ಈ ವರ್ಷ ಸಿಇಟಿ ಪರೀಕ್ಷೆಗೆ ನೀಡಿದ್ದು 2023ರ ಪತ್ರಿಕೆಯಾ?: ಇಂದು ಎಬಿವಿಪಿ ಪ್ರತಿಭಟನೆ
ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಇತಿಹಾಸದಲ್ಲೇ ಕಪ್ಪು ಚುಕ್ಕೆ ಎನ್ನುವಂತೆ 51ಕ್ಕೂ ಹೆಚ್ಚು ಪಠ್ಯೇತರ ಪ್ರಶ್ನೆಗಳನ್ನು ಕೇಳುವ ಮೂಲಕ ಆಗಿರುವ ಭಾರೀ ಗೊಂದಲಕ್ಕೆ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಪೋಷಕರ ವಲಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಿರುದ್ಧ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿವೆ.
ಬೆಂಗಳೂರು (ಏ.22): ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಇತಿಹಾಸದಲ್ಲೇ ಕಪ್ಪು ಚುಕ್ಕೆ ಎನ್ನುವಂತೆ 51ಕ್ಕೂ ಹೆಚ್ಚು ಪಠ್ಯೇತರ ಪ್ರಶ್ನೆಗಳನ್ನು ಕೇಳುವ ಮೂಲಕ ಆಗಿರುವ ಭಾರೀ ಗೊಂದಲಕ್ಕೆ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಪೋಷಕರ ವಲಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಿರುದ್ಧ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿವೆ. ಉಪನ್ಯಾಸಕರ ವಲಯದ ಪ್ರಕಾರ, ಪ್ರಾಧಿಕಾರದವರು 2024ನೇ ಸಾಲಿಗೆ ಹೊಸದಾಗಿ ಪ್ರಶ್ನೆ ಪತ್ರಿಕೆ ತಯಾರಿಸಿರುವುದೇ ಅನುಮಾನ. ಸಾಮಾನ್ಯವಾಗಿ ಪ್ರತೀ ವರ್ಷ ಪರೀಕ್ಷೆ ವೇಳೆ ಮೂರು ಸೆಟ್ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಲಾಗಿರುತ್ತದೆ.
ಅದೇ ರೀತಿ 2023ನೇ ಸಾಲಿನಲ್ಲಿ ತಯಾರಿಸಿದ್ದ ಯಾವುದೋ ಒಂದು ಸೆಟ್ ಪ್ರಶ್ನೆ ಪತ್ರಿಕೆಯನ್ನೇ ಈ ಬಾರಿಯ ಪರೀಕ್ಷೆಗೂ ನೀಡಿದ್ದಾರೆ ಎನಿಸುತ್ತಿದೆ. ನಿಜವಾಗಲೂ ಪ್ರಾಧಿಕಾರದವರು ಈ ವರ್ಷದ ಪ್ರಶ್ನೆ ಪತ್ರಿಕೆ ತಯಾರಿಸಿದ್ದರೆ ಪಿಯುಸಿಯಲ್ಲಿ ಈ ಬಾರಿ ಯಾವ ಪಠ್ಯಕ್ರಮ ಇದೆ. ಏನಾದರೂ ಪರಿಷ್ಕರಣೆ ಆಗಿದೆಯಾ ಎಂದು ಪರಿಶೀಲಿಸುತ್ತಿದ್ದರು. ಅಲ್ಲದೆ, ಪ್ರಶ್ನೆ ಪತ್ರಿಕೆ ರಚನಾ ಸಮಿತಿಗೆ ಹಿರಿಯ ಹಾಗೂ ಅನುಭವಿ ಪಿಯು ಉಪನ್ಯಾಸಕರನ್ನೇ ನೇಮಿಸಲಾಗುತ್ತದೆ. ಹೀಗಿರುವಾಗ ಅವರು ಇಲ್ಲದೇ ಇರುವ ಪಠ್ಯದ ಪ್ರಶ್ನೆಗಳನ್ನೇಕೆ ಸೇರಿಸುತ್ತಿದ್ದರು ಎಂಬ ಪ್ರಶ್ನೆ, ಗುಮಾನಿ ಕಾಡುತ್ತಿವೆ.
ಸಿಇಟಿ ಪರೀಕ್ಷೆ ಮುಗಿದ ಮೇಲೆ ಪಿಯು ಹೊಸ ಪಠ್ಯದ ಮಾಹಿತಿ ಕೇಳಿದ ಕೆಇಎ!
