ವಿಸಿ ಇಲ್ಲದೇ ಅನಾಥವಾದ ಬೆಂ. ಉತ್ತರ ವಿವಿ : ಅರ್ಜಿ ಆಹ್ವಾನಿಸಿ ಸುಮ್ಮನಾದ ಸರ್ಕಾರ
- ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಇದೀಗ ಅಕ್ಷರಃ ನಾವಿಕ ನಿಲ್ಲದ ದೋಣಿಯಂತೆ
- ವಿಶ್ವ ವಿದ್ಯಾಲಯ ಮುನ್ನೆಡೆಸಲು ಕುಲಪತಿ ನೇಮಕ ಆಗದೆ ಅನಾಥ
ವರದಿ : ಕಾಗತಿ ನಾಗರಾಜಪ್ಪ
ಚಿಕ್ಕಬಳ್ಳಾಪುರ (ಸೆ.25): ಬೆಂಗಳೂರು ವಿಶ್ವ ವಿದ್ಯಾಲಯವನ್ನು (bengaluru University) ವಿಭಜಿಸಿದ ಬಳಿಕ ಅವಿಭಜಿತ ಕೋಲಾರ (Kolar) ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಕೇಂದ್ರೀಕರಿಸಿ ಅಸ್ತಿತ್ವಕ್ಕೆ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಇದೀಗ ಅಕ್ಷರಃ ನಾವಿಕ ನಿಲ್ಲದ ದೋಣಿಯಂತೆ ಆಗಿ ವಿವಿಯನ್ನು ಮುನ್ನೆಡೆಸಲು ಕುಲಪತಿ (vice chancellor) ಇಲ್ಲದೇ ಅನಾಥವಾಗಿದೆ.
ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಕುಲಪತಿ ಡಾ.ಟಿ.ಡಿ.ಕೆಂಪರಾಜು ಸುಮಾರು ಒಂದೂವರೆ ವರ್ಷದ ಹಿಂದೆಯೆ ವಯೋ ನಿವೃತ್ತಿಯಾಗಿದ್ದರೂ ಅವರನ್ನು ಅವರ ಅಧಿಕಾರಾವಧಿಯನ್ನು ಸರ್ಕಾರ 6 ಮುಂದುವರೆಸಿತ್ತು. ಆದರೆ ವಿಸ್ತರಣಾ ಅವಧಿ ಮುಗಿದ ಕಾರಣ ಒಂದೂವರೆ ತಿಂಗಳ ಹಿಂದೆಯೆ ನಿವೃತ್ತರಾಗಿದ್ದರೂ ಇದುವರೆಗೂ ವಿವಿಗೆ ಹೊಸ ವಿಸಿ ನೇಮಕವಾಗಿಲ್ಲ.
ರಾಷ್ಟ್ರೀಯ ಶಿಕ್ಷಣ ನೀತಿ; ಕಾಂಗ್ರೆಸ್ ವಿರುದ್ಧ ಡಾ.ಅಶ್ವತ್ಥನಾರಾಯಣ ಗಂಭೀರ ಆರೋಪ
2015ರಲ್ಲಿ ಬೆಂಗಳೂರು ವಿವಿ ವಿಭಜಿಸಿ ಬೆಂಗಳೂರು ಕೇಂದ್ರ ವಿಶ್ವ ವಿದ್ಯಾಲಯ, ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಲಾಗಿತ್ತು. ಬೆಂಗಳೂರು ಉತ್ತರ ವಿವಿಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ಸುಮಾರು 300 ಕ್ಕೂ ಹೆಚ್ಚು ಕಾಲೇಜುಗಳನ್ನು ಸೇರಿಸಲಾಗಿದೆ. ಆದರೆ ಮೊದಲೇ ವಿವಿ ಕ್ಯಾಂಪಸ್ ಸೇರಿದಂತೆ ಕಾಯಂ ಬೋಧಕರ ಸಿಬ್ಬಂದಿ, ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಬೆಂಗಳೂರು ಉತ್ತರ ವಿವಿಯಲ್ಲಿ ಈಗ ವಿಸಿ ಹುದ್ದೆ ಖಾಲಿಯಾಗಿದೆ. ಎರಡು ತಿಂಗಳಾದರೂ ಸರ್ಕಾರ ಹುದ್ದೆಗೆ ಯಾರನ್ನು ನೇಮಕ ಮಾಡದಿರುವುದು ವಿವಿಯ ಶೈಕ್ಷಣಿಕ ಚಟುವಟಿಕೆಗಳ ಹಿನ್ನಡೆಗೆ ಕಾರಣವಾಗಿದೆ.
