ತಾಂತ್ರಿಕ, ಆಡಳಿತಾತ್ಮಕ ಸಮಸ್ಯೆಯ ನೆಪ: ಕನಕಗಿರಿ ಪಾಲಿಟೆಕ್ನಿಕ್ ಕಾಲೇಜು ಬೆಂಗಳೂರಿಗೆ ಎತ್ತಂಗಡಿ!
- ಕನಕಗಿರಿಯ ಪಾಲಿಟೆಕ್ನಿಕ್ ಕಾಲೇಜು ಬೆಂಗಳೂರಿಗೆ ಎತ್ತಂಗಡಿ!
- ತಾಂತ್ರಿಕ, ಆಡಳಿತಾತ್ಮಕ ಸಮಸ್ಯೆಯ ನೆಪವೊಡ್ಡಿ ಸ್ಥಳಾಂತರ
- ಸಂಡೂರು, ಮುನಿರಾಬಾದ್, ಕನಕಗಿರಿ ಕಾಲೇಜುಗಳು ಸ್ಥಳಾಂತರ
ಎಂ. ಪ್ರಹ್ಲಾದ
ಕನಕಗಿರಿ (ಫೆ.3) : ತಾಲೂಕಿನ ಗ್ರಾಮೀಣ ಪ್ರದೇಶ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಪಡೆಯುವುದಕ್ಕಾಗಿ ಆರಂಭವಾಗಬೇಕಿದ್ದ ಪಾಲಿಟೆಕ್ನಿಕ್(ಡಿಪ್ಲೊಮಾ) ಕಾಲೇಜು ಇದೀಗ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಯ ನೆಪವೊಡ್ಡಿ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಎತ್ತಂಗಡಿಯಾಗಿದೆ!
2017- 18ನೇ ಸಾಲಿನ ಆಯವ್ಯಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಗ್ರಾಮೀಣ ಭಾಗ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯದ 25 ಪಾಲಿಟೆಕ್ನಿಕ್ ಕಾಲೇಜುಗಳನ್ನು ಆರಂಭಿಸುವಂತೆ ಘೋಷಿಸಿತ್ತು. ಹೊಸ ಪಾಲಿಟೆಕ್ನಿಕ್ ಕಾಲೇಜುಗಳಿಗೆ ಸರ್ಕಾರದ ನಿಯಮಾವಳಿಯಂತೆ ನಿವೇಶನ, ಕಟ್ಟಡ, ಗ್ರಂಥಾಲಯ, ಕಾರ್ಯಾಗಾರ ಸೇರಿದಂತೆ ನಾನಾ ಮೂಲ ಸೌಕರ್ಯ ಒದಗಿಸಿದ ಬಳಿಕ ಕಾಲೇಜು ಪ್ರಾರಂಭಿಸಲು ಸರ್ಕಾರ ಸೂಚಿಸಿತ್ತು.
ಬಿಲ್ ಬಾಕಿ ಪಾವತಿಸದ ರಾಜ್ಯದ 16 ಸರ್ಕಾರಿ ಕಾಲೇಜುಗಳ ವಿದ್ಯುತ್ ಕಟ್!
ಆದರೆ, 25 ಕಾಲೇಜುಗಳ ಪೈಕಿ 8 ಕಾಲೇಜುಗಳಿಗೆ ತಾಂತ್ರಿಕ, ಕಟ್ಟಡ ಆರಂಭವಾಗದಿರುವುದು ಹಾಗೂ ಆಡಳಿತಾತ್ಮಕ ಅನುಮೋದನೆ ದೊರಯದೇ ಇರುವುದರಿಂದ ಆಳಂದ, ಜಮಖಂಡಿ, ಟಿ. ನರಸೀಪುರ, ಮಧುಗಿರಿ, ಸಂಡೂರು, ಸಿಂಧನೂರು, ಮುನಿರಾಬಾದ್ ಹಾಗೂ ಕನಕಗಿರಿ ಕಾಲೇಜನ್ನು ಸರ್ಕಾರ ಬೇರೆಡೆ ಸ್ಥಳಾಂತರಿಸಿ ಆದೇಶ ಹೊರಡಿಸಿದೆ. ಹೀಗಾಗಿ ಕನಕಗಿರಿಯ ಪಾಲೆಟೆಕ್ನಿಕ್ ಕಾಲೇಜು ವಾಪಸ್ ರಾಜಧಾನಿ ಬೆಂಗಳೂರಿನ ಪಾಲಾಗಿದೆ.
