ರಾಜ್ಯದ 541 ಪಿಯು ಕಾಲೇಜಲ್ಲಿ 3 ವರ್ಷದಿಂದ ಒಂದೂ ಅಡ್ಮಿಷನ್‌ ಇಲ್ಲ!

  • ರಾಜ್ಯದ 541 ಪಿಯು ಕಾಲೇಜಲ್ಲಿ ಈ ಸಲ ಒಂದೂ ಅಡ್ಮಿಷನ್‌ ಇಲ್ಲ!
  • ಪ್ರವೇಶ ನಾಸ್ತಿ, ಕಾಲೇಜು ಮುಚ್ಚುವ ಭೀತಿ ,1 ವರ್ಷ ವಿನಾಯ್ತಿ
  • ಶೂನ್ಯ ದಾಖಲಾತಿ ಹೊಂದಿರುವ ಪಿಯು ಕಾಲೇಜುಗಳ ಜಿಲ್ಲಾವಾರು ಪಟ್ಟಿ ಬಿಡುಗಡೆ
Karnataka  541 private Pre-University colleges  have zero enrolment last 3 Year gow

ಬೆಂಗಳೂರು (ಜು.9): ಕಳೆದ ಮೂರು ವರ್ಷಗಳಿಂದ ರಾಜ್ಯದ 541 ಅನುದಾನರಹಿತ ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಒಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ. ನಿಯಮ ಪ್ರಕಾರ, ಇಂತಹ ಕಾಲೇಜುಗಳಲ್ಲಿ ದಾಖಲಾತಿಗೆ ನಿರ್ಬಂಧ ಬೀಳುತ್ತದೆ. ಆದರೆ, ಕೋವಿಡ್‌ ಹಿನ್ನೆಲೆಯಲ್ಲಿ ಈ ವರ್ಷದ ಮಟ್ಟಿಗೆ ನಿರ್ಬಂಧದಿಂದ ಷರತ್ತು ಬದ್ಧ ವಿನಾಯಿತಿ ನೀಡಲು ಸರ್ಕಾರ ಅನುಮೋದನೆ ನೀಡಿದೆ.

ಷರತ್ತಿನ ಪ್ರಕಾರ ಈ ವರ್ಷ ಕನಿಷ್ಠ 40 ವಿದ್ಯಾರ್ಥಿಗಳು ಆ ಕಾಲೇಜುಗಳಲ್ಲಿ ದಾಖಲಾತಿ ಪಡೆದಿರಬೇಕು. ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಲೇಜಿನವರು ನೀಡಿದ ಮಾಹಿತಿ ಆಧರಿಸಿ ಇಲಾಖೆಯು ಒಂದು ಪರಿಶೀಲನೆ ನಡೆಸಲಿದೆ. ಪರಿಶೀಲನೆ ವೇಳೆ 40 ವಿದ್ಯಾರ್ಥಿಗಳ ದಾಖಲಾತಿ ಹಾಗೂ ಆ ಮಕ್ಕಳಿಗೆ ಶಿಕ್ಷಣ ನೀಡಲು ಅಗತ್ಯ ಮೂಲ ಸೌಕರ್ಯ ಹಾಗೂ ಬೋಧಕ ವರ್ಗ ಕಾಲೇಜಿನಲ್ಲಿ ಇರುವುದು ಖಚಿತವಾದರೆ 2022-23ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಕಾಲೇಜು ನಡೆಸಲು ಅನುಮತಿ ನೀಡಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸೋರುತ್ತಿರುವ ಸರ್ಕಾರಿ ಶಾಲಾ ಕಟ್ಟಡ: ಮಕ್ಕಳ ಗೋಳು ನೋಡಲಾಗದೇ ಶಾಲೆಯ ಛಾವಣಿ

ಕಳೆದ ಮೂರು ವರ್ಷಗಳಿಂದ ಶೂನ್ಯ ದಾಖಲಾತಿ ಹೊಂದಿರುವ ಪಿಯು ಕಾಲೇಜುಗಳ ಜಿಲ್ಲಾವಾರು ಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಶುಕ್ರವಾರ ಬಿಡುಗಡೆ ಮಾಡಿದ್ದು, 32 ಶೈಕ್ಷಣಿಕ ಜಿಲ್ಲೆಗಳ ಒಟ್ಟು 541 ಕಾಲೇಜುಗಳಲ್ಲಿ 2018-19, 2019-20 ಮತ್ತು 2020-21ನೇ ಸಾಲಿನಲ್ಲಿ ಒಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ. ಇದರಲ್ಲಿ ಬೆಂಗಳೂರು ನಗರದಲ್ಲೇ ಅತಿ ಹೆಚ್ಚು 154 ಕಾಲೇಜುಗಳಿವೆ. ಮೂರು ವರ್ಷ ಶೂನ್ಯ ದಾಖಲಾತಿ ಇದ್ದರೆ ನಾಲ್ಕನೇ ವರ್ಷಕ್ಕೆ ಆ ಕಾಲೇಜನ್ನು ಮುಚ್ಚಬೇಕಾಗುತ್ತದೆ.

