ಬಾಗಿಲು ತೆರೆಯದ ಶಾಲೆ ಐಸ್‌ಕ್ಯಾಂಡಿ ಮಾರಾಟಕ್ಕಿಳಿದ ಮಕ್ಕಳು..!
ಮಕ್ಕಳು ಬಾಲ ಕಾರ್ಮಿಕರಾಗುತ್ತಿರುವುದು ಶಿಕ್ಷಣ ತಜ್ಞರ ಆತಂಕಕ್ಕೆ ಕಾರಣ| ಒಂದು ಐಸ್ ಮಾರಾಟದಿಂದ 2 ರಿಂದ 3 ಉಳಿತಾಯ| ದಿನಕ್ಕೆ 100ರಿಂದ 200 ಸಂಪಾದನೆ| ತರಗತಿ ಆರಂಭಿಸಲು ಸರ್ಕಾರಕ್ಕೆ ಶಿಕ್ಷಣ ತಜ್ಞರ ಆಗ್ರಹ|
ಹೂವಿನಹಡಗಲಿ(ಫೆ.13): ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಈ ವರೆಗೂ 1ರಿಂದ 5 ತರಗತಿ ವರೆಗಿನ ಶಾಲೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡದ ಕಾರಣ ಬಾಲಕರು ಐಸ್‌ಕ್ಯಾಂಡಿ ಮಾರಾಟ ಸೇರಿದಂತೆ ಸಣ್ಣ ಪುಟ್ಟ ಕೆಲಸಕ್ಕೆ ತೊಡಗಿಕೊಂಡಿರುವುದು, ಬಾಲ ಕಾರ್ಮಿಕರಾಗುತ್ತಿರುವುದು ಶಿಕ್ಷಣ ತಜ್ಞರ ಆತಂಕಕ್ಕೆ ಕಾರಣವಾಗಿದೆ.
ಶಾಲೆಗಳು ಬಾಗಿಲು ಮುಚ್ಚಿ ವರ್ಷ ಕಳೆಯುತ್ತಾ ಬಂದರೂ ಈ ವರೆಗೂ ಬಾಗಿಲು ತೆರೆದಿಲ್ಲ. ಈ ಹಿನ್ನೆಲೆ ಗ್ರಾಮೀಣ ಪ್ರದೇಶ ಹಾಗೂ ಪಟ್ಟಣ ಪ್ರದೇಶದಲ್ಲಿ ಶಾಲಾ ವಿದ್ಯಾರ್ಥಿಗಳು ಐಸ್‌ಕ್ಯಾಂಡಿ ಮಾರಾಟ ಸೇರಿದಂತೆ ಸಣ್ಣ ಪುಟ್ಟಕೆಲಸದಲ್ಲಿ ತೊಡಗಿ ಪಾಲಕರಿಗೆ ನೆರವಾಗುವ ಜತೆಗೆ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಹಣ ಕ್ರೋಡೀಕರಿಸಿಕೊಳ್ಳುತ್ತಿದ್ದಾರೆ. ಇದನ್ನು ಕಂಡು ಆತಂಕ ವ್ಯಕ್ತಪಡಿಸಿರುವ ಶಿಕ್ಷಣ ತಜ್ಞರು, ಶೀಘ್ರ 1ರಿಂದ ಎಲ್ಲ ಶಾಲಾ ತರಗತಿ ಆರಂಭಿಸಬೇಕು. ಇಲ್ಲದಿದ್ದರೆ ಅವರ ವಿದ್ಯಾಭ್ಯಾಸಕ್ಕೆ ಮಾರಕವಾಗಲಿದೆ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
11 ತಿಂಗಳಿಂದ ಶಾಲೆ ಬಂದ್:
