ಕನ್ನಡದಲ್ಲೂ ಇನ್ನು ಎಂಜಿನಿಯರಿಂಗ್: ಐಐಟಿ, ಎನ್‌ಐಟಿಯಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ!
ಐಐಟಿ, ಎನ್‌ಐಟಿಯಲ್ಲಿ ಕನ್ನಡದಲ್ಲೂ ಶಿಕ್ಷಣ| 2021ರಿಂದ ಪ್ರಾದೇಶಿಕ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣ| ಶಿಕ್ಷಣ ಸಚಿವರ ಉನ್ನತ ಪರಿಶೀಲನಾ ಸಭೆ ನಿರ್ಧಾರ
ನವದೆಹಲಿ(ನ.27): ಮುಂದಿನ ಶೈಕ್ಷಣಿಕ ಸಾಲಿನಿಂದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಹಾಗೂ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ)ಗಳಲ್ಲಿ ಮಾತೃ ಭಾಷೆಗಳಲ್ಲೂ ಶಿಕ್ಷಣ ಆರಂಭವಾಗಲಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರೊಂದಿಗೆ ಕನ್ನಡದಲ್ಲೂ ಎಂಜಿನಿಯರಿಂಗ್ ವ್ಯಾಸಂಗ ಮಾಡಲು ಹಾದಿ ಸುಗಮವಾಗಿದೆ.
ದುಬೈನಲ್ಲಿ ಕನ್ನಡ ಕಂಪು...! ವಾರದ ರಜೆಯಲ್ಲಿ ಕುಳಿತು ಕನ್ನಡ ಕಲೀತಾರೆ ಪುಟ್ಟ ಮಕ್ಕಳು
ತಾಂತ್ರಿಕ ಶಿಕ್ಷಣ ಅದರಲ್ಲೂ ವಿಶೇಷವಾಗಿ ಎಂಜಿನಿಯರಿಂಗ್ ಕೋರ್ಸುಗಳನ್ನು ಮಾತೃಭಾಷೆಯಲ್ಲಿ ಒದಗಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದು ಮುಂದಿನ ಶೈಕ್ಷಣಿಕ ಸಾಲಿನಿಂದಲೇ ಆರಂಭವಾಗಲಿದೆ. ಇದಕ್ಕಾಗಿ ಕೆಲವು ಐಐಟಿ ಹಾಗೂ ಎನ್‌ಐಟಿಗಳನ್ನು ಅಂತಿಮಗೊಳಿಸಲಾಗಿದೆ. ಗುರುವಾರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ಅವರು ನಡೆಸಿದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹಿಂದಿ ಹಾಗೂ ಇಂಗ್ಲಿಷ್ ಮಾತ್ರವೇ ಅಲ್ಲದೆ ಕನ್ನಡ ಸೇರಿ 9 ಪ್ರಾದೇಶಿಕ ಭಾಷೆಗಳಲ್ಲೂ 2021ರಿಂದ ಜೆಇಇ (ಮೇನ್) ಪರೀಕ್ಷೆಯನ್ನು ನಡೆಸಲು ಕಳೆದ ತಿಂಗಳಷ್ಟೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಘೋಷಿಸಿತ್ತು. ಆದರೆ ಜೆಇಇ (ಅಡ್ವಾನ್ಸ್$್ಡ) ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಯಲ್ಲಿ ನೀಡಬೇಕೆ ಎಂಬ ಬಗ್ಗೆ ಐಐಟಿಗಳು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.
ಮರಾಠಿಗೊಬ್ಬ ಪಾಪು ಇದ್ದಿದ್ದರೆ ಗಡಿ ತಂಟೆ ಇರ್ತಿರಲಿಲ್ಲ: ಮರಾಠಿ ಪತ್ರಿಕೆಯಲ್ಲಿ ಉಲ್ಲೇಖ!
ಇದೇ ವೇಳೆ, ಶಾಲಾ ಶಿಕ್ಷಣ ಮಂಡಳಿಗಳ ಸದ್ಯದ ಪರಿಸ್ಥಿತಿಯನ್ನು ಪರಾಮರ್ಶೆ ನಡೆಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪಠ್ಯಕ್ರಮ ರೂಪಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸೂಚಿಸಲಾಗಿದೆ. ಜೆಇಇ (ಮೇನ್) ಹಾಗೂ ನೀಟ್-ಯುಜಿ ಮತ್ತಿತರೆ ಕೋರ್ಸುಗಳಿಗೆ ಎನ್‌ಟಿಎ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತದೆ.