ಬೆಂಗಳೂರು (ಅ.30):  ರಾಜ್ಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳ ಆರಂಭಕ್ಕೆ ಈಗಾಗಲೇ ನ.17ರ ದಿನಾಂಕ ನಿಗದಿಪಡಿಸಿರುವ ರಾಜ್ಯ ಸರ್ಕಾರ, ಈಗ ಶಾಲೆಗಳನ್ನು ಆರಂಭಿಸುವ ಕುರಿತು ಶಿಕ್ಷಣ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳೊಂದಿಗೆ ಚರ್ಚಿಸಲು ಮುಂದಾಗಿದೆ.

ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಮಾಣ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಶಾಲೆಗಳನ್ನು ಆರಂಭಿಸುವ ಬಗ್ಗೆ ಚರ್ಚೆ ಆರಂಭಿಸಿದೆ. ನ.17ರಿಂದ ಕಾಲೇಜುಗಳನ್ನು ಆರಂಭಿಸಿ ಕೆಲ ದಿನ ಇದರಿಂದ ಉಂಟಾಗುವ ಪರಿಣಾಮಗಳನ್ನು ನೋಡಿಕೊಂಡು ನವೆಂಬರ್‌ ಮಾಸಾಂತ್ಯ ಅಥವಾ ಡಿಸೆಂಬರ್‌ ವೇಳೆಗೆ ಶಾಲೆಗಳನ್ನು ಆರಂಭಿಸುವ ಚಿಂತನೆ ಸರ್ಕಾರದಲ್ಲಿದೆ ಎಂದು ಮೂಲಗಳು ತಿಳಿಸಿವೆ.

2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳನ್ನು ಆರಂಭಿಸುವ ವಿಷಯ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ನ.2ರಂದು ಇಲಾಖೆಯ ಕಲಬುರಗಿ ಮತ್ತು ಬೆಳಗಾವಿ ವಿಭಾಗದ ಅಪರ ಆಯುಕ್ತರು, ಜಿಲ್ಲಾ ಉಪನಿದೇಶಕರು (ಆಡಳಿತ), ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಏರ್ಪಡಿಸಲಾಗಿದೆ. ಈ ಎಲ್ಲ ಅಧಿಕಾರಿಗಳು ಡಯಟ್‌ ಸ್ವೀಕೃತಿ ಕೇಂದ್ರದಲ್ಲಿ ನಡೆಯುವ ಸಂವಾದದಲ್ಲಿ ತಪ್ಪದೆ ಭಾಗವಹಿಸುವಂತೆ ಆಯುಕ್ತರು ಸೂಚನೆ ನೀಡಿದ್ದಾರೆ.

ನ.17ರಿಂದ ಕಾಲೇಜು ಅರಂಭ: ಮೊದಲು ಪ್ರಾಕ್ಟಿಕಲ್‌, ಬಳಿಕ ಥಿಯರಿ ಕ್ಲಾಸ್‌ ..

ಸಂವಾದದಲ್ಲಿ ಶಾಲೆಗಳನ್ನು ಪುನಾರಂಭಿಸುವ ವಿಚಾರದ ಜೊತೆಗೆ ಜಲ ಜೀವನ್‌ ಮಿಷನ್‌ ಅಡಿ ಶಾಲೆಗಳಿಗೆ ನೀರಿನ ಲಭ್ಯತೆ ಹಾಗೂ ಅಲಭ್ಯತೆ ಬಗ್ಗೆ ನಿಖರ ಮಾಹಿತಿ, ವಿಭಾಗ, ಜಿಲ್ಲೆ, ತಾಲ್ಲೂಕುಗಳ ಶಾಲೆಗಳಲ್ಲಿ ಹೆಚ್ಚುವರಿಯಾಗಿ ಶೌಚಾಲಯ ಮತ್ತು ನೀರಿನ ವ್ಯವಸ್ಥೆಯ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸುವುದು, 2019-20ನೇ ಸಾಲಿನಲ್ಲಿ ಪ್ರವಾಹದಿಂದ ಹಾನಿಗೊಳಗಾದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಕೊಠಡಿಗಳ ಮರು ನಿರ್ಮಾಣ ಕಾಮಗಾರಿಗಾಗಿ ಈಗಾಗಲೇ ಹಣ ಬಿಡುಗಡೆ ಮಾಡಿದ್ದು ಇದರ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ಸಲ್ಲಿಸುವುದು. ಪ್ರಸ್ತುತ 2020-21ನೇ ಸಾಲಿನಲ್ಲಿ ಅತಿವೃಷ್ಠಿ ಹಾಗೂ ಪ್ರವಾಹದಿಂದ ಹಾನಿಗೊಳಗಾದ ಶಾಲಾ ಕೊಠಡಿಗಳ ದುರಸ್ತಿ ಹಾಗೂ ಮರು ನಿರ್ಮಾಣ ಮಾಡಬೇಕಾದ ಶಾಲೆಗಳ ಪಟ್ಟಿಸಲ್ಲಿಸುವುದು ಸೇರಿದಂತೆ ಹಲವು ವಿಷಯಗಳ ಮಾಹಿತಿ ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.