ಶಾಲೆ - ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್ ತೀರ್ಪು ಎತ್ತಿ ಹಿಡಿದಿದೆ. ಹೈಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
ಬೆಂಗಳೂರು(ಮಾ.15): ಶಾಲೆ - ಕಾಲೇಜುಗಳಲ್ಲಿ ಹಿಜಾಬ್ (Hijab) ನಿಷೇಧ ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್ (High court) ತೀರ್ಪು ಎತ್ತಿ ಹಿಡಿದಿದೆ. ಹಿಜಾಬ್ ಅನ್ನುವುದು ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಹೈಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ (B.C Nagesh) ಹೇಳಿದ್ದಾರೆ.
ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ವಿಚಾರವಾಗಿ ಕರ್ನಾಟಕ ಹೈಕೋರ್ಟ್ (Karnataka High court) ನೀಡಿರುವ ಐತಿಹಾಸಿಕ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಈ ನೆಲ ಹಾಗೂ ನೆಲದ ಕಾನೂನು ಅಂತಿಮ ಎಂದು ಹೇಳಿದ್ದಾರೆ.
ಸಮವಸ್ತ್ರ ವಿಚಾರದಲ್ಲಿ ಹೈಕೋರ್ಟ್ ಸ್ಪಷ್ಟತೆ ನೀಡಿದೆ. ಶಿಕ್ಷಣ ನೀತಿಯಲ್ಲಿ ಸಮವಸ್ತ್ರ ಕುರಿತು ಇದ್ದಂತಹ ಗೊಂದಲಗಳನ್ನು ಈ ತೀರ್ಪಿನ ಆಧಾರದ ಮೇಲೆ ತಿದ್ದುಪಡಿ ಮಾಡುವ ಮೂಲಕ ಸರಿಪಡಿಸಲಾಗುವುದು ಎಂದು ಬಿ.ಸಿ. ನಾಗೇಶ್ ಹೇಳಿದರು.
ವೈದ್ಯಕೀಯ ಕೋರ್ಸ್ ಶುಲ್ಕ ಕಡಿತಗೊಳಿಸಲು ಚಿಂತನೆ: ಡಾ.ಕೆ.ಸುಧಾಕರ್
ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕನ್ನು ಎತ್ತಿಹಿಡಿದಿದೆ-ಗೃಹ ಸಚಿವರು: ಹೆಣ್ಣುಮಕ್ಕಳಿಗೆ ಸಿಗಬೇಕಾದ ಶಿಕ್ಷಣವೆಂಬ ಮೂಲಭೂತ ಹಕ್ಕನ್ನು ಹಿಜಾಬ್ ವಿವಾದ ಕುರಿತು ಇಂದು ಹೈಕೋರ್ಟ್ ನೀಡಿರುವ ತೀರ್ಪು ಎತ್ತಿಹಿಡಿದಿದೆ.ಐತಿಹಾಸಿಕ ತೀರ್ಮಾನವನ್ನು ಹೈಕೋರ್ಟ್ ನೀಡಿದೆ. ಸರ್ಕಾರ ರೂಪಿಸಿದ ನಿಯಮದ ಪರವಾಗಿ ತೀರ್ಪು ಬಂದಿದೆ. ಹೆಣ್ಮಕ್ಕಳ ಶಿಕ್ಷಣ ಪಡೆಯುವ ಹಕ್ಕನ್ನು ಕೋರ್ಟ್ ಎತ್ತಿ ಹಿಡಿದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ನಮಗೆ ಈ ತೀರ್ಪು ಸಂತೋಷ ಕೊಟ್ಟಿದೆ. ನ್ಯಾಯಾಲಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ತೀರ್ಪನ್ನು ದೇಶ, ವಿದೇಶಗಳು ಗಮನಿಸುತ್ತಿದ್ದವು. ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಯಾವುದೇ ಧರ್ಮದ ಮತಾಂಧತೆ ಬೆಳೆಸಿಕೊಳ್ಳದೆ ಶಾಲೆಗಳಲ್ಲಿ ನಾವು ಅಣ್ಣ ತಮ್ಮಂದಿರು ಅಕ್ಕ ತಂಗಿಯರು ಹಾಗೂ ವಿಶೇಷವಾಗಿ ಭಾರತ ಮಾತೆಯ ಮಕ್ಕಳು ಎಂದು ಸಂಸ್ಕಾರದಿಂದರಬೇಕು ಎಂದು ಹೇಳಿದ್ದಾರೆ.
Karnataka Hijab Verdict ಹಿಜಾಬ್ ತೀರ್ಪಿನ ಬಗ್ಗೆ ದೇವೇಗೌಡ, ಕುಮಾರಸ್ವಾಮಿ ಅಭಿಪ್ರಾಯ
ಕುರಾನ್ ಹೇಳಿದ್ದೇ ಫೈನಲ್, ಕೋರ್ಟ್ ತೀರ್ಪು ಪಾಲಿಸಲ್ಲ, ಮತ್ತೆ ಗುಡುಗಿದ ವಿದ್ಯಾರ್ಥಿನಿಯರು: ಶಾಲಾ-ಕಾಲೇಜುಗಳಿಗೆ (Schools And Colleges)ಹಿಜಾಬ್ ಧರಿಸಿಕೊಂಡು ಹೋಗಲು ಅವಕಾಶ ಕೊಡಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದ ಉಡುಪಿ (Udupi) ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ 6 ಮುಸ್ಲಿಂ ವಿದ್ಯಾರ್ಥಿನಿಯರು (Muslim Students) ಸುದ್ದಿಗೋಷ್ಠಿ ನಡೆಸಿದ್ದು, ಅವರ ಅಭಿಪ್ರಾಯಗಳು ಈ ಕೆಳಗಿನಂತಿವೆ.
