ಪಿಯು ಪ್ರವೇಶಕ್ಕೆ ರಾಜ್ಯದೆಲ್ಲೆಡೆ ಭಾರೀ ಡಿಮ್ಯಾಂಡ್
* ಭರ್ಜರಿ ಬೇಡಿಕೆ
* ಎಸ್ಸೆಸ್ಸೆಲ್ಸಿಯಲ್ಲಿ ನಿರೀಕ್ಷೆ ಮೀರಿ ಫಲಿತಾಂಶ ಬಂದಿದ್ದರ ಎಫೆಕ್ಟ್
* ಖಾಸಗಿ ಕಾಲೇಜುಗಳಲ್ಲಿ 3 ಪಟ್ಟು ಹೆಚ್ಚು ಅರ್ಜಿ ಬಿಕರಿ
ಬೆಂಗಳೂರು(ಮೇ.21): ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾದ ಮರುದಿನವೇ ರಾಜ್ಯಾದ್ಯಂತ ಪದವಿ ಪೂರ್ವ ಕಾಲೇಜುಗಳ ಪ್ರವೇಶಕ್ಕಾಗಿ ವಿದ್ಯಾರ್ಥಿಗಳು ಮುಗಿಬಿದ್ದಿದ್ದು ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಗಿಟ್ಟಿಸಲು ತೀವ್ರ ಪೈಪೋಟಿ ಸೃಷ್ಟಿಯಾಗಿದೆ.
ಕೊರೋನಾದಿಂದ ಉಂಟಾದ ಆರ್ಥಿಕ ಸಂಕಷ್ಟದಿಂದ ಕಳೆದ ವರ್ಷದಂತೆ ಈ ವರ್ಷವೂ ಸರ್ಕಾರಿ ಪಿಯು ಕಾಲೇಜುಗಳ ಪ್ರವೇಶಕ್ಕೆ ಬೇಡಿಕೆ ಹೆಚ್ಚಿದೆ. ಪರಿಣಾಮ ಫಲಿತಾಂಶ ಪ್ರಕಟವಾದ ಮರು ದಿನವೇ ನೂರಾರು ವಿದ್ಯಾರ್ಥಿಗಳು ಪ್ರತಿಷ್ಠಿತ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಅರ್ಜಿ ಪಡೆಯಲು ಮುಗಿ ಬಿದ್ದಿದ್ದಾರೆ.
SSLC ಫಲಿತಾಂಶಕ್ಕೆ ದಿನ ನಿಗದಿ, PUC ಯದ್ದೂ ಶೀಘ್ರವೇ ಪ್ರಕಟ
ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾದ ಮರು ದಿನದಿಂದಲೇ ಪ್ರಥಮ ಪಿಯು ಕಾಲೇಜುಗಳ ಪ್ರವೇಶಕ್ಕೆ ಅನುಮತಿ ನೀಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಹೀಗಾಗಿ ಗುರುವಾರವಷ್ಟೇ ಫಲಿತಾಂಶ ಪಡೆದಿರುವ ವಿದ್ಯಾರ್ಥಿಗಳು ಶುಕ್ರವಾರದಿಂದಲೇ ಪಿಯು ಕಾಲೇಜುಗಳತ್ತ ಧಾವಿಸಿ ಬಂದು ಅರ್ಜಿ ಪಡೆಯಲು ಶುರು ಮಾಡಿದ್ದಾರೆ. ಪ್ರಸ್ತುತ ವರ್ಷ ಉತ್ತಮ ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ಹೆಚ್ಚು ಮಂದಿ ಪಿಯು ಪ್ರವೇಶಕ್ಕೆ ಅಣಿಯಾಗಿದ್ದಾರೆ. ಹೀಗಾಗಿ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಕೆಲ ಕಾಲೇಜುಗಳು ಕಟ್ ಆಫ್ ಅಂಕ ಹೆಚ್ಚಿಸುವ ಚಿಂತನೆ ನಡೆಸಿವೆ.