ಕನಕಗಿರಿ ಹಾಗೂ ಸಂಡೂರು ತಾಲೂಕುಗಳಲ್ಲಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ತಾಂತ್ರಿಕ ಶಿಕ್ಷಣ ಇಲಾಖೆ ವರದಿಯಂತೆ ಭೂಮಿ ನೀಡಿದ್ದರೂ ಸರ್ಕಾರ ಏಕಾಏಕಿ ಕಾಲೇಜನ್ನು ಬೇರೆಡೆ ಸ್ಥಳಾಂತರಿಸಿರುವ ಕ್ರಮಕ್ಕೆ ಕ್ಷೇತ್ರದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ಹೋರಾಟಕ್ಕೆ ಸಿದ್ಧತೆ:
ಪಾಲಿಟೆಕ್ನಿಕ್ ಕಾಲೇಜನ್ನು ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸ್ಥಳಾಂತರಗೊಳಿಸಿರುವ ಕ್ರಮವನ್ನು ಖಂಡಿಸಿರುವ ವಿವಿಧ ಸಂಘಟನೆಗಳು, ಸಂಬಂಧಪಟ್ಟಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಒತ್ತಡ ಹಾಕಿ ಹಿಂದುಳಿದ ಕನಕಗಿರಿ ತಾಲೂಕಿನಲ್ಲೇ ಪಾಲಿಟೆಕ್ನಿಕ್ ಕಾಲೇಜು ಉಳಿಯುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟಕ್ಕೆ ಅಣಿಯಾಗುವುದಾಗಿ ಎಚ್ಚರಿಸಿವೆ.
ಕನಕಗಿರಿ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮಂಜೂರಾದ ಡಿಪ್ಲೊಮಾ ಕಾಲೇಜು ಇದೀಗ ಬೇರೆಡೆ ಸ್ಥಳಾಂತರಿಸುವುದು ಖಂಡನೀಯ. ಕಾಲೇಜಿನಿಂದ ತಾಲೂಕಿನ ಗ್ರಾಮೀಣ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಅನುಕೂಲವಿದೆ. ಏಕಾಏಕಿ ಸ್ಥಳಾಂತರಿಸಿದ್ದು ತಪ್ಪು. ಕಾಲೇಜು ಮರು ಮಂಜೂರಾತಿಗೆ ಪಕ್ಷಾತೀತ ಹೋರಾಟ ಅನಿವಾರ್ಯ.
ಶರಣಬಸಪ್ಪ ಭತ್ತದ
ವಿದ್ಯಾರ್ಥಿಗಳ ಶುಲ್ಕ ಆಯಾ ಕಾಲೇಜುಗಳ ಶೈಕ್ಷಣಿಕ ಅಭಿವೃದ್ಧಿಗೆ ಮೀಸಲು: ಅಶ್ವತ್ಥ್ ನಾರಾಯಣ್
ಪಾಲಿಟೆಕ್ನಿಕ್ ಕಾಲೇಜು ಸ್ಥಳಾಂತರವಾಗಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ತಕ್ಷಣವೇ ಸಂಬಂಧಪಟ್ಟಸಚಿವರ, ಅಧಿಕಾರಿಗಳ ಜತೆ ಚರ್ಚಿಸಿ ಕಾಲೇಜು ಮರು ಮಂಜೂರಾತಿ ಹಾಗೂ ಆಡಳಿತಾತ್ಮಕ ಅನುಮೋದನೆಗೆ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಡಿಪ್ಲೊಮಾ ಕಾಲೇಜು ಕೈಬಿಡುವ ಮಾತಿಲ್ಲ. ವಾಪಸ್ ತರುತ್ತೇವೆ.
ಬಸವರಾಜ ದಡೇಸೂಗುರು, ಶಾಸಕ