4-5ನೇ ತರಗತಿ ಲೆಸ್ ಹೋಂವರ್ಕ್, ಮೇ 3ನೇ ವಾರದೊಳಗೆ SSLC Result
ವಿದ್ಯಾರ್ಥಿಗಳಿಗೆ ಹೋಂವರ್ಕ್'ನ್ನು ಕಡಿಮೆ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಮೇ ಎರಡನೇ ಅಥವಾ ಮೂರನೇ ವಾರದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬರಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಬೆಂಗಳೂರು(ಮೇ.6): ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪ್ರಕಾರ 4 ಮತ್ತು 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಹೋಂವರ್ಕ್'ನ್ನು ಕಡಿಮೆ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಗುರುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 3ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಯಾವುದೇ ಹೋಂವರ್ಕ್'ನ್ನು ಸರ್ಕಾರ ಅನುಮತಿಸುವುದಿಲ್ಲ, ಆದರೆ, 4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳಿಗೆ ಹೋಂವರ್ಕ್ ಕಡಿಮೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ ಮೇ ಎರಡನೇ ಅಥವಾ ಮೂರನೇ ವಾರದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ( SSLC Result) ಬರಲಿದೆ ಎಂದು ತಿಳಿಸಿದ್ದಾರೆ.
ಸ್ಟಾಕ್ ಹೋಲ್ಡರ್ಸ್ ಗಳು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶಾಲಾಸಮವಸ್ತ್ರಕ್ಕೆ ವಿಧಿಸುತ್ತಿರುವ ವೆಚ್ಚ ಭಾರೀ ಮೊತ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಸಮವಸ್ತ್ರಕ್ಕೆ ಮರು ಟೆಂಡರ್ ಕರೆಯಲಾಗುತ್ತದೆ ಎಂದಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗ ಪರಿಸ್ಥಿತಿಯಿಂದಾಗಿ ಉಳಿದಿರುವ ಸ್ಟಾಕ್ ಗಳನ್ನು ಕಡಿಮೆ ಬೆಲೆಗೆ ನೀಡಲು ಬಯಸಿದ್ದರು. ಆದರೆ, ಇದೀಗ ಡೀಸೆಲ್ ದರ ಹೆಚ್ಚಳದಿಂದ ಸಾರಿಗೆ ವೆಚ್ಚ ಹೆಚ್ಚಾಗಿದ್ದು, ಇದನ್ನು ಪರಿಗಣಿಸಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಸಮವಸ್ತ್ರ ಸಂಬಂಧ ಇರುವ ಟೆಂಡರ್ ಪ್ರಕ್ರಿಯೆಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುತ್ತದೆ ಎಂದು ನಾಗೇಶ್ ಅವರು ತಿಳಿಸಿದ್ದಾರೆ.
BBMP ನೂತನ ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ ಅಧಿಕಾರ ಸ್ವೀಕಾರ
ನಿಗದಿಯಂತೆ ಮೇ 16ರಂದು ಶಾಲೆಗಳು ಆರಂಭ: ಶಾಲೆಗಳಿಗೆ ಬೇಸಿಗೆ ರಜೆ ವಿಸ್ತರಣೆ ಮಾಡುವ ಸಾಧ್ಯತೆ ಎನ್ನುವ ಸುದ್ದಿಗೆ ಶಿಕ್ಷಣ ಇಲಾಖೆ ಮಹತ್ವದ ಮಾಹಿತಿ ನೀಡಿದ್ದು, ಎಲ್ಲಾ ಗೊಂದಲಗಿಳಿಗೆ ತೆರೆ ಎಳೆದಿದೆ. ನಿಗದಿಯಂತೆ ಮೇ 16ರಂದು ಶಾಲೆಗಳು ಆರಂಭವಾಗಲಿದೆ ಎಂದು ನಾಗೇಶ್ ಹೇಳಿದ್ದಾರೆ. ನಿಗದಿತ ದಿನಾಂಕದಂದೇ ಶಾಲೆ ಆರಂಭವಾಗಲಿದ್ದು, ಕಳೆದ ಎರಡು ವರ್ಷಗಳಿಂದ ಮಕ್ಕಳು ಶಾಲೆಗಳಿಂದ ಹೊರಗುಳಿದಿದ್ದಾರೆ. ಹೀಗಾಗಿ 15 ದಿನ ಮೊದಲೇ ಕಲಿಕಾ ಚೇತರಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಬಿಸಿಲ ತಾಪಮಾನ ಹೆಚ್ಚಾಗಿರುವುದರಿಂದ ಜೂನ್ 15ರವರೆಗೆ ರಜೆ ವಿಸ್ತರಿಸಬೇಕು ಎಂದು ಕೆಲವು ವಿಧಾನಪರಿಷತ್ ಸದಸ್ಯರು ಪತ್ರ ಬರೆದಿದ್ದರು. ಇದಕ್ಕೆ ಶಾಲಾ ಸಿಬ್ಬಂದಿ ಮತ್ತು ಶಿಕ್ಷಣ ತಜ್ಞರು ವಿರೋಧ ವ್ಯಕ್ತಪಡಿಸಿದ್ದರು. ಈಗ ಶಿಕ್ಷಣ ಸಚಿವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಎರಡು ಶೈಕ್ಷಣಿಕ ವರ್ಷ ವಿದ್ಯಾರ್ಥಿಗಳ ಕೌಶಲ್ಯವನ್ನೇ ಕಸಿದುಕೊಂಡಿದೆ. ಇದರಿಂದಾಗಿ ಕಲಿಕಾ ಚೇತರಿಕೆಯ ಕಾರ್ಯಕ್ರಮದ ಮಹತ್ವವನ್ನು ಪೋಷಕರಿಗೆ ಮನವರಿಕೆ ಮಾಡಿಕೊಡುವ ಮೂಲಕ ವಿದ್ಯಾರ್ಥಿಗಳನ್ನು ಶಾಲೆಯ ಕೊಠಡಿಗಳಿಗೆ ಬರುವಂತೆ ಮಾಡುವುದು ಹಾಗೂ ಮಕ್ಕಳ ಕಲಿಕೆಯ ನ್ಯೂನ್ಯತೆಯನ್ನು ಪತ್ತೆ ಮಾಡಿ ಉತ್ತಮ ಶಿಕ್ಷಣ ನೀಡಬೇಕಾಗಿದೆ. ಹೀಗಾಗಿ ಮೇ 16ರಿಂದ ಶಾಲೆಗಳು ಪ್ರಾರಂಭವಾಗಲಿದೆ.
