ಅನಧಿಕೃತ ಶಾಲೆಗಳ ರಕ್ಷಣೆಗೆ ನಿಂತಿತೆ ಶಿಕ್ಷಣ ಇಲಾಖೆ?
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಾರಂಭಕ್ಕೆ ಕೆಲ ದಿನಗಳಷ್ಟೇ ಬಾಕಿ ಇದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾಗಿರುವ ವಿದ್ಯಾ ದೇಗುಲಗಳು ಮಕ್ಕಳ ಜೀವನದ ಜತೆ ಚೆಲ್ಲಾಟವಾಡುತ್ತಿದ್ದರೆ, ಅನಧಿಕೃತ ಶಾಲೆಗಳ ವಿರುದ್ಧ ಕಾನೂನು ಕ್ರಮವಹಿಸಿ ಕಡಿವಾಣ ಹಾಕಬೇಕಿದ್ದ ಶಿಕ್ಷಣ ಇಲಾಖೆಯೇ ಕಣ್ಣಾಮುಚ್ಚಾಲೆ ಆಡುತ್ತಿದೆ.
ಎಂ. ಅಫ್ರೋಜ್ ಖಾನ್
ರಾಮನಗರ(ಮೇ.25): ಜಿಲ್ಲೆಯಲ್ಲಿ ನಾಯಿಕೊಡೆಗಳಂತೆ ಹತ್ತಾರು ಶಿಕ್ಷಣ ಸಂಸ್ಥೆಗಳು ತಲೆ ಎತ್ತುತ್ತಲೇ ಇವೆ. ಹೈಟೆಕ್ ಮಾದರಿ ಶಿಕ್ಷಣ ನೀಡುತ್ತೇವೆಂದು ಪ್ರಚಾರ ಗಿಟ್ಟಿಸಿ ಪೋಷಕರನ್ನು ಮರಳು ಮಾಡಿ ಸಾವಿರಾರು ರುಪಾಯಿ ಡೊನೇಷನ್ ವಸೂಲಿ ಮಾಡುತ್ತಿವೆ. ಇಷ್ಟಾದರೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಾತ್ರ ಅನಧಿಕೃತ ಶಾಲೆಗಳ ಹೆಸರನ್ನು ಪ್ರಕಟಿಸದೆ ಪಾಲಕರು ಮತ್ತು ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿದೆ.
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಾರಂಭಕ್ಕೆ ಕೆಲ ದಿನಗಳಷ್ಟೇ ಬಾಕಿ ಇದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾಗಿರುವ ವಿದ್ಯಾ ದೇಗುಲಗಳು ಮಕ್ಕಳ ಜೀವನದ ಜತೆ ಚೆಲ್ಲಾಟವಾಡುತ್ತಿದ್ದರೆ, ಅನಧಿಕೃತ ಶಾಲೆಗಳ ವಿರುದ್ಧ ಕಾನೂನು ಕ್ರಮವಹಿಸಿ ಕಡಿವಾಣ ಹಾಕಬೇಕಿದ್ದ ಶಿಕ್ಷಣ ಇಲಾಖೆಯೇ ಕಣ್ಣಾಮುಚ್ಚಾಲೆ ಆಡುತ್ತಿದೆ.
ರಿಸಲ್ಟ್ ಇಲ್ಲದೆ 5, 8, 9ನೇ ಕ್ಲಾಸ್ ಮಕ್ಕಳು ಅತಂತ್ರ..!
ಮಕ್ಕಳನ್ನು ಚೆನ್ನಾಗಿ ಓದಿಸಬೇಕು, ಒಳ್ಳೆಯ ಶಿಕ್ಷಣ ನೀಡಿ ಉನ್ನತ ಹುದ್ದೆಗೇರಿಸಬೇಕು ಅಂತ ಅದೆಷ್ಟೋ ಪೋಷಕರು ಹಗಲಿರುಳು ಕಷ್ಟಪಟ್ಟು ದುಡಿದು ಮಕ್ಕಳನ್ನು ಹೈಟೆಕ್ ಶಾಲೆಗಳಿಗೆ ದಾಖಲು ಮಾಡಿಸುತ್ತಾರೆ. ಆದರೆ, ಸಾವಿರಾರು ರುಪಾಯಿ ಶುಲ್ಕ ಕಟ್ಟಿಸಿಕೊಂಡ ಅನಧಿಕೃತ ಶಾಲೆಗಳು ಪೋಷಕರ ಆಸೆಗಳಿಗೆ ಬೆಂಕಿ ಹಚ್ಚಲು ಮುಂದಾಗಿವೆ.
ಶಾಲೆಗಳ ದಾಖಲಾತಿ ಪ್ರಕ್ರಿಯೆ ಶುರುವಾಗಿದ್ದರೂ, ಶಿಕ್ಷಣ ಇಲಾಖೆ ಮಾತ್ರ ಮೌನ ವಹಿಸಿದ್ದು, ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನಧಿಕೃತ ಶಾಲೆಗಳ ಪಟ್ಟಿ ಪ್ರಕಟಿಸುವಂತೆ ಕ್ರಮ ಕೈಗೊಳ್ಳಬೇಕು. ಜತೆಗೆ ಆಯಾ ಜಿಲ್ಲೆಗಳ ಪ್ರಮುಖ ಪತ್ರಿಕೆಗಳಲ್ಲಿ ಈ ಪಟ್ಟಿ ಪ್ರಕಟವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಒತ್ತಾಯಿಸುತ್ತಿದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ.
