ನಿತ್ಯ 50 ಕಿ.ಮೀ. ಪ್ರಯಾಣಿಸಿ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ನಂ.2 ಸ್ಥಾನ ಪಡೆದ ಕೃಷಿ ಕಾರ್ಮಿಕನ ಪುತ್ರಿ!
ಹಗರಿಬೊಮ್ಮನಹಳ್ಳಿ ತಾಲೂಕಿನ ಕನ್ನಿಹಳ್ಳಿ ಗ್ರಾಮದ ನಿವಾಸಿ ಎಂ.ದುರುಗಪ್ಪ, ತಾಯಿ ಎಂ.ಸಾವಿತ್ರಮ್ಮ ಅವರಿಗೆ ಐವರು ಮಕ್ಕಳಿದ್ದು, ಕೊನೆಯ ಮಗಳು ಮಲ್ಲಮ್ಮ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿ.
ಹರಪನಹಳ್ಳಿ (ಏ.22): ತಂದೆ- ತಾಯಿ ಕೂಲಿ ಮಾಡುತ್ತಿದ್ದರೂ ಪುತ್ರಿ ದ್ವಿತೀಯ ಪಿಯುಸಿಯಲ್ಲಿ ಇಡೀ ರಾಜ್ಯವೇ ಹೆಮ್ಮೆ ಪಡುವಂಥ ಸಾಧನೆ ಮಾಡಿದ್ದಾರೆ. ಹೌದು, ವಿಜಯನಗರ ಜಿಲ್ಲೆಯ ಹರಪನಹಳ್ಳ ಪಟ್ಟಣದ ಎಸ್‌ಯುಜೆಎಂ ಕಾಲೇಜಿನ ವಿದ್ಯಾರ್ಥಿನಿ ಮುತ್ತೂರು ಮಲ್ಲಮ್ಮ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 600ಕ್ಕೆ 592 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದು ಜಿಲ್ಲೆ, ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಕನ್ನಿಹಳ್ಳಿ ಗ್ರಾಮದ ನಿವಾಸಿ ಎಂ.ದುರುಗಪ್ಪ, ತಾಯಿ ಎಂ.ಸಾವಿತ್ರಮ್ಮ ಅವರಿಗೆ ಐವರು ಮಕ್ಕಳಿದ್ದು, ಕೊನೆಯ ಮಗಳು ಮಲ್ಲಮ್ಮ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿ. ಮಲ್ಲಮ್ಮ ಕನ್ನಡ- 100, ಸಂಸ್ಕೃತ 100, ಐಚ್ಛಿಕ ಕನ್ನಡ 97, ಇತಿಹಾಸ 97, ರಾಜ್ಯಶಾಸ್ತ್ರ 98, ಶಿಕ್ಷಣ 100 ಅಂಕ ಪಡೆದಿದ್ದಾರೆ.
ದೇವರು ಮೆಚ್ಚುವ ಹಾಗೆ ಸೋಮಣ್ಣ ಗೆಲುವಿಗೆ ಶ್ರಮಿಸುವೆ: ಬಿ.ವೈ.ವಿಜಯೇಂದ್ರ
ಈಕೆಯು ಗ್ರಾಮದಿಂದ 50 ಕಿ.ಮೀ. ದೂರದ ಹರಪನಹಳ್ಳಿಗೆ ನಿತ್ಯ ಕಾಲೇಜಿಗೆ ಬಸ್‌ನಲ್ಲಿ ಸಂಚರಿಸುತ್ತಾ ಇಂಥದ್ದೊಂದು ಸಾಧನೆ ಮಾಡಿದ್ದಾರೆ. ಮಲ್ಲಮ್ಮ ಎಸ್ಸೆಸ್ಸೆಲ್ಸಿಯಲ್ಲಿ ಶೇ.98 ಫಲಿತಾಂಶ ಪಡೆದಿದ್ದರು. ನಿತ್ಯ ಕಾಲೇಜು ಅವಧಿ ಹೊರತುಪಡಿಸಿ 6 ಗಂಟೆ ಅಭ್ಯಾಸ ಮಾಡುತ್ತಿದ್ದೆ. ಹಿಂದಿನ ವರ್ಷದ ಎಲ್ಲ ಪರೀಕ್ಷೆಯ ಪತ್ರಿಕೆಗಳನ್ನು ಮನನ ಮಾಡಿಕೊಳ್ಳುತ್ತಿದ್ದೆ. ನನಗೆ ರ್ಯಾಂಕ್ ಬರುವ ನಿರೀಕ್ಷೆ ಇತ್ತು. ಅದರಂತೆ 2ನೇ ರ್ಯಾಂಕ್ ಬಂದಿದ್ದು, ಕೆಎಎಸ್ ಮಾಡಿ ತಹಸೀಲ್ದಾರ್ ಆಗುವ ಗುರಿ ಹೊಂದಿದ್ದೇನೆ ಎನ್ನುತ್ತಾರೆ ಮಲ್ಲಮ್ಮ.
ಸಿಹಿ ತಿನ್ನಿಸಿ ಸಂಭ್ರಮ: ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ವೇಳೆ ಕಾಲೇಜಿನ ದೂರವಾಣಿ ಮೂಲಕ ನನ್ನ ಮಗಳು ರಾಜ್ಯಕ್ಕೆ 2ನೇ ರ್ಯಾಂಕ್ ಬಂದಿದ್ದಾಳೆ ಎಂದು ತಿಳಿಸಿದ್ದು ಖುಷಿಯಾಗಿದೆ ಎಂದು ಹೇಳಿ ಮಗಳಿಗೆ ಸಿಹಿ ತಿನ್ನಿಸಿ ತಂದೆ- ತಾಯಿ ಸಂಭ್ರಮಿಸಿದರು.
ಮೋದಿ ರಂಗಪ್ರವೇಶ ಮಾಡಿದ್ರೆ ಬಿಜೆಪಿಗೆ 130 ಸ್ಥಾನ ಖಚಿತ: ಬಿ.ಎಲ್.ಸಂತೋಷ್
ದ್ವಿತೀಯ ಪಿಯು ಫಲಿತಾಂಶದಲ್ಲಿ ಈ ಬಾರಿ ನಮ್ಮ ಕಾಲೇಜಿಗೆ ಪ್ರಥಮ ರ್ಯಾಂಕ್ ಬರುವ ನಿರೀಕ್ಷೆ ಇತ್ತು. 2ನೇ ರ್ಯಾಂಕ್ ಸಿಕ್ಕಿರುವುದು ಸಂತಸ ತಂದಿದೆ. ಇವರ ಜತೆಗೆ ಅನೇಕ ವಿದ್ಯಾರ್ಥಿಗಳು ಉನ್ನತ ಅಂಕ ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.
-ಹಿರೇಮಠ್, ಪ್ರಾಚಾರ್ಯರು, ಎಸ್‌ಯುಜೆಎಂ ಕಾಲೇಜು, ಹರಪನಹಳ್ಳಿ