ಹಿಜಾಬ್ ಇಲ್ಲದೆ ಕಾಲೇಜಿಗೆ ಹೋಗೋದಿಲ್ಲ. ಕುರಾನ್ ಹೇಳಿದ್ದೇ ನಮಗೆ ಫೈನಲ್. ನಮ್ಮ ಹಕ್ಕು ಪಡೆಯೋವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲ ಎಂದು ವಿದ್ಯಾರ್ಥಿನಿಯರು ಸ್ಪಷ್ಟಪಡಿಸಿದರು.
ಹಿಜಾಬ್ ಪರ ಹೋರಾಟಗಾರ್ತಿ ಆಲಿಯಾ ಅಸಾದಿ ಮಾತನಾಡಿ, ನಮಗೆ ಕೋರ್ಟ್ನಲ್ಲಿ ನ್ಯಾಯ ಸಿಗುವ ಭರವಸೆ ಇತ್ತು. ಆದರೆ ನಮ್ಮ ವಿರುದ್ಧ ತೀರ್ಪು ಬಂದಿದೆ. ನಾವು ಯಾವುದೇ ಕಾರಣಕ್ಕೂ ಹಿಜಾಬ್ ಇಲ್ಲದೆ ಕಾಲೇಜಿಗೆ ಬರಲ್ಲ. ಹೆಣ್ಣುಮುಕ್ಕಳು ಮನೆಯಿಂದ ಹೊರಬರುವಾಗ ತಲೆ-ಎದೆಭಾಗವನ್ನು ಮುಚ್ಚಬೇಕು ಎಂದು ಕುರಾನ್ನಲ್ಲಿ ಬರೆದಿದೆ ಎಂದರು.
ಕುರಾನ್ ಹೇಳಿದ ಮೇಲೆ ನಮಗೆ ಅದೇ ಫೈನಲ್, ಅದೇ ನಮ್ಮ ಸಂವಿಧಾನ. ನಮ್ಮ ಹಕ್ಕು ಪಡೆಯೋವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲ. ನಮಗೆ ಹಿಜಾಬ್ ಅತ್ಯವಶ್ಯಕ. ಅದಕ್ಕಾಗಿಯೇ ಈ ಹೋರಾಟ. ರಾಜಕೀಯ ಉದ್ದೇಶಕ್ಕಾಗಿ ಇದನ್ನು ದೊಡ್ಡದು ಮಾಡಲಾಯಿತು. ಕಾಲೇಜಿನ ಕಾಂಪೌಂಡಿನ ಒಳಗೆ ಈ ಸಮಸ್ಯೆಯನ್ನ ಬಗೆಹರಿಸಬಹುದಿತ್ತು ಎಂದು ಹೇಳಿದರು.
ಕಾಲೇಜಿಗೆ ಗೈರಾಗಿದ್ದರೂ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೇವೆ. ನಾವು ಹಿಜಾಬ್ ತೆಗೆಯುವುದಿಲ್ಲ, ನಮಗೆ ಶಿಕ್ಷಣ ಕೂಡ ಮುಖ್ಯ. ಸರ್ಕಾರ ಕೋರ್ಟ್ ಮೇಲೆ ಒತ್ತಡ ಹಾಕಿದೆ. ಒತ್ತಡ ಇದ್ದದ್ದಕ್ಕೆ ಇಂದು ಹಿಜಾಬ್ ವಿರುದ್ಧ ತೀರ್ಪು ಬಂದಿದೆ. ಇದು ಅಸಂವಿಧಾನಿಕವಾದ ತೀರ್ಪು ಎಂದು ಆಲಿಯಾ ಅಸಾದಿ ಆರೋಪಿಸಿದರು.
ಇನ್ನು ವಿದ್ಯಾರ್ಥಿನಿ ಅಲ್ಮಾಸ್ ಮಾತನಾಡಿ, ನಮಗಿಲ್ಲಿ ನ್ಯಾಯ ಇಲ್ಲ ಅನ್ನಿಸುತ್ತಿದೆ. ಎರಡು ತಿಂಗಳು ಸಮಸ್ಯೆ ಅನುಭವಿಸಿದೆವು. ನಮ್ಮನ್ನು ಬೇರೆಯೇ ರೀತಿಯಲ್ಲಿ ನೋಡುತ್ತಿದ್ದಾರೆ. ನಾವು ಡಿಸಿ, ಡಿಡಿಪಿಐ ಭೇಟಿ ಮಾಡಿದರೂ ನ್ಯಾಯ ಸಿಗಲಿಲ್ಲ. ನಮಗೆ ನಮ್ಮ ನ್ಯಾಯ ಸಿಗಲಿಲ್ಲ. ನಾವು ಜಾತ್ಯಾತೀತ ದೇಶದಲ್ಲಿದ್ದೇವೆ. ಎಲ್ಲಾ ಧರ್ಮಕ್ಕೆ ಎಲ್ಲರೂ ಗೌರವ ಕೊಡಬೇಕು ಎಂದರು.
