Hijab Row: ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ಬೇಡ, ಏಕೆ?
ಬೇರೆ ಬೇರೆ ಪ್ರಕರಣಗಳಲ್ಲಿ ಬಂದ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ನ ತೀರ್ಪುಗಳು ಶಿಕ್ಷಣ ಸಂಸ್ಥೆಯ ವಸ್ತ್ರ ಸಂಹಿತೆಯನ್ನೇ ಎತ್ತಿಹಿಡಿದಿವೆ. ಶಾಲೆಯಲ್ಲಿ ಸ್ಕಾಫ್‌ರ್ ಅಥವಾ ಹಿಜಾಬ್ ಧರಿಸದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪುಗಳಿವೆ.
ಶಿಕ್ಷಣ ಸಂಸ್ಥೆಯೆಂಬುದು ಪ್ರತಿ ವಿದ್ಯಾರ್ಥಿಯೂ ಸಮಾನ ಎಂಬ ಭಾವ ನೀಡುವ ಪವಿತ್ರ ಸ್ಥಳ. ಶಿಕ್ಷಣವೇ ಮೂಲಭೂತ ಆದ್ಯತೆಯಾಗಬೇಕಿದ್ದ ಶಿಕ್ಷಣ ಸಂಸ್ಥೆಗಳಲ್ಲಿ ಇದೀಗ ಹಿಜಾಬ್ ಬಗ್ಗೆ ವಿವಾದ ಎದ್ದಿದೆ. ಕೆಲವು ವ್ಯಕ್ತಿಗಳು ಮುಗ್ಧ ಮಕ್ಕಳ ಮನಸ್ಸಲ್ಲಿ ಧಾರ್ಮಿಕ ವಿಷ ಬೀಜ ಬಿತ್ತಿ ದೇಶದ ಸೌಹಾರ್ದತೆಯನ್ನು ಕದಡುತ್ತಿದ್ದಾರೆ. ಆದರೆ ಶಿಕ್ಷಣ ಸಂಸ್ಥೆಗಳು ಎರಡು ಸಮುದಾಯದ ನಡುವಿನ ಯುದ್ಧಭೂಮಿಯಾಗಲು ನಾವು ಬಿಡುವುದಿಲ್ಲ.
ಸಮವಸ್ತ್ರ ಸಮಾನತೆ ಹಾಗೂ ಭ್ರಾತೃತ್ವದ ಸಂಕೇತ. ಬಡವ ಬಲ್ಲಿದ, ಮೇಲು-ಕೀಳು ಎಂಬ ತಾರತಮ್ಯ ಮಕ್ಕಳನ್ನು ಕಾಡಬಾರದು ಎಂಬ ಸದುದ್ದೇಶದಿಂದಲೇ ಸಮವಸ್ತ್ರ ಜಾರಿ ಮಾಡಲಾಗಿದೆ. ಇಲ್ಲಿ ಧರ್ಮವೊಂದರ ಪ್ರತೀಕವಾಗಿರುವ ವಸ್ತ್ರ ಧರಿಸಲೇಬೇಕೆಂಬ ವಾದ ಅರ್ಥರಹಿತ. ಮೇಲಾಗಿ ಮುಸ್ಲಿಂ ಸಮುದಾಯದ ಎಲ್ಲಾ ವಿದ್ಯಾರ್ಥಿನಿಯರೂ ಹಿಜಾಬ್ ಧರಿಸಲೇಬೇಕೆಂದು ಹೋರಾಟ ಮಾಡುತ್ತಿಲ್ಲ. ಆದರೆ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಕಾಣದ ಕೈಗಳು ಸಂಚು ನಡೆಸಿವೆ. ಕೆಲವು ಪಕ್ಷಗಳು ಕೇವಲ ರಾಜಕೀಯವನ್ನಷ್ಟೇ ಮಾಡಲು ಹುಟ್ಟಿವೆ. ಅವರಿಗೆ ರಾಷ್ಟ್ರದ ಪ್ರಗತಿ, ಏಕತೆಯ ಬಗ್ಗೆ ಕಾಳಜಿ ಇಲ್ಲ. ಇಂಥವರು ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂವಿಧಾನದಲ್ಲಿ ಅವಕಾಶ ಇದೆಯಾದರೂ, ಶಿಕ್ಷಣ ಸಂಸ್ಥೆಗಳಲ್ಲಿ ಅದಕ್ಕೆ ಅವಕಾಶ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
Hijab Controversy 'ಕಾಲೇಜಿನಲ್ಲಿ ಹಿಜಾಬ್ ಧರಿಸುವವರಿಗೆ TC ಕೊಟ್ಟು, ಒದ್ದು ಮನೆಗೆ ಕಳುಹಿಸಿ'
ಸಂವಿಧಾನ ಏನು ಹೇಳುತ್ತದೆ?