ಕಳೆದ ವರ್ಷ ಮಾಚ್‌ರ್ ಮೊದಲ ವಾರವೇ ಶಾಲಾ ತರಗತಿಯನ್ನು ಸ್ಥಗಿತಗೊಳಿಸಿರುವ ಸರ್ಕಾರ ಜನವರಿ ಬಳಿಕ ಹಂತ-ಹಂತವಾಗಿ ಆರಂಭಿಸಲು ಸಿದ್ಧತೆ ಆರಂಭಿಸಿದೆ. ಇಷ್ಟು ಸುದೀರ್ಘ ರಜೆಯಿಂದ ವಿದ್ಯಾಭ್ಯಾಸದಿಂದ ಮಕ್ಕಳು ವಿಮುಖವಾಗಿರುವುದು ಒಂದೆಡೆಯಾದರೆ, ಮನೆಯಲ್ಲಿ ಅವರ ಗಲಾಟೆ ತಡೆದುಕೊಳ್ಳಲು ಆಗದೆ ಪಾಲಕರು ಹೊಲಗಳಿಗೆ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಇನ್ನೂ ಕೆಲವರು ಐಸ್ ಕ್ಯಾಂಡಿ ಮಾರಾಟ ಸೇರಿದಂತೆ ಸಣ್ಣ ಪುಟ್ಟಕೆಲಸಗಳಿಗೆ ಕಳಿಸುತ್ತಿದ್ದಾರೆ. ಇತ್ತ ಮಕ್ಕಳು ಸಹ ಇಡೀ ದಿನ ಕೆಲಸಕ್ಕೆ ಹೋದರೆ ನಮ್ಮ ಮುಂದಿನ ವಿದ್ಯಾಭ್ಯಾಸಕ್ಕೂ ಅನುಕೂಲವಾಗಲಿದೆ ಎಂದು ಬಿಸಿಲು, ಗಾಳಿ ಎನ್ನದೆ ಬರಿಗಾಲಿನಲ್ಲಿ ಹಳ್ಳಿ, ಪಟ್ಟಣದಲ್ಲಿ ಕೆಲಸದಲ್ಲಿ ತೊಡಗಿದ್ದಾರೆ.
6 ರಿಂದ 8 ನೇ ಕ್ಲಾಸಿಗೂ ಶೀಘ್ರ ಶಾಲೆ ಆರಂಭ.?
2.50 ಲಾಭ:
ಪಟ್ಟಣದಲ್ಲಿ ಜನನೀಬಿಡ ಪ್ರದೇಶದಲ್ಲಿ ತಂಡೋಪ ತಂಡವಾಗಿ ಐಸ್‌ಕ್ಯಾಂಡಿ ಮಾರಾಟದಲ್ಲಿ ತೊಡಗಿರುವ ಮಕ್ಕಳು ಕಂಪನಿಗಳಿಂದ 2ರಿಂದ 3ಕ್ಕೆ ತಂದು ಗ್ರಾಹಕರಿಗೆ 5ಗೆ ಮಾರಾಟ ಮಾಡುತ್ತಿದ್ದಾರೆ. ಒಂದು ಐಸ್ ಮಾರಾಟದಿಂದ . 2ರಿಂದ 3 ಉಳಿತಾಯವಾಗುತ್ತದೆ. ಸೂರ್ಯನ ಕಿರಣ ಪ್ರಖರವಾಗುತ್ತಿದ್ದಂತೆ ರಸ್ತೆಗಿಳಿಯುವ ಮಕ್ಕಳ ಸಂಜೆ ನಾಲ್ಕು ಗಂಟೆ ವರೆಗೂ ಮಾರಾಟದಲ್ಲಿ ತೊಡಗುತ್ತಿದ್ದು ದಿನಕ್ಕೆ 100ರಿಂದ 200 ಸಂಪಾದಿಸುತ್ತಿದ್ದಾರೆ.
ನೋಡ್ರೀ ಸರ್. ಇನ್ನೂ ನಮ್ಮ ಶಾಲಿ ತೆಗದಿಲ್ರೀ. ಮನ್ಯಾಗ್ ಕೂತ್ ಸಾಕಾಗೈತಿ. ಆಟ್ ಆಡೋಕ್ ಹೋದರ್ ಮನ್ಯಾಗ್ ಬೈಯ್ತಾರ. ಅದಕ್ ನಾವ್ ಐಸ್ ಮಾರತಿದ್ದೀವಿ. ಇದರಿಂದ ನಮಗ್ ಎರಡ್ಮೂರ್ ರುಪಾಯಿ ಲಾಭ ಸಿಗುತ್. ಶಾಲಿ ಬಾಗಿಲ್ ತಗದರ್ ನಾವು ಶಾಲಿಗೆ ಹೋಗ್ತೀವಿ ಎಂದು ಐಸ್ ಕ್ಯಾಂಡಿ ಮಾರುವ ಮಕ್ಕಳು ಹೇಳುತ್ತಾರೆ.