ತಂದೆ-ತಾಯಿ, ಅಜ್ಜಿ-ತಾತ ಗಲಾಟೆ: ಮಗುವಿನ ವಿದ್ಯೆಗೆ ಕುತ್ತು..!
ಅನಧಿಕೃತ ಶಾಲೆಗಳು ಯಾವುವು?
ಶಿಕ್ಷಣ ಇಲಾಖೆಯಿಂದ ಪೂರ್ವಾನುಮತಿ ಇಲ್ಲದೆ ನಡೆಸುತ್ತಿರುವ ಶಾಲೆಗಳು, ಪೂರ್ವಾನುಮತಿ ಇಲ್ಲದೆ ನಡೆಯುತ್ತಿರುವ ತರಗತಿಗಳು (ಉದಾಹರಣೆಗೆ ಪ್ರಾಥಮಿಕ ತರಗತಿಗಳಿಗೆ ಅನುಮತಿ ಪಡೆದು, ಅನುಮತಿ ಇಲ್ಲದೆ ಪ್ರೌಢಶಾಲೆಗಳನ್ನು ನಡೆಸುತ್ತಿರುವ ಶಾಲೆಗಳು) ಅನುಮತಿ ಇಲ್ಲದೆ ನಡೆಯುತ್ತಿರುವ ಪ್ರೀ ಸ್ಕೂಲ್‌ಗಳು, ಎಲ್‌ಕೆಜಿ, ಯುಕೆಜಿ ಶಾಲೆಗಳು, ರಾಜ್ಯ ಪಠ್ಯಕ್ರಮದ ಅನುಮತಿ ಪಡೆದು ತಮ್ಮದು ಸಿಬಿಎಸ್‌ಸಿ/ಐಸಿಎಸ್‌ಸಿ ಎಂದು ಹೇಳಿಕೊಳ್ಳುತ್ತಿರುವ ಶಾಲೆಗಳು, ಇಲಾಖೆಯ ಅನುಮತಿ ಇಲ್ಲದೆ ಸ್ಥಳಾಂತರಗೊಂಡ ಶಾಲೆಗಳು, 2018 ರ ನಂತರ ಆರಂಭವಾದ ಶಾಲೆಗಳ ಪೈಕಿ ಸ್ಥಳದ ಪ್ರಮಾಣ ಇತ್ಯಾದಿ ಕಾನೂನು ರೀತ್ಯ ವ್ಯವಸ್ಥೆಗಳಿಲ್ಲದ ಶಾಲೆಗಳು ಹೀಗೆ ಅನಧಿಕೃತ ಶಾಲೆಗಳನ್ನು ಪತ್ತೆ ಹಚ್ಚ ಬೇಕು. ಆದರೆ, ಇಲಾಖೆ ಅಧಿಕೃತ ಶಾಲೆಗಳನ್ನು ಪಟ್ಟಿಯನ್ನು ನೋಡಿಕೊಂಡು ತಮ್ಮ ಮಕ್ಕಳನ್ನು ದಾಖಲಿಸುವಂತೆ ಇಲಾಖೆ ಪ್ರಕಟಣೆ ಹೊರೆಡಿಸಿರುವುದು ಹಾಸ್ಯಾಸ್ಪದ ಎಂದು ನಾಗರಿಕ ವಲಯದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಖಾಸಗಿ ಅನಧಿಕೃತ ಶಾಲೆಗಳ ವಿಚಾರವಾಗಿ ರಾಜ್ಯ ಮಟ್ಟದ ಸಂಘಟನೆ ಕ್ಯಾಮ್ಸ್ ಈಗಾಗಲೇ ಇಲಾಖೆಯ ಕ್ರಮದ ವಿರುದ್ಧ ಧ್ವನಿ ಎತ್ತಿದ್ದು, ಅನಧಿಕೃತ ಶಿಕ್ಷಣ ಸಂಸ್ಥೆಗಳು ಯಾವುವು ಎಂದು ಮನದಟ್ಟು ಮಾಡಿಕೊಟ್ಟಿದ್ದರು. ಅನಧಿಕೃತ ಶಾಲೆಗಳನ್ನು ರಕ್ಷಿಸಬೇಕು ಎಂಬ ಉದ್ದೇಶದಿಂದಲೇ ಅಧಿಕೃತ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಎಂದು ಖಂಡಿಸಿದೆ.
ಇಲಾಖೆಯ ಮತ್ತೊಂದು ಎಡವಟ್ಟು!