ಸಂವಿಧಾನದ ಆರ್ಟಿಕಲ್ 25 ದೇಶದ ಪ್ರತಿ ನಾಗರಿಕನೂ ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಯಾವುದೇ ಧರ್ಮವನ್ನು ಸ್ವೀಕರಿಸುವ, ಆಚರಿಸುವ, ಆರಾಧಿಸುವ, ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ, ಅದು ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದು ಪ್ರತಿಪಾದಿಸುತ್ತದೆ. ಆದರೆ ಇದೇ ವಿಧಿಯ 2(ಎ) ಮತ್ತು (ಬಿ)ನಲ್ಲಿ ರಾಜ್ಯದ ಹಿತದೃಷ್ಟಿಯಿಂದ ಮೇಲ್ಕಂಡ ನಿಬಂಧನೆಗಳ ಬಗ್ಗೆ ಅಗತ್ಯ ಕಾನೂನು ಜಾರಿ ಮಾಡಿ ನಿರ್ಬಂಧಿಸಲೂ ಅನುವು ಮಾಡಿಕೊಡಲಾಗಿದೆ. ಸಂವಿಧಾನದ ಭಾಗ-3ರಲ್ಲಿ ಯಾವುದೇ ವ್ಯಕ್ತಿ ಧಾರ್ಮಿಕ ಹಕ್ಕು ಅಥವಾ ಇನ್ಯಾವುದೇ ಮೂಲಭೂತ ಹಕ್ಕುಗಳ ಹೆಸರಲ್ಲಿ ಸಾರ್ವಜನಿಕ ನೀತಿಯನ್ನು ವಿರೋಧಿಸುವ, ಅಸಹಿಷ್ಣುತೆಯನ್ನು ಸೃಷ್ಟಿಸುವ ಕೆಲಸ ಮಾಡುವಂತಿಲ್ಲ ಎಂದೂ ಹೇಳಲಾಗಿದೆ.
ಇನ್ನು ಕರ್ನಾಟಕ ಶಿಕ್ಷಣ ಕಾಯ್ದೆ-1983 ಸೆಕ್ಷನ್ 7(2)ರ ಪ್ರಕಾರ, ಸರ್ಕಾರಿ ಪಠ್ಯಕ್ರಮ ಇತ್ಯಾದಿಗಳಲ್ಲಿ ಸಾಮರಸ್ಯ ಮತ್ತು ಸೋದರತ್ವ ಮನೋಭಾವ ಉತ್ತೇಜಿಸಿ ಧಾರ್ಮಿಕ, ಭಾಷಾ ಮತ್ತು ಪ್ರಾದೇಶಿಕ ಅಥವಾ ವಿಭಾಗೀಯ ವೈವಿಧ್ಯತೆಗಳನ್ನು ಮೀರಿ ನೈತಿಕ ಶಿಕ್ಷಣಕ್ಕೆ ಒತ್ತು ನೀಡಬೇಕು ಮತ್ತು ಮಹಿಳೆಯರ ಘನತೆಗೆ ಚ್ಯುತಿ ತರುವ ಆಚರಣೆಗಳನ್ನು ತ್ಯಜಿಸಬೇಕು ಎಂದು ಹೇಳಲಾಗಿದೆ.
ಕೋರ್ಟ್‌ಗಳ ಆದೇಶ ಏನು?
