ನ.17ರಿಂದ ಕಾಲೇಜು ಅರಂಭ: ಮೊದಲು ಪ್ರಾಕ್ಟಿಕಲ್, ಬಳಿಕ ಥಿಯರಿ ಕ್ಲಾಸ್
ಕಾಲೇಜು ಆರಂಭಕ್ಕೆ ಪ್ರಾಯೋಗಿಕ ತರಗತಿಗಳ ‘ಪ್ರಯೋಗ’| ನ.17ರಿಂದ ಕಾಲೇಜು ಆರಂಭಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಸಿದ್ಧತೆ| ವಾಸ್ತವಾಂಶ ತಿಳಿದ ಬಳಿಕ ಥಿಯರಿ ತರಗತಿ ಶುರು|
ಎನ್.ಎಲ್.ಶಿವಮಾದು
ಬೆಂಗಳೂರು(ಅ.30): ರಾಜ್ಯದಲ್ಲಿ ನ.17ರಿಂದ ಕಾಲೇಜುಗಳನ್ನು ಆರಂಭಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿರುವ ಬೆನ್ನಲ್ಲೇ ಬೆಂಗಳೂರು ವಿಶ್ವವಿದ್ಯಾಲಯ ತರಗತಿಗಳನ್ನು ಆರಂಭಿಸಲು ಸಿದ್ಧತೆ ನಡೆಸುತ್ತಿದ್ದು, ಆರಂಭದಲ್ಲಿ ವಿಜ್ಞಾನ ವಿಷಯದ ಪ್ರಾಯೋಗಿಕ ತರಗತಿಗಳನ್ನು ಆರಂಭಿಸಿ ನಂತರದ ಬೆಳವಣಿಗೆ ಗಮನಿಸಿ ಥಿಯರಿ ತರಗತಿಗಳನ್ನು ನಡೆಸಲು ಚಿಂತನೆ ನಡೆಸಿದೆ.
ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಜ್ಞಾನ ವಿಷಯದ ಪ್ರಾಯೋಗಿಕ ತರಗತಿಗಳಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸುಲಭ. ಅಲ್ಲದೆ, ಪ್ರಾಯೋಗಿಕ ತರಗತಿಗಳನ್ನು ನಡೆಸುವುದರಿಂದ ಸೋಂಕು ನಿವಾರಣೆ ಅಥವಾ ಹರಡುವಿಕೆ ಬಗ್ಗೆ ವಾಸ್ತವಾಂಶ ತಿಳಿಯಲು ಸಹಕಾರಿಯಾಗಲಿದೆ. ಇದನ್ನು ಆಧರಿಸಿ ಥಿಯರಿ ತರಗತಿಗಳನ್ನು ಪ್ರಾರಂಭಿಸಲು ಬೆಂಗಳೂರು ವಿವಿ ಉದ್ದೇಶವಾಗಿದೆ.
ಥಿಯರಿ ತರಗತಿಗಳನ್ನು ಆನ್‌ಲೈನ್ ಮೂಲಕವೂ ನಡೆಸಬಹುದು. ಆದರೆ, ಪ್ರಾಯೋಗಿಕ ತರಗತಿಗಳನ್ನು ಆನ್‌ಲೈನ್ ಮೂಲಕ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಮೊದಲಿಗೆ ಪ್ರಾಯೋಗಿಕ ತರಗತಿಗಳೇ ಪ್ರಯೋಗಕ್ಕೆ ಉತ್ತಮ ದಾರಿ ಎನ್ನುತ್ತಾರೆ ಬೆಂಗಳೂರು ವಿವಿ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್.
ವಿವಿ ತಯಾರಿ:
ನ.17ರಿಂದ ತರಗತಿಗಳನ್ನು ಪಾಳಿ ಪದ್ಧತಿ ಹಾಗೂ ದಿನ ಬಿಟ್ಟು ದಿನ ಥಿಯರಿ ತರಗತಿಗಳನ್ನು ನಡೆಸುವುದಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಈಗಾಗಲೇ ಆನ್‌ಲೈನ್ ತರಗತಿಗಳನ್ನು ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳು ಆಫ್‌ಲೈನ್ ಮತ್ತು ಆನ್‌ಲೈನ್ ಯಾವುದಾದರೂ ಆಯ್ಕೆ ಮಾಡಿಕೊಳ್ಳಬಹುದು. ಕಡಿಮೆ ವಿದ್ಯಾರ್ಥಿಗಳಿರುವ ಕಾಲೇಜುಗಳಲ್ಲಿ ಸಮಸ್ಯೆಯಾಗುವುದಿಲ್ಲ. ಹೆಚ್ಚಿನ ವಿದ್ಯಾರ್ಥಿಗಳು ಇರುವ ಕಡೆ ಸಾಮಾಜಿಕ ಅಂತರ ಕಾಯ್ದುಕೊಂಡು ತರಗತಿಗಳನ್ನು ನಡೆಸುವುದು ಕಷ್ಟವಾಗುವುದರಿಂದ ಮೊದಲಿಗೆ ಪ್ರಾಯೋಗಿಕ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸೋಂಕು ಹೆಚ್ಚಿದರೆ ಲೆಕ್ಕಾಚಾರ ಉಲ್ಟಾ!
ಚಳಿಗಾಲ ಇರುವುದರಿಂದ ಸೋಂಕು ಹೆಚ್ಚಳವಾದರೆ, ನಮ್ಮೆಲ್ಲ ಲೆಕ್ಕಾಚಾರಗಳು ತಲೆಕೆಳಗಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಮೊದಲಿಗೆ ಪ್ರಾಯೋಗಿಕ ತರಗತಿಗಳಲ್ಲಿ ಯಾವ ರೀತಿಯ ಸ್ಪಂದನೆ ಮತ್ತು ಪರಿಣಾಮ ಬೀರುತ್ತದೆ ಎಂಬುದನ್ನು ಕಾಯ್ದು ನೋಡುತ್ತೇವೆ. ಯಾವುದೇ ಪರಿಣಾಮ ಎದುರಾಗಿಲ್ಲವೆಂದರೆ, ಹಂತ ಹಂತವಾಗಿ ತರಗತಿಗಳನ್ನು ನಡೆಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ
ಬರುವ ಜನವರಿಗೆ ಲಸಿಕೆ ಸಿಗಬಹುದು ಎಂಬ ನಿರೀಕ್ಷೆ ಇರುವುದರಿಂದ ಮತ್ತು ಚಳಿಗಾಲ ಮುಗಿಯುತ್ತಿದ್ದಂತೆ ಕಾಲೇಜುಗಳಿಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಬಹುದು ಎಂಬ ನಿರೀಕ್ಷೆ ಹೊಂದಿದ್ದೇವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಆರಂಭದಲ್ಲಿ ಪ್ರಾಯೋಗಿಕ ತರಗತಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ನಂತರ ಥಿಯರಿ ತರಗತಿಗಳನ್ನು ನಡೆಸಲಾಗುತ್ತದೆ. ಥಿಯರಿ ತರಗತಿಗಳನ್ನು ಆನ್‌ಲೈನ್ ಮೂಲಕವೂ ನಡೆಸಬಹುದು ಎಂದು ಬೆಂ.ವಿವಿ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ತಿಳಿಸಿದ್ದಾರೆ.