ಶಿಕ್ಷಣ ಇಲಾಖೆ ಸದ್ಯ ಪ್ರಕಟಿಸಿರುವ ಅಧಿಕೃತ ಶಾಲೆಗಳ ಪಟ್ಟಿಯಲ್ಲಿಯೂ ಹಲವಾರು ನ್ಯೂನತೆಗಳು ಪತ್ತೆಯಾಗಿವೆ. ಜಿಲ್ಲೆಯ ಶಾಲೆಯೊಂದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತರಗತಿಗಳನ್ನು ನಡೆಸಲು ಅನುಮತಿ ಪಡೆದುಕೊಂಡಿದೆ. ಆದರೆ ಪ್ರೌಢಶಾಲೆಗೆ ಸಿಕ್ಕ ಅನುಮತಿಯನ್ನು ಪ್ರಕಟಿಸದೆ ಎಡವಟ್ಟು ಮಾಡಿದೆ. ಅಧಿಕೃತ ಶಾಲೆಗಳ ಪಟ್ಟಿಯಲ್ಲಿ ಪ್ರೌಢಶಾಲೆಗೆ ಅನುಮತಿ ಪ್ರಕಟವಾಗದಿರುವ ಬಗ್ಗೆ ಸದರಿ ಶಾಲೆಯ ಪೋಷಕರು ಆ ಶಾಲೆಯ ಬಗ್ಗೆ ಅನುಮಾನ ವ್ಯಕ್ತಪಡುವಂತಾಗಿದೆ. ಶಿಕ್ಷಣ ಇಲಾಖೆ ಪೋಷಕರ ತಾಳ್ಮೆಯನ್ನು ಪರೀಕ್ಷಿಸದೆ ತಕ್ಷಣ ಅನಧಿಕೃತ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ನಾಗರೀಕರು ಆಗ್ರಹಿಸಿದ್ದಾರೆ.
ಶಿಕ್ಷಣ ಇಲಾಖೆ ವೈಫಲ್ಯ
ರಾಮನಗರ ಜಿಲ್ಲೆಯಲ್ಲಿ ಅನಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ ಮಾಡುವ ಬದಲಿಗೆ ಶಿಕ್ಷಣ ಇಲಾಖೆ ಅಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ ಮಾಡಿ ಅಪಹಾಸ್ಯಕ್ಕೆ ಗುರಿಯಾಗಿದೆ. ಅನಧಿಕೃತ ಶಾಲೆಗಳ ಯಾವುದು ಎಂದು ಮಕ್ಕಳ ಪೋಷಕರು ಮತ್ತು ಪಾಲಕರೇ ತಾವೇ ಸ್ವತಃ ಹುಡಿಕಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಅನಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸದಿರುವುದು ಶಿಕ್ಷಣ ಇಲಾಖೆಯ ವೈಫಲ್ಯ ಎಂದು ಟೀಕೆಗಳಿಗೆ ಗುರಿಯಾಗಿದೆ. ಅನಧಿಕೃತ ಶಾಲೆಗಳನ್ನು ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿಲ್ಲ ಏಕೆ ಎಂಬ ಪ್ರಶ್ನೆಗಳು ಉದ್ಬವಿಸಿವೆ.
ರಾಮನಗರ ಜಿಲ್ಲೆಯಲ್ಲಿನ ಅಧಿಕೃತ ಶಾಲೆಗಳ ಪಟ್ಟಿಯನ್ನು ಇಲಾಖೆ ನಿರ್ದೇಶಕರ ಆದೇಶದಂತೆ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದೇವೆ. ಅಧಿಕೃತ ಶಾಲೆಗಳ ಹೆಸರು ಪ್ರಕಟಗೊಂಡ ಮೇಲೆ ಉಳಿದ ಎಲ್ಲ ಶಾಲೆಗಳು ಅನಧಿಕೃತವಾಗಿವೆ. ನಮ್ಮಲ್ಲಿ ಅನಧಿಕೃತ ಶಾಲೆಗಳ ಪಟ್ಟಿಯೂ ಲಭ್ಯವಿದೆ ಎಂದು ರಾಮನಗರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಪುರುಷೋತ್ತಮ್ ಹೇಳಿದ್ದಾರೆ.
ಶಿಕ್ಷಣ ಇಲಾಖೆ ಅನಧಿಕೃತ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಬೇಕಿತ್ತು. ಆದರೆ ಅಧಿಕೃತ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅನಧಿಕೃತ ಶಾಲೆಗಳ ಪಟ್ಟಿ ಬಿಡುಗಡೆಯಾದರೆ ಪೋಷಕರು ಸುಲಭವಾಗಿ ಅಧಿಕೃತ ಶಾಲೆಗಳನ್ನು ಪತ್ತೆ ಹಚ್ಚಬಹುದು. ಈ ವಿಚಾರದಲ್ಲಿ ಡಿಡಿಪಿಐ ಅವರ ಗಮನ ಸೆಳೆಯಲಾಗುವುದು ಎಂದು ಉಸ್ಮಾರ್ಡ್ ಅಧ್ಯಕ್ಷ ಪ್ರದೀಪ್ ತಿಳಿಸಿದ್ದಾರೆ.