ಭಾರತದಲ್ಲಿ ವಸ್ತ್ರಸಂಹಿತೆ ಕುರಿತ ವಿವಾದಗಳು ಹೊಸದೇನಲ್ಲ. ಈ ಹಿಂದೆ ಇಂಥದ್ದೇ ಸಂದರ್ಭಗಳಲ್ಲಿ ಸುಪ್ರೀಂಕೋರ್ಟ್ ಮತ್ತು ಹಲವು ರಾಜ್ಯಗಳ ಹೈಕೋರ್ಟ್‌ಗಳು ಶಿಕ್ಷಣ ಸಂಸ್ಥೆಗಳ ವಸ್ತ್ರಸಂಹಿತೆ ನೀತಿಯನ್ನು ಎತ್ತಿಹಿಡಿದ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಸುಪ್ರೀಂಕೋರ್ಟ್ ಭಾರತೀಯ ಸೇನೆಯ ನರ್ಸಿಂಗ್ ಸೇವೆ ಸದಸ್ಯರಿಗೆ ಸೂಚಿಸಲಾದ ವಸ್ತ್ರಸಂಹಿತೆಯನ್ನು ಎತ್ತಿ ಹಿಡಿದಿದೆ. ಫಾತಿಮಾ ಹುಸೇನ್ ಸಯೀದ್ ವರ್ಸಸ್ ಭಾರತ್ ಶಿಕ್ಷಣ ಸಮಾಜ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್, ಶಾಲೆ ಪ್ರವೇಶಿಸುವಾಗ ಸ್ಕಾರ್ಫ್ ಅಥವಾ ಹಿಜಾಬ್ ಧರಿಸದಂತೆ ಸೂಚಿಸಿದೆ. ಅಲ್ಲದೆ ಈ ಸೂಚನೆ ಸಂವಿಧಾನದ ಪರಿಚ್ಛೇದ 25ರ ಉಲ್ಲಂಘನೆ ಅಲ್ಲವೆಂದೂ ಸ್ಪಷ್ಟಪಡಿದೆ.
ವಿ.ಕಮಲಂ ವರ್ಸಸ್ ತಮಿಳುನಾಡಿನ ಡಾ.ಎಂಜಿಆರ್ ಮೆಡಿಕಲ್ ವಿಶ್ವವಿದ್ಯಾಲಯ ಕೇಸ್‌ನಲ್ಲಿ ಮದ್ರಾಸ್ ಹೈಕೋರ್ಟ್ ಯುನಿವರ್ಸಿಟಿಯ ವಸ್ತ್ರಸಂಹಿತೆಯನ್ನು ಎತ್ತಿ ಹಿಡಿದಿದೆ. ಫಾತಿಮಾ ತಸ್ನೀಮ್ ಮತ್ತು ಇತರರು ವರ್ಸಸ್ ಕೇರಳ ರಾಜ್ಯ ಸರ್ಕಾರದ ಪ್ರಕರಣದಲ್ಲಿ ಸ್ಕಾಫ್‌ರ್ ಮತ್ತು ಪೂರ್ಣ ತೋಳಿನ ಶರ್ಟ್ ಧರಿಸಿ ವಿಶ್ವವಿದ್ಯಾಲಯಕ್ಕೆ ಪ್ರವೇಶ ಇಲ್ಲ ಎಂಬ ಸುಪ್ರೀಂಕೋರ್ಟ್ ಆದೇಶವನ್ನು ಕೇರಳ ಹೈಕೋರ್ಟ್ ಸಹ ಎತ್ತಿ ಹಿಡಿದಿತ್ತು.
Hijab ಧರಿಸೋದು ಮೂಲಭೂತ ಹಕ್ಕೆಂದು ಘೋಷಿಸಿ: ಹೈಕೋರ್ಟ್ ಮೆಟ್ಟಿಲೇರಿದ ಉಡುಪಿ ವಿದ್ಯಾರ್ಥಿನಿ
ಫ್ರಾನ್ಸ್‌ನಲ್ಲಿ ಹಿಜಾಬ್‌ಗೆ ದಂಡ
ಭಾರತದಲ್ಲಿ ಮಾತ್ರ ಅಲ್ಲ ಜಗತ್ತಿನ ಬೇರೆ ಬೇರೆ ದೇಶಗಳಲ್ಲೂ ಇಂಥದ್ದೇ ವಿವಾದಗಳು ಆಗಾಗ ಮುನ್ನೆಲೆಗೆ ಬಂದಿದ್ದವು. ಇಂಥ ಸಂದರ್ಭದಲ್ಲಿ ಬಹುತೇಕ ದೇಶಗಳಲ್ಲಿ ಹಿಜಾಬ್ ಅಥವಾ ಸ್ಕಾಫ್‌ರ್ ಧರಿಸಿ ಶಾಲೆಗೆ ಪ್ರವೇಶ ಇಲ್ಲ ಎಂದೇ ಕಾನೂನು ರೂಪಿಸಲಾಗಿದೆ. ಪಶ್ಚಿಮ ಯುರೋಪ್ ದೇಶಗಳಲ್ಲಿಯೇ ಮೊಟ್ಟಮೊದಲ ಬಾರಿಗೆ 2010ರಲ್ಲಿ ಫ್ರಾನ್ಸ್ ಇಸ್ಲಾಮಿಕ್ ದುಪಟ್ಟಾ ಅಥವಾ ಹಿಜಾಬ್ ಧರಿಸುವುದನ್ನು ನಿಷೇಧಿಸಿದೆ. ಸಾರ್ವಜನಿಕ ಪ್ರದೇಶ, ಸರ್ಕಾರಿ ಕಚೇರಿಗಳಲ್ಲಿ ಬುರ್ಖಾವನ್ನೂ ನಿಷೇಧಿಸಿದೆ. ಹಿಜಾಬ್ ಧರಿಸುವ ಮಹಿಳೆಯರು ಧಾರ್ಮಿಕ ಸಮುದಾಯವನ್ನು ಪ್ರತಿಬಿಂಬಿಸುತ್ತಾರೆ.
