ಸಿಇಟಿ ಫಲಿತಾಂಶ ಪ್ರಕಟ ಬೆನ್ನಲ್ಲೇ, ಪಾಲಕರು, ವಿದ್ಯಾರ್ಥಿಗಳು ಪ್ರತಿಭಟನೆ
ಸಿಇಟಿ ರ್ಯಾಂಕ್ ಪಟ್ಟಿಯಲ್ಲಿ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಕಳೆದ ಸಾಲಿನಲ್ಲಿ (2020-21) ದ್ವಿತೀಯ ಪಿಯುಸಿ ಉತ್ತೀರ್ಣರಾಗಿದ್ದ ಅಥವಾ ಪುನರಾವರ್ತಿತ ಸಿಇಟಿ ವಿದ್ಯಾರ್ಥಿಗಳು, ಕೆಲ ಪೋಷಕರು ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಂದೆ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ವರದಿ: ವಿಕ್ರಮ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್ ಬೆಂಗಳೂರು
ಬೆಂಗಳೂರು (ಜು.31): ಸಿಇಟಿ ರ್ಯಾಂಕ್ ಪಟ್ಟಿಯಲ್ಲಿ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಕಳೆದ ಸಾಲಿನಲ್ಲಿ (2020-21) ದ್ವಿತೀಯ ಪಿಯುಸಿ ಉತ್ತೀರ್ಣರಾಗಿದ್ದ ಅಥವಾ ಪುನರಾವರ್ತಿತ ಸಿಇಟಿ ವಿದ್ಯಾರ್ಥಿಗಳು, ಕೆಲ ಪೋಷಕರು ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಂದೆ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಪ್ರಾಧಿಕಾರದ ಕಚೇರಿ ಮುಂದೆ ಜಮಾಯಿಸಿದ್ದ ನೂರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಸರಕಾರ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಉನ್ನತ ಶಿಕ್ಷಣ ಸಚಿವರ ವಿರುದ್ಧ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ರ್ಯಾಂಕ್ ಪಟ್ಟಿ ಪ್ರಕಟಣೆಯಲ್ಲಾಗಿರುವ ಲೋಪ ಸರಿಪಡಿಸಿ ತಮಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
KCET Results 2022; ಸಿಇಟಿ ಫಲಿತಾಂಶ ಬಿಡುಗಡೆ, ಆಗಸ್ಟ್ 5ರಿಂದ ದಾಖಲಾತಿ ಪರಿಶೀಲನೆ
ಸಿಟಿಇ ರ್ಯಾಂಕ್ ಪಟ್ಟಿ ತಯಾರಿಸುವಾಗ ಫಲಿತಾಂಶದ ಜೊತೆಗೆ ದ್ವಿತೀಯ ಪಿಯುಸಿ ವಿಜ್ಞಾನ ವಿಷಯಗಳ ಫಲಿತಾಂಶದ ಶೇ 50ರಷ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ. 2021-22ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಎರಡೂ ಫಲಿತಾಂಶ ಪರಿಗಣಿಸಿ ರ್ಯಾಂಕ್ ಪಟ್ಟಿ ನೀಡಲಾಗಿದೆ. ಆದರೆ, ಪುನರಾವರ್ತಿತ ವಿದ್ಯಾರ್ಥಿಗಳಿಗೆ ಕೇವಲ ಸಿಇಟಿ ಫಲಿತಾಂಶವನ್ನು ಮಾತ್ರ ಪರಿಗಣಿಸಿ ರ್ಯಾಂಕ್ ಪಟ್ಟಿ ನೀಡಲಾಗಿದೆ. ಇದರಿಂದ ನಮಗೆ ಅರ್ಹತೆಗಿಂತ ಕಡಿಮೆ ರ್ಯಾಂಕ್ ಬಂದಿದ್ದು ಅನ್ಯಾಯವಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಅಧಿಕಾರಿಗಳು ಹೇಳೋದೇನು?: 2020-21ನೇ ಸಾಲಿನಲ್ಲಿ ಕೋವಿಡ್ ತೀವ್ರತೆಯಿಂದಾಗಿ ಸರಕಾರ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನೇ ನಡೆಸಿರಲಿಲ್ಲ. ಪರೀಕ್ಷೆಗೆ ನೋಂದಾಯಿಸಿದ್ದ ಎಲ್ಲ ವಿದ್ಯಾರ್ಥಿಗಳನ್ನೂ ಸಾಮೂಹಿಕವಾಗಿ ಉತ್ತೀರ್ಣಗೊಳಿಸಲಾಗಿತ್ತು. ಆ ವರ್ಷ ಸಿಇಟಿ ರ್ಯಾಂಕಿಂಗ್‌ಗೆ ದ್ವಿತೀಯ ಪಿಯು ಅಂಕಗಳನ್ನು ಪರಿಗಣಿಸದೆ ಕೇವಲ ಸಿಇಟಿ ಅಂಕಗಳನ್ನು ಆಧರಿಸಿ ಪಟ್ಟಿ ಬಿಡುಗಡೆಗೆ ಸರಕಾರ ಸೂಚಿಸಿತ್ತು. ಅದರಂತೆ ಕ್ರಮ ವಹಿಸಲಾಗಿತ್ತು. ಈಗ ಕಳೆದ ವರ್ಷದ ವಿದ್ಯಾರ್ಥಿಗಳು ಮತ್ತೆ ಸಿಇಟಿ ಬರೆದಿದ್ದಾರೆ.
Bengaluru: ಬಿಬಿಎಂಪಿ ಕಾಲೇಜು ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ತರಬೇತಿ
ಈಗಲೂ ಕೂಡ ಅವರ ಪಿಯುಸಿ ಅಂಕಗಳನ್ನು ಪರಿಗಣಿಸಲು ಬರುವುದಿಲ್ಲ. ಪರಿಗಣಿಸಿದರೆ ಕಳೆದ ವರ್ಷ ಸಿಇಟಿ ರ್ಯಾಂಕಿಂಗ್ ಪಡೆದಿರುವ ವಿದ್ಯಾರ್ಥಿಗಳಿಗೊಂದು ನ್ಯಾಯ, ಈಗಿನವರಿಗೊಂದು ನ್ಯಾಯ ಎಂಬಂತಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಹೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ವಿದ್ಯಾರ್ಥಿಗಳು ಮತ್ತು ಪಾಲಕರು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರ ಮನೆ ಮುಂದೆಯೂ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.