Asianet Suvarna News Asianet Suvarna News

1-10ನೇ ತರಗತಿಗೆ ಭಾಷೆಯಾಗಿ ಕನ್ನಡ ಕಲಿಕೆ ಕಡ್ಡಾಯ: ಸುರೇಶ್‌

  • ರಾಜ್ಯದಲ್ಲಿರುವ ಯಾವುದೇ ಪಠ್ಯಕ್ರಮದ ಶಾಲೆಗಳೇ ಆಗಲಿ 1-10ನೇ ತರಗತಿ ಮಕ್ಕಳಿಗೆ ಕನ್ನಡ ಕಡ್ಡಾಯ
  •  ಪ್ರಥಮ ಇಲ್ಲವೇ ದ್ವಿತೀಯ ಭಾಷೆಯನ್ನಾಗಿ ಕಲಿಸುವುದು ಕಡ್ಡಾಯ
  • ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ - ಸುರೇಶ್ ಕುಮಾರ್
Kannada Mandatory For 1 to 10th Class Says Minister Suresh kumar snr
Author
Bengaluru, First Published Jul 15, 2021, 8:49 AM IST

ಬೆಂಗಳೂರು (ಜು.15):  ಕನ್ನಡ ಕಲಿಕಾ ಅಧಿನಿಯಮ 2015ರ ಕಾಯ್ದೆ ಪ್ರಕಾರ ರಾಜ್ಯದಲ್ಲಿರುವ ಯಾವುದೇ ಪಠ್ಯಕ್ರಮದ ಶಾಲೆಗಳೇ ಆಗಲಿ 1-10ನೇ ತರಗತಿ ಮಕ್ಕಳಿಗೆ ಕನ್ನಡವನ್ನು ಕಡ್ಡಾಯವಾಗಿ ಪ್ರಥಮ ಇಲ್ಲವೇ ದ್ವಿತೀಯ ಭಾಷೆಯನ್ನಾಗಿ ಕಲಿಸುವುದು ಕಡ್ಡಾಯವಾಗಿದೆ, ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶಕುಮಾರ್‌ ತಿಳಿಸಿದ್ದಾರೆ.

ಹೊರರಾಜ್ಯಗಳ ಪೋಷಕರ ಒಂದು ವರ್ಗ ರಾಜ್ಯದ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸುವುದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಅವರು ಬುಧವಾರ ಸಚಿವ ಸುರೇಶ್‌ ಕುಮಾರ್‌ ಅವರನ್ನು ಭೇಟಿ ಮಾಡಿ ಕನ್ನಡಕ್ಕೆ ಕುತ್ತು ತರುವ ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕನ್ನಡ ಕಲಿಕಾ ಅಧಿನಿಯಮ 2015ರ ಕಟ್ಟುನಿಟ್ಟಿನ ಜಾರಿಗೆ ಕ್ರಮ ವಹಿಸಬೇಕೆಂದು ಮನವಿ ಮಾಡಿದರು.

ಸ್ನೇಹಿತರು, ಕುಟುಂಬಸ್ಥರೊಂದಿಗೆ ಮಾತೃಭಾಷೆಯಲ್ಲಿ ಕನೆಕ್ಟ್; ಮೈಕ್ರೋಸಾಫ್ಟ್ ಟೀಮ್ಸ್ ಕನ್ನಡದಲ್ಲಿ ಲಭ್ಯ!

ಪ್ರಾಧಿಕಾರದ ಅಧ್ಯಕ್ಷರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶಕುಮಾರ್‌, ರಾಜ್ಯದ ಯಾವುದೇ ಪಠ್ಯಕ್ರಮದ ಶಾಲೆಗಳು ಈ ನೆಲದ ಕಾನೂನಿಗೆ ಬದ್ಧವಾಗಿರಬೇಕು. ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಇದಕ್ಕಾಗಿ ರೂಪಿಸಲಾಗಿರುವ ಕನ್ನಡ ಕಲಿಕಾ ಅಧಿನಿಯಮ 2015ರ ಕಾಯ್ದೆಯ ಕಟ್ಟುನಿಟ್ಟಿನ ಅನುಷ್ಠಾನ ವಿಚಾರಕ್ಕೆ ತಾವು ಸದಾ ಬದ್ಧ. ಸರ್ಕಾರ ಈ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಲಿದೆ ಎಂದು ಹೇಳಿದ್ದಾರೆ.

ಆನ್‌ಲೈನ್‌ ಅಭಿಯಾನ:

ಕೇಂದ್ರ ಪಠ್ಯಕ್ರಮದ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಇಲ್ಲವೇ ದ್ವಿತೀಯ ಭಾಷೆಯನ್ನಾಗಿ ಕಲಿಸುವುದನ್ನು ಹೊರ ರಾಜ್ಯದ ಪೋಷಕರ ಒಂದು ವರ್ಗ ವಿರೋ​ಧಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಿರುವುದು ಕನ್ನಡ ಭಾಷಾ ಕಲಿಕಾ ಅ​ಧಿನಿಯಮ-2015ಕ್ಕೆ ವಿರುದ್ಧವಾಗಿದೆ. ಅಲ್ಲದೇ ಈ ನೆಲದ ಸಂಸ್ಕೃತಿಯನ್ನು ವಿರೋ​ಧಿಸುವಂತಹುದ್ದಾಗಿದೆ. ರಾಜ್ಯದ ಯಾವುದೇ ಪಠ್ಯಕ್ರಮದ ಶಾಲೆಗಳು ಇಂತಹ ಒತ್ತಾಯಗಳಿಗೆ ಮಣಿಯದೆ ಕನ್ನಡ ಕಲಿಕೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ತಪ್ಪಿದಲ್ಲಿ ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಕೂಡಲೇ ಸುತ್ತೋಲೆ ಹೊರಡಿಸುವಂತೆಯೂ ಸಚಿವರು ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದಾರೆ.

ಕನ್ನಡಿಗರ ಸ್ವಾಭಿಮಾನ ಪ್ರದರ್ಶನ, ಕನ್ನಡ ಭಾಷೆಗೆ ರಾಣಿ ಪಟ್ಟ ..

ಈಗಾಗಲೇ ಬೆಂಗಳೂರಿನ ಕೇಂದ್ರ ಪಠ್ಯಕ್ರಮದ ಶಾಲೆಗಳ ಪ್ರಾಚಾರ್ಯರು ಮತ್ತು ಮುಖ್ಯಸ್ಥರ ಸಭೆಯನ್ನೂ ನಡೆಸಿ ನಿರ್ದೇಶನ ನೀಡಲಾಗಿದೆ. ಇಲಾಖೆಯ ವಿಚಕ್ಷಣ ಅ​ಧಿಕಾರಿಗಳು ಎಲ್ಲ ಶಾಲೆಗಳಿಗೂ ಭೇಟಿ ನೀಡಿ ಕಾಯ್ದೆಯ ಜಾರಿ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುವಂತೆ ಸಹ ಕೂಡಲೇ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಹೇಳಿದರು.

Follow Us:
Download App:
  • android
  • ios