ಇದು ಫ್ರೆಂಚ್ ಗಣರಾಜ್ಯದ ಏಕತೆ ಮತ್ತು ಜಾತ್ಯತೀತ ತತ್ವಕ್ಕೆ ವಿರೋಧಿ. ಹಾಗಾಗಿ ಶಾಲೆಗಳಲ್ಲಿ ಹಿಜಾಬ್ ಧರಿಸುವುದು ಈ ಜಾತ್ಯತೀತ, ಸಮಾನತೆಯ ತತ್ವವನ್ನು ತಲೆಕೆಳಗು ಮಾಡುತ್ತದೆ ಎಂದು ಅದು ಭಾವಿಸುತ್ತದೆ ಎಂದು ಫ್ರಾನ್ಸ್‌ನ ಕಾಯ್ದೆ ಹೇಳುತ್ತದೆ. ಅಲ್ಲದೆ ಈ ಕಾನೂನು ಉಲ್ಲಂಘಿಸುವ ಮಹಿಳೆಯರಿಗೆ 150 ಯುರೋ ದಂಡ ವಿಧಿಸಲಾಗುತ್ತದೆ. ತಮ್ಮ ಪತ್ನಿಯರಿಗೆ ಬುರ್ಖಾ ಅಥವಾ ಹಿಜಾಬ್ ಧರಿಸುವಂತೆ ಬಲವಂತ ಮಾಡುವ ಪುರುಷರಿಗೂ ಒಂದು ವರ್ಷ ಜೈಲು ಶಿಕ್ಷೆ ಮತ್ತು 30,000 ಯುರೋ ದಂಡ ವಿಧಿಸುವ ಕಾನೂನು ಫ್ರಾನ್ಸ್‌ನಲ್ಲಿ ಜಾರಿಯಲ್ಲಿದೆ.
ಅಪ್ರಾಪ್ತರಿಗೆ ಈ ರೀತಿಯ ಬಲವಂತ ಮಾಡಿದಲ್ಲಿ 60,000 ಯುರೋ ದಂಡ ಮತ್ತು 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಈ ಕಾನೂನು ಪ್ರವಾಸಿಗರಿಗೂ ಅನ್ವಯ. 2014ರಲ್ಲಿ ಬುರ್ಖಾ ನಿಷೇಧ ಕಾನೂನನ್ನು ಯುರೋಪಿಯನ್ ಮಾನವ ಹಕ್ಕುಗಳ ಕೋರ್ಟ್ ಸಹ ಎತ್ತಿ ಹಿಡಿದಿದೆ. ಆದರೆ ಅಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರು ಮನೆಯಲ್ಲಿ, ಬೀದಿಗಳಲ್ಲಿ ಹಿಜಾಬ್ ಅಥವಾ ಬುರ್ಖಾ ಧರಿಸಲು ಅವಕಾಶ ಇದೆ. ಆದಾಗ್ಯೂ ಹಿಜಾಬ್ ಮಹಿಳೆಯರು ಎದುರಿಸುತ್ತಿರುವ ದಬ್ಬಾಳಿಕೆಯ ಸಂಕೇತ ಎಂದು ಫ್ರಾನ್ಸ್ ಭಾವಿಸುತ್ತದೆ.
