ಬೆಂಗಳೂರು (ಫೆ.14):  ಖಾಸಗಿ ಶಾಲಾ ಶುಲ್ಕ ಕಡಿತಗೊಳಿಸಿ ಹೊರಡಿಸಿರುವ ಆದೇಶವನ್ನು ಯಾವುದೇ ಕಾರಣಕ್ಕೂ ವಾಪಸ್‌ ಪಡೆಯಬಾರದು. ಆದೇಶ ಪಾಲಿಸದ ಶಾಲೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಖಾಸಗಿ ಶಾಲಾ ಪೋಷಕರ ಸಂಘಟನೆಗಳ ಸಮನ್ವಯ ವೇದಿಕೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸದಸ್ಯ ಬಿ.ಎನ್‌.ಯೋಗಾನಂದ ಅವರು, ರಾಜ್ಯ ಸರ್ಕಾರ ಖಾಸಗಿ ಶಾಲೆಗಳಲ್ಲಿನ ಪ್ರಸಕ್ತ ಸಾಲಿನ ಬೋಧನಾ ಶುಲ್ಕವನ್ನು ಶೇ.30ರಷ್ಟುಕಡಿತಗೊಳಿಸಿ ಆದೇಶ ಹೊರಡಿಸಿದೆ. ಆದರೆ, ಇದು ಇನ್ನೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಕೆಲ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಶುಲ್ಕ ಕಟ್ಟುವಂತೆ ಪೋಷಕರನ್ನು ಮತ್ತೆ ಪೀಡಿಸುತ್ತಿದ್ದಾರೆ. ತಮಗೆ ಸರ್ಕಾರದ ಆದೇಶವೇ ಬಂದಿಲ್ಲ ಎಂದು ಹೇಳಿ ಉದ್ಧಟತನ ತೋರುತ್ತಿದ್ದಾರೆ ಆರೋಪಿಸಿದರು.

ಬಾಗಿಲು ತೆರೆಯದ ಶಾಲೆ ಐಸ್‌ಕ್ಯಾಂಡಿ ಮಾರಾಟ​ಕ್ಕಿ​ಳಿದ ಮಕ್ಕ​ಳು..! ...

ಕೆಲ ಖಾಸಗಿ ಶಾಲಾ ಸಂಘಟನೆಗಳು ಆದೇಶ ವಾಪಸ್‌ ಪಡೆಯದಿದ್ದರೆ ಪ್ರತಿಭಟಿಸುವುದಾಗಿ ಹೇಳುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಿವೆ. ಸರ್ಕಾರ ಯಾವುದೇ ಕಾರಣಕ್ಕೂ ಇದಕ್ಕೆ ಮಣಿಯಬಾರದು. ಆರ್ಥಿಕ ಸಂಕಷ್ಟದಲ್ಲಿರುವ ಲಕ್ಷಾಂತರ ಪೋಷಕರಿಗೆ ಸರ್ಕಾರದ ನಿರ್ಧಾರದಿಂದ ಅನುಕೂಲವಾಗಿದೆ. ಸರ್ಕಾರ ಆದೇಶ ವಾಪಸ್‌ ಪಡೆದರೆ ಪೋಷಕರು ಮತ್ತೆ ಬೀದಿಗಿಳಿಯಬೇಕಾಗುತ್ತದೆ ಎಂದು ಹೇಳಿದರು.