ಇನ್ನು, ಕೆಲ ಪಿಯು ಕಾಲೇಜುಗಳ ಪ್ರತಿನಿಧಿಗಳ ಅನುಮಾನವೇನೆಂದರೆ, ಐಸಿಎಸ್‌ಇ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಕಾರಣಕ್ಕೆ, ಈ ಬಾರಿ ಸಿಇಟಿಯಲ್ಲಿ ಐಸಿಎಸ್‌ಇ ಪಠ್ಯಕ್ರಮವನ್ನೂ ಪರಿಗಣಿಸಿರುವಂತೆ ಕಂಡುಬರುತ್ತಿದೆ. ಪಠ್ಯೇತರ ಪ್ರಶ್ನೆಗಳನ್ನು ನೋಡಿದರೆ ಅವು ಐಸಿಎಸ್‌ಇ ಪಠ್ಯಕ್ಕೆ ಸಂಬಂಧಿಸಿದವೂ ಇವೆ. ಇದರ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾಣದ ಕೈಗಳು ಐಸಿಎಸ್ಇ ಕಾಲೇಜುಗಳೊಂದಿಗೆ ಕೈಜೋಡಿಸಿ ಎನ್‌ಸಿಇಆರ್‌ಟಿ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುವ ಹುನ್ನಾರ ನಡೆಸಿರುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ.
ಇಂದು ಎಬಿವಿಪಿ ಪ್ರತಿಭಟನೆ: ಸಿಇಟಿಯಲ್ಲಿ 50ಕ್ಕೂ ಹೆಚ್ಚು ಪಠ್ಯೇತರ ಪ್ರಶ್ನೆ ಕೇಳಿರುವುದರಿಂದ ಉಂಟಾಗಿರುವ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಉಂಟಾಗಿರುವ ಗೊಂದಲ, ಆತಂಕ ನಿವಾರಣೆಗೆ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಸೋಮವಾರ ಮಲ್ಲೇಶ್ವರಂ ಕೆಇಎ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ. ವಿದ್ಯಾರ್ಥಿಗಳು, ಪೋಷಕರು ವಲಯದಲ್ಲೂ ಇದೇ ಅನುಮಾನಗಳು ಕಾಡುತ್ತಿವೆ. ತಮ್ಮ ಅನುಮಾನ, ಗೊಂದಲಗಳನ್ನು ಪರಿಹರಿಸಲು ಸರ್ಕಾರ ಪ್ರಕರಣವನ್ನು ಸೂಕ್ತ ತನಿಖೆ ನಡೆಸಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಇಷ್ಟೆಲ್ಲಾ ಭಾರೀ ಸಮಸ್ಯೆ, ಗೊಂದಲಗಳಾಗಿದ್ದರೂ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಆಕ್ಷೇಪಣೆ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳುತ್ತಿದ್ದಾರೆ. ಹಾಗಾಗಿ ಸಿಇಟಿ ಕೌನ್ಸೆಲಿಂಗ್ ವಿಳಂಬವಾಗದಂತೆ ಸರ್ಕಾರ ಕ್ರಮ ವಹಿಸಬೇಕೆಂದು ಆಗ್ರಹಿಸಿದ್ದಾರೆ.
KCET Exam 2024: ಪಠ್ಯದಲ್ಲಿಲ್ಲದ 51 ಪ್ರಶ್ನೆ: ಸಿಇಟಿ ಭಾರೀ ಗೊಂದಲ, ಮರು ಪರೀಕ್ಷೆಗೆ ಆಗ್ರಹ
ಇನ್ನು ಎರಡು ವಾರದಲ್ಲಿ ನೀಟ್ ಎದುರಾಗಲಿದೆ. ಹಾಗಾಗಿ ಮರು ಪರೀಕ್ಷೆ ನಡೆಸಲು ಸಮಯವಿಲ್ಲ. ಹಾಗಾಗಿ ಎಲ್ಲ ಪಠ್ಯೇತರ ಪ್ರಶ್ನೆಗಳಿಗೂ ಪೂರ್ಣ ಪ್ರಮಾಣದ ಗ್ರೇಸ್ ಅಂಕ ನೀಡಬೇಕು. ಇಲ್ಲವೇ ಆ ಪ್ರಶ್ನೆಗಳನ್ನೇ ಪರಿಗಣಿಸಿದೆ ಉಳಿದ ಪ್ರಶ್ನೆಗಳ ಅಂಕಗಳನ್ನು ಮಾತ್ರ ಪರಿಗಣಿಸಿ ರ್‍ಯಾಂಕಿಂಗ್ ನೀಡಲು ಕ್ರಮ ವಹಿಸಬೇಕೆಂದು ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಒತ್ತಾಯಿಸಿದೆ. ಬೆಳಗ್ಗೆ 10 ಗಂಟೆಗೆ ಕಚೇರಿ ಮುಂದೆ ದೊಡ್ಡ ಮಟ್ಟದಲ್ಲಿ ಸಮಾವೇಶಗೊಳ್ಳುವ ಎಬಿವಿಪಿ ಕಾರ್ಯಕರ್ತರು ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಈ ಗೊಂದಲಕ್ಕೆ ಕಾರಣರಾಗಿರುವ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಲಿದ್ದಾರೆ.