ಕಳೆದ ಎರಡು ವರ್ಷಗಳಲ್ಲಿ ಕಾಡಿದ ಕೋವಿಡ್‌ ಸಾಂಕ್ರಾಮಿಕ ರೋಗದಿಂದ ಮಕ್ಕಳ ದಾಖಲಾತಿಯಲ್ಲಿ ತೀವ್ರ ಹೊಡೆತ ಬಿದ್ದಿದೆ. ಬಹಳ ಕಡಿಮೆ ಸಂಖ್ಯೆಯ ಮಕ್ಕಳಿದ್ದ ಕಾಲೇಜುಗಳಲ್ಲಿ ಆ ವಿದ್ಯಾರ್ಥಿಗಳೂ ದಾಖಲಾತಿಯೇ ಆಗಿಲ್ಲ. ಹಾಗಾಗಿ ಈ ವರ್ಷದ ಮಟ್ಟಿಗೆ ಕಾಲೇಜು ಮುಚ್ಚುವ ನಿಯಮದಿಂದ ವಿನಾಯಿತಿ ನೀಡಬೇಕು. ದಾಖಲಾತಿ ಹೆಚ್ಚಿಸಿಕೊಳ್ಳಲು ಅವಕಾಶ ನೀಡಕೆಂದು ಈ ಕಾಲೇಜುಗಳ ಮುಖ್ಯಸ್ಥರು ಮನವಿ ಮಾಡಿದ್ದಾರೆ. ಮನವಿಗೆ ಸರ್ಕಾರ ಸ್ಪಂದಿಸಿದೆ.

ರಾಜ್ಯದಲ್ಲಿ 5200ಕ್ಕೂ ಹೆಚ್ಚು ಪಿಯು ಕಾಲೇಜುಗಳಿವೆ, ಅವುಗಳಲ್ಲಿ 1203 ಸರ್ಕಾರಿ, 3300 ಖಾಸಗಿ ಅನುದಾನರಹಿತ ಮತ್ತು 697 ಖಾಸಗಿ ಅನುದಾನಿತವಾಗಿವೆ.

2ನೇ ದಿನವೂ ದ್ವಿತೀಯ ಪಿಯು ಉತ್ತರ ಪತ್ರಿಕೆ ಪಡೆಯಲು ವಿದ್ಯಾರ್ಥಿಗಳ ಪರದಾಟ

ಶೂನ್ಯ ದಾಖಲಾತಿಯ ಕಾಲೇಜುಗಳು ಎಲ್ಲೆಲ್ಲಿ?: ಬೆಂಗಳೂರು ದಕ್ಷಿಣ 93, ಬೆಂಗಳೂರು ಉತ್ತರ 61, ಬಿಜಾಪುರ 26, ತುಮಕೂರು, ಮೈಸೂರು ತಲಾ 24, ಕಲಬುರಗಿ 23, ಚಿತ್ರದುರ್ಗ 21, ದಾವಣಗೆರೆ 19, ಧಾರವಾಡ, ಬೀದರ್‌ ತಲಾ 18, ಚಿಕ್ಕಬಳ್ಳಾಪುರ 16, ಚಿಕ್ಕೋಡಿ 17, ಬೆಳಗಾವಿ, ಹಾಸನ, ಮಂಡ್ಯ ತಲಾ 15, ರಾಯಚೂರು 14, ಬಳ್ಳಾರಿ 13, ಬಾಗಲಕೋಟೆ 11, ಕೋಲಾರ, ಮಂಗಳೂರು ತಲಾ 10, ಹಾವೇರಿ, ಯಾದಗಿರಿ ತಲಾ 8, ಉಡುಪಿ 7, ಚಾಮರಾಜನಗರ, ಚಿಕ್ಕಮಗಳೂರು, ರಾಮನಗರ, ಗದಗ, ಕೊಡಗು ತಲಾ 6, ಕೊಪ್ಪಳ, ಶಿವಮೊಗ್ಗ ತಲಾ 5, ಉತ್ತರ ಕನ್ನಡ 3 ಕಾಲೇಜುಗಳು.

Latest Videos
Follow Us:
Download App:
  • android
  • ios