ಬೇರೆ ದೇಶಗಳಲ್ಲಿ ನಿಯಮ ಹೇಗಿದೆ?
ಬೆಲ್ಜಿಯಂ 2011ರಿಂದ ಪೂರ್ಣ ಪ್ರಮಾಣದಲ್ಲಿ ಮುಖವನ್ನು ಮುಚ್ಚುವಂತೆ ಹಿಜಾಬ್ ಧರಿಸುವುದನ್ನು ನಿಷೇಧಿಸಿದೆ. ಈ ರೀತಿಯ ವಸ್ತ್ರ ಧರಿಸಿದ ಮಹಿಳೆಯರಿಗೆ 1,378 ಯುರೋ ದಂಡ ಮತ್ತು 7 ದಿನಗಳ ವರೆಗೆ ಜೈಲು ಶಿಕ್ಷೆ ವಿಧಿಸಲು ಅಲ್ಲಿ ಅವಕಾಶವಿದೆ. ಮುಸ್ಲಿಂ ಧರ್ಮವೇ ಪ್ರಧಾನವಾಗಿರುವ ಟರ್ಕಿಯಲ್ಲೂ ಸಾರ್ವಜನಿಕ ಸಂಸ್ಥೆಯಲ್ಲಿ ತಲೆಗೆ ಸ್ಕಾರ್ಫ್ ಅಥವಾ ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗಿದೆ. ಆದರೆ ಟರ್ಕಿಯಲ್ಲಿ ಮುಖ ಮುಚ್ಚದಂತೆ, ತಲೆ ಮತ್ತು ಕೂದಲನ್ನು ಮಾತ್ರ ಮುಚ್ಚುವ ಹಿಜಾಬ್ ಧರಿಸಲು ಮಹಿಳೆಯರು ಬಯಸಿದ ಹಿನ್ನೆಲೆಯಲ್ಲಿ ನಾಗರಿಕ ಸೇವೆ ಮತ್ತು ಸರ್ಕಾರಿ ಕಚೇರಿಗಳಲ್ಲಿ ಹಿಜಾಬ್ ಧರಿಸುವಂತೆ ನಿಯಮ ಸಡಿಲಿಸಲಾಗಿದೆ. ಆದರೆ ಈ ನಿಯಮ ಮಿಲಿಟರಿ ಅಥವಾ ನ್ಯಾಯಾಂಗಕ್ಕೆ ಅನ್ವಯವಾಗುವುದಿಲ್ಲ. 2015ರಲ್ಲಿ ನೆದರ್‌ಲ್ಯಾಂಡ್ ಸರ್ಕಾರ ಸಹ ಪೂರ್ಣ ಪ್ರಮಾಣದಲ್ಲಿ ಮುಖ ಮುಚ್ಚುವ ಹಿಜಾಬನ್ನು ಭಾಗಶಃ ನಿಷೇಧಿಸಿದೆ. ಅಂದರೆ ಅಲ್ಲಿಯೂ ಶಾಲೆ, ಆಸ್ಪತ್ರೆ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಹಿಜಾಬ್ ಧರಿಸುವಂತಿಲ್ಲ.
ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣಕ್ಕೆ ಆದ್ಯತೆ ಸಿಗಬೇಕೇ ಹೊರತು ಧಾರ್ಮಿಕ ಸಂಕೇತ ಅಥವಾ ರಾಜಕೀಯ ವಾದ-ವಿವಾದಗಳಿಗಲ್ಲ. ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳ ವಸ್ತ್ರಸಂಹಿತೆಯನ್ನು ವಿರೋಧಿಸುವ ಅಥವಾ ಇಂಥದ್ದೇ ಉಡುಗೆ ಧರಿಸುತ್ತೇವೆ ಎಂದು ಪಟ್ಟು ಹಿಡಿಯುವ ಮನಸ್ಥಿತಿ ಕೂಡ ಒಳ್ಳೆಯದಲ್ಲ. ಎಲ್ಲ ಧರ್ಮಗಳೂ ನಮ್ಮ ಒಳಿತನ್ನೇ ಬಯಸುತ್ತವೆ ಎಂಬುದು ನಮ್ಮ ಗಮನದಲ್ಲಿದ್ದರೆ ಸಾಕು.
- ಬಿ ಸಿ ನಾಗೇಶ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