾನೂನು ತಿದ್ದುಪಡಿ, ಪದಾಧಿಕಾರಿಗಳಿಗೆ ನೋಟಿಸ್, ಅನುದಾನದ ದುರುಪಯೋಗ, ವಾಹನಗಳ ಖರೀದಿ ಮತ್ತು ಮಾರಾಟದಲ್ಲಿ ಅವ್ಯವಹಾರ, ಸಿಸಿಟಿವಿ ಅಳವಡಿಕೆ ಮತ್ತು ಇತರ ಲೋಪದೋಷಗಳು, ಅಧ್ಯಕ್ಷರ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಹಣ ದುರುಪಯೋಗ ಮುಂತಾದ ಆರೋಪಗಳಿವೆ. ಏನೆಲ್ಲಾ ವ್ಯವಹಾರವಾಗಿದೆ. ಎಷ್ಟು ಹಣ ಅವ್ಯವಹಾರ ನಡೆದಿದೆ ಎಂಬುದು ತನಿಖೆಯಿಂದ ತಿಳಿದುಬರಲಿದೆ. 45 ದಿನಗಳಲ್ಲಿ ವರದಿ ನೀಡುವಂತೆ ಸರ್ಕಾರ ಹೇಳಿದೆ.