PUC Result ವಾರಾಂತ್ಯದಲ್ಲಿ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ!
ವಾಣಿಜ್ಯ ವಿಭಾಗದ ಪ್ರವೇಶಕ್ಕೆ ಬೇಡಿಕೆ:
ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಮೊದಲ ದಿನವೇ ಲಭ್ಯ ಸೀಟಿಗಿಂತ ಎರಡು ಮೂರು ಪಟ್ಟು ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಪಡೆದಿದ್ದಾರೆ. ಪ್ರತೀ ಬಾರಿಯಂತೆ ಎಲ್ಲ ಮಾದರಿಯ ಕಾಲೇಜುಗಳಲ್ಲೂ ವಾಣಿಜ್ಯ ವಿಭಾಗದ ಸಿಇಬಿಎ ಮತ್ತು ಎಸ್‌ಇಬಿಎ ಕಾಂಬಿನೇಷನ್‌ಗೆ ಎಲ್ಲಿಲ್ಲದ ಬೇಡಿಕೆ ಕಂಡುಬರುತ್ತಿದೆ. ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಕೋರಿ ಬರುತ್ತಿರುವ ಅರ್ಧಕ್ಕೂ ಹೆಚ್ಚು ಮಕ್ಕಳು ಈ ಒಂದೇ ವಿಭಾಗಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ನಂತರ ಸ್ಥಾನದಲ್ಲಿ ವಿಜ್ಞಾನ ವಿಭಾಗದ ಪಿಸಿಎಂಬಿ ಮತ್ತು ಪಿಸಿಎಂಸಿ ಕಾಂಬಿನೇಷನ್‌ಗೆ ಹೆಚ್ಚು ಅರ್ಜಿಗಳು ಬರುತ್ತಿವೆ ಎನ್ನುತ್ತಾರೆ ವಿವಿಧ ಕಾಲೇಜುಗಳ ಪ್ರಾಂಶುಪಾಲರು.
ಸರ್ಕಾರಿ ಕಾಲೇಜಿಗೂ ಬೇಡಿಕೆ:
ಕೊರೋನಾದಿಂದ ಎದುರಾದ ಆರ್ಥಿಕ ಸಂಕಷ್ಟದಿಂದ ಕಳೆದ ವರ್ಷ ಸರ್ಕಾರಿ ಕಾಲೇಜುಗಳ ಪ್ರವೇಶಕ್ಕೆ ಬೇಡಿಕೆ ಹೆಚ್ಚಿತ್ತು. ಇದೇ ಟ್ರೆಂಡ್ ಈ ವರ್ಷವೂ ಮುಂದುವರೆದಿದೆ. ಸರ್ಕಾರಿ ಕಾಲೇಜುಗಳಲ್ಲೂ ವಾಣಿಜ್ಯ ವಿಷಯಗಳ ಕಾಂಬಿನೇಷನ್ ಜೊತೆಗೆ ಕಲಾ ವಿಭಾಗದ ಕಾಂಬಿನೇಷನ್‌ಗಳಿಗೂ ಬೇಡಿಕೆ ಹೆಚ್ಚಾಗಿದೆ. ವಿಜ್ಞಾನ ವಿಷಯಗಳಿಗೆ ಬೇಡಿಕೆ ಸಾಧಾರಣ ಎಂದು ಕೆಲ ಕಾಲೇಜುಗಳ ಪ್ರಾಂಶುಪಾಲರು ತಿಳಿಸಿದ್ದಾರೆ. ಇನ್ನು ಅರ್ಜಿ ಸಲ್ಲಿಸಲು ಸಾಕಷ್ಟುದಿನಗಳ ಕಾಲಾವಕಾಶವಿದ್ದರೂ ಕೆಲವರು ಮೊದಲ ದಿನವೇ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುತ್ತಿರುವುದೂ ಕಂಡುಬಂತು.