ಗೊಂದಲದ ಗೂಡು: ಬೆಂಗಳೂರು ಉತ್ತರ ವಿವಿಯ ಶೈಕ್ಷಣಿಕ ಚಟುವಟಿಕೆಗಳು ಗೊಂದಲದ ಗೂಡವಾಗಿದೆ. ಇಂದಿಗೂ 2021-22ನೇ ಸಾಲಿನ ವಾರ್ಷಿಕವಾದ ಶೈಕ್ಷಣಿಕ ಪರೀಕ್ಷೆ (Exam), ದಸರಾ ರಜೆ, ಸೆಮಿಸ್ಟರ್ ಪರೀಕ್ಷೆ, ಫಲಿತಾಂಶ ಪ್ರಕಟಿಸುವುದು, ಕ್ರೀಡಾಕೂಟ, ಸಾಂಸ್ಕೃತಿಕ ಚಟುವಿಕೆ ಹೀಗೆ ಸಮಗ್ರವಾದ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಸ್ಪಷ್ಟಕ್ರಿಯಾ ಯೋಜನೆ ರೂಪಿಸಿಲ್ಲ ಎಂಬ ಆರೋಪವಿದೆ. ಜೊತೆಗೆ ರಾಜ್ಯ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಸೂಚಿಸಿದ್ದು ಅಕ್ಟೋಬರ್ 1ರಿಂದ ಹೊಸ ಪಠ್ಯ ಬೋಧನೆ ಕಡ್ಡಾಯಗೊಳಿಸಲಾಗಿದೆ. ಆದರೆ ಇದಕ್ಕೆ ಪೂರಕ ತಯಾರಿ ಸೇರಿದಂತೆ ಇಡೀ ವಿವಿ ವ್ಯಾಪ್ತಿಯ ಸರ್ಕಾರಿ ಕಾಲೇಜುಗಳ ಬಲರ್ವಧನೆ ಸೇರಿದಂತೆ ವಿವಿಯನ್ನು ಮುನ್ನಡೆಸುವ ಬಹದೊಡ್ಡ ಜವಾಬ್ದಾರಿ ಇರುವ ಕಲಪತಿ ಹುದ್ದೆ ಭರ್ತಿಯಾಗಿಲ್ಲ. ಜಿಲ್ಲೆಯ ಅಮರಾವತಿ ಬಳಿ ವಿವಿ ಕ್ಯಾಂಪಸ್ ನಿರ್ಮಾಣಕ್ಕೆ ಭೂ ಸ್ವಾಧೀನ ಸೇರಿದಂತೆ ಹೊಸ ಕಟ್ಟಡ ನಿರ್ಮಾಣ ಕಾರ್ಯ ಕೂಡ ವಿಸಿ ಇಲ್ಲದೇ ಹೊಸ ಕ್ಯಾಂಪಸ್ ನಿರ್ಮಾಣಕ್ಕೆ ಗ್ರಹಣ ಬಡಿದಿದೆ.
ಧಾರವಾಡ: ಪದವಿ ಪ್ರಮಾಣ ಪತ್ರಕ್ಕಾಗಿ ಕವಿವಿ ವಿದ್ಯಾರ್ಥಿಗಳ ಪರದಾಟ..!
ಕುಲಪತಿ ಹುದ್ದೆಗೆ 30 ಅರ್ಜಿ : ಮೊದಲೇ ವಿವಿ ಸಿಂಡಿಕೇಟ್‌ಗೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ನುರಿತ ಕಾಲೇಜು ಪ್ರಾಂಶುಪಾಲರನ್ನು ನೇಮಿಸಿಲ್ಲ ಎಂಬ ಆರೋಪ ಇದೆ. ಜೊತೆಗೆ ವಿವಿ ವ್ಯಾಪ್ತಿಯ ಹೊರಗಿನ ವ್ಯಕ್ತಿಗಳಿಗೆ ಹೆಚ್ಚು ಮಣೆ ಹಾಕಲಾಗಿದೆಯೆಂಬ ಟೀಕೆ ಇದೆ. ಇದರ ನಡುವೆ ಬೆಂಗಳೂರು ಉತ್ತರ ವಿವಿ ಕುಲಪತಿ ಹುದ್ದೆಗೆ ಸರ್ಕಾರ ಇತ್ತೀಚೆಗೆ ಸಾರ್ವಜನಿಕ ಪ್ರಟಕಣೆ ನೀಡಿ ಅರ್ಜಿ ಆಹ್ವಾನಿಸಿದೆ. ಆದರೆ ಇದುವರೆಗೂ ಯಾರನ್ನು ನೇಮಕ ಮಾಡಿಲ್ಲ. ವಿವಿ ನೇಮಕಕ್ಕೆ ಪ್ರಕಟಣೆ ಹೊರ ಬಿದ್ದ ಬಳಿಕ 30ಕ್ಕೂ ಹೆಚ್ಚು ಮಂದಿ ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅರ್ಹರನ್ನು ನೇಮಕ ಮಾಡುವ ದಿಸೆಯಲ್ಲಿ ಸರ್ಕಾರ ವಿಳಂಬ ಮಾಡುತ್ತಿರುವುದು ಜಿಲ್ಲೆಯ ಶಿಕ್ಷಣ ಪ್ರೇಮಿಗಳ ಆಕ್ರೋಶಕ್ಕೆ ಗುರಿಯಾಗಿದೆ.