ಮಕ್ಕಳ ಕಲಿಕಾ ಹಂತವನ್ನು ಸರಿದೂಗಿಸಲು, ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ವರ್ಷದ ಪ್ರಕ್ರಿಯೆ ಸುಗಮವಾಗಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮ ಉಪಯೋಗಕಾರಿಯಾಗಲಿದೆ ಎಂಬುದು ಶಿಕ್ಷಣ ಇಲಾಖೆಯ ಅಭಿಪ್ರಾಯವಾಗಿದೆ.
ಮರ್ಯಾದೆಯಿಂದ ವಾಪಸ್ ಹೋಗಲೇ....PSIಗೆ ಮೂಡಿಗೆರೆ ಶಾಸಕನ ಅವಾಜ್!
ಕಲಿಕಾ ಚೇತರಿಕೆಯ ಉದ್ದೇಶ ಮತ್ತು ಗುರಿಗಳು: ವಿದ್ಯಾರ್ಥಿಗಳ ಬೇಸಿಕ್ ಶಿಕ್ಷಣ, ಸಂಖ್ಯಾಜ್ಞಾನದ ಜೊತೆಗೆ ಕಳೆದ ಎರಡು ವರ್ಷಗಳಲ್ಲಿ ಉಂಟಾಗಿರುವ ಕಲಿಕಾ ನ್ಯೂನ್ಯತೆಯನ್ನು ಸರಿಪಡಿಸಿಕೊಂಡು ಈ ಶೈಕ್ಷಣಿಕ ವರ್ಷಕ್ಕೂ ಯಾವುದೇ ತೊಂದರೆಯಾಗದಂತೆ ಕ್ರಮವಹಿಸುವುದು ಕಲಿಕಾ ಚೇತರಿಕೆಯ ಮೂಲ ಉದ್ದೇಶವಾಗಿದೆ.
ವಿದ್ಯಾರ್ಥಿಗಳಿಗೆ ಬುನಾದಿ ಶಿಕ್ಷಣದ ಜೊತೆಗೆ ಸಂಖ್ಯಾ ಜ್ಞಾನವನ್ನು ವೃದ್ದಿಸಿ ಕಲಿಕೆಗೆ ಬೇಕಾಗಿರುವ ಕಲಿಕಾ ಸಾಮಗ್ರಿಗಳನ್ನು ತಯಾರಿಸಿಕೊಂಡು ಕಲಿಕಾ ಫಲಗಳು ಈಡೇರುವಂತೆ ಮಾಡುವುದಾಗಿದೆ.
ರಾಷ್ಟೀಯ ಶಿಕ್ಷಣ ನೀತಿ 2020- ಆಶಯದಂತೆ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನವನ್ನು ಬೆಳೆಸುವುದು, 2022-23ರ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಘೋಷಿಸುವುದು, ರಾಜ್ಯಾದ್ಯಂತ ಏಕರೂಪದ ಶಿಕ್ಷಣ ವ್ಯವಸ್ಥೆಯನ್ನು ನಿಶ್ಚಿತಗೊಳಿಸುವುದು, ಎಲ್ಲಾ ವಿದ್ಯಾರ್ಥಿಗಳ ಭಾವನಾತ್ಮಕ ಅಗತ್ಯತೆಗಳ ಬೆಂಬಲವಾಗಿ ಕಲಿಕಾ ಪ್ರಕ್ರಿಯೆಗೆ ಪೂರಕವಾಗಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವುದು, ಎಲ್ಲಾ ವಿದ್ಯಾರ್ಥಿಗಳ ಬುನಾದಿ ಶಿಕ್ಷಣ, ಸಂಖ್ಯಾಜ್ಞಾನ, ಎರಡು ವರ್ಷಗಳ ಕಲಿಯಬೇಕಿದ್ದ ಕಲಿಕಾ ಕೌಶಲ್ಯ ಮತ್ತು ಈ ಶೈಕ್ಷಣಿಕ ವರ್ಷ ಹೆಚ್ಚಾಗಬೇಕಾಗಿರುವ ಕೌಶಲ್ಯದ ಬಗ್ಗೆ ಗಮನಹರಿಸುವ ಗುರಿ ಹೊಂದಲಾಗಿದೆ.