ಚಿಕ್ಕಮಗಳೂರು: ನೂತನ ಕೇಂದ್ರೀಯ ವಿದ್ಯಾಲಯ ಕಟ್ಟಡ ಲೋಕಾರ್ಪಣೆ
ಹಲವಾರು ದಶಕಗಳಿಂದ ಕೇಂದ್ರಿಯ ಶಾಲೆ ಆರಂಭಕ್ಕೆ ಬೇಡಿಕೆ ಇದ್ದು 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನವೋದಯ ಮತ್ತು ಕೇಂದ್ರಿಯ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಉತ್ತಮ ಹಾಗೂ ರಾಷ್ಟ್ರೀಯ ಮಟ್ಟದ ಶಿಕ್ಷಣ ನೀಡಬೇಕೆಂದು ತೀರ್ಮಾನ ಕೈಗೊಂಡಿದ್ದರಿಂದ ಇಲ್ಲಿಗೆ ಕೇಂದ್ರಿಯ ಶಾಲೆಯನ್ನು ಮಂಜೂರು ಮಾಡಿತೆಂದು ವಿವರಿಸಿದ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಫೆ.20): ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವು ದಶಕಗಳ ಬೇಡಿಕೆಯಾಗಿದ್ದ ಕೇಂದ್ರಿಯ ಶಾಲೆಗೆ ಸುಸಜ್ಜಿತ ಕಟ್ಟಡ ಲೋಕಾರ್ಪಣೆ ಆಗುವ ಮೂಲಕ ಬಹುದಿನದ ಕನಸು ಈಡೇರಿದಂತಾಗಿದೆ.ಚಿಕ್ಕಮಗಳೂರು ನಗರಕ್ಕೆ ಸಮೀಪದ ಕದ್ರಿಮಿದ್ರಿಯಲ್ಲಿ ನಿರ್ಮಾಣವಾಗಿರುವ ಕೇಂದ್ರಿಯ ಶಾಲೆಯ ಭವ್ಯ ಕಟ್ಟಡವನ್ನು ಜಮ್ಮು ಕಾಶ್ಮೀರದಲ್ಲಿ ಏರ್ಪಡಿಸಲಾಗಿದ್ದ ವರ್ಚ್ಯುಯಲ್ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ವಿವಿಧ ಕೇಂದ್ರಯ ಶಾಲೆಗಳೊಂದಿಗೆ ಈ ಜಿಲ್ಲೆಯ ಕೇಂದ್ರಿಯ ಶಾಲಾ ಕಟ್ಟಡವನ್ನು ಲೋಕಾರ್ಪಣೆ ಮಾಡಿದರು.
ಕೇಂದ್ರ ಸಚಿವೆಯಿಂದ ಲೋಕಾರ್ಪಣೆ :
ಪ್ರಧಾನಿ ನರೇಂದ್ರ ಮೋದಿಯವರು ವರ್ಚ್ಯುಯಲ್ ಕಾರ್ಯಕ್ರಮದ ಮೂಲಕ ಶಾಲಾಕಟ್ಟಡ ಲೋಕಾರ್ಪಣೆ ಮಾಡುತ್ತಿದ್ದಂತೆಯೇ ಶಾಲಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಕೇಂದ್ರ ಸಚಿವರಾಗಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾಕರಂದ್ಲಾಜೆ ಅವರು ಉದ್ಘಾಟನಾ ಫಲಕವನ್ನು ಅನಾವರಣಾಗೊಳಿಸುವ ಮೂಲಕ ಜಿಲ್ಲಾಕೇಂದ್ರದ ಸುಸಜ್ಜಿತ ಕೇಂದ್ರಿಯ ಶಾಲಾ ಕಟ್ಟಡವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು.
ಕಾಡಾನೆ ದಾಳಿಗೆ ಸಾವನ್ನಪ್ಪಿದ ಕೇರಳ ವ್ಯಕ್ತಿಗೆ ಕೆಪಿಸಿಸಿಯಿಂದ 15 ಲಕ್ಷ ಪರಿಹಾರ ಕೊಡಿ: ಸಿಟಿ ರವಿ ಆಕ್ರೋಶ
ಈ ಸಂದರ್ಭದಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ ಅವರು ಹಲವಾರು ದಶಕಗಳಿಂದ ಕೇಂದ್ರಿಯ ಶಾಲೆ ಆರಂಭಕ್ಕೆ ಬೇಡಿಕೆ ಇದ್ದು 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನವೋದಯ ಮತ್ತು ಕೇಂದ್ರಿಯ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಉತ್ತಮ ಹಾಗೂ ರಾಷ್ಟ್ರೀಯ ಮಟ್ಟದ ಶಿಕ್ಷಣ ನೀಡಬೇಕೆಂದು ತೀರ್ಮಾನ ಕೈಗೊಂಡಿದ್ದರಿಂದ ಇಲ್ಲಿಗೆ ಕೇಂದ್ರಿಯ ಶಾಲೆಯನ್ನು ಮಂಜೂರು ಮಾಡಿತೆಂದು ವಿವರಿಸಿದರು.
ಕೇಂದ್ರ ಸರ್ಕಾರದಿಂದ ಬಂದಿರುವಷ್ಟು ಅನುದಾನ ಬೇರಾವ ಜಿಲ್ಲೆಗೂ ಬಂದಿಲ್ಲ :
ಕೇಂದ್ರದಿಂದ ಮಂಜೂರಾದ ಶಾಲೆಗೆ ಜಿಲ್ಲಾಡಳಿತ ಜಮೀನು ಒದಗಿಸಿದ್ದರಿಂದ ಸುಸಜ್ಜಿತವಾದ ಕಟ್ಟಡ ನಿರ್ಮಿಸಲು ಸಾಧ್ಯವಾಯಿತು. ಇದಕ್ಕಾಗಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಅಭಿನಂದಿಸಿದ ಸಂಸದರು ಕೇಂದ್ರದಿಮದ ಹಣ ಕೊಡಿಸಬಹುದು ಆದರೆ ಜಮೀನು ಸಿಗದಿದ್ದರೆ ಯಾವುದೇ ಅಭಿವೃದ್ಧಿ ಕೆಲಸ ಮಾಡಲಾಗುವುದಿಲ್ಲ ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸಹಕಾರ ಪ್ರಶಂಸನೀಯ ಎಂದರು.ಬಡವರು, ಸಾಮಾನ್ಯರು ಎಲ್ಲಾ ವರ್ಗದ ಜನರಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಶಿಕ್ಷಣ ದೊರೆಯಲು ಈ ಶಾಲೆಯಿಂದ ಅನುಕೂಲವಗಲಿದೆ ಸ್ಥಳೀಯ ಆಡಳಿತ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮಪಂಚಾಯಿತಿ ಈ ಶಾಲೆಗೆ ಅಗತ್ಯ ಸೌಲಭ್ಯ ನೀಡಬೇಕೆಂದು ಸೂಚಿಸಿದರು.
ಈ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಭಿವೃದ್ಧಿಗೆ 400 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಬೇಲೂರು ಚಿಕ್ಕಮಗಳೂರು ರೈಲ್ವೆ ಮಾರ್ಗ ನಿರ್ಮಾಣ ಸೇರಿದಂತೆ ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ್ದು ಇಡೀ ರಾಜ್ಯದಲ್ಲಿ ಈ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಬಂದಿರುವಷ್ಟು ಹಣ ಬೇರಾವ ಜಿಲ್ಲೆಗೂ ಬಂದಿಲ್ಲ ಎಂದು ಹೇಳಿದರು. ಕೇಂದ್ರಿಯ ಶಾಲೆಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.