ಶಿಕ್ಷಣ ನೀತಿ ವಿದ್ಯಾರ್ಥಿ ಪರ, ರಾಜಕೀಯಕ್ಕಾಗಿ ಟೀಕೆ ಬೇಡ: ಅಶ್ವತ್ಥ್
* ಶಿಕ್ಷಣ ನೀತಿ ಜಾರಿಗೆ ಹದಿನೈದು ವರ್ಷಗಳ ಕಾಲಾವಕಾಶ
* 75 ವರ್ಷಗಳ ನಂತರ ದೇಶದಲ್ಲಿ ಜಾರಿಗೆ ಬಂದಿರುವ ಕ್ರಾಂತಿಕಾರಿ ಸುಧಾರಣೆ ಎಂದರೆ ಶಿಕ್ಷಣ ನೀತಿ
* ರಾಷ್ಟ್ರೀಯ ಶಿಕ್ಶಣ ನೀತಿಯ ಬಗ್ಗೆ ಜಿದ್ದಿಗೆ ಬಿದ್ದು ಟೀಕೆ ಮಾಡುತ್ತಿರುವ ಕೆಲ ನಾಯಕರು
ಮೈಸೂರು(ಸೆ.08): ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಯಾರ ವಿರುದ್ಧವೂ ಅಲ್ಲ. ಇದು ಕೇವಲ ವಿದ್ಯಾರ್ಥಿಗಳ ಪರ ಮತ್ತು ರಾಷ್ಟ್ರದ ಪರ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಮಹಾರಾಣಿ ಮಹಿಳಾ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜು ಜಂಟಿಯಾಗಿ ಎನ್‌ಇಪಿ ಕುರಿತು ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. 75 ವರ್ಷಗಳ ನಂತರ ನಮ್ಮ ದೇಶದಲ್ಲಿ ಜಾರಿಗೆ ಬಂದಿರುವ ಕ್ರಾಂತಿಕಾರಿ ಸುಧಾರಣೆ ಎಂದರೆ ಶಿಕ್ಷಣ ನೀತಿ ಮಾತ್ರ ಎಂದು ನಾನು ಘಂಟಾಘೋಷವಾಗಿ ಹೇಳಬಲ್ಲೆ. ರಾಷ್ಟ್ರ ನಿರ್ಮಾಣಕ್ಕೆ ಹಾಗೂ ಸಮಾಜವನ್ನು ಸಮಗ್ರವಾಗಿ ಮುಂದಕ್ಕೆ ತೆಗೆದುಕೊಂಡು ಹೋಗಲು ಇದು ಸಹಕಾರಿ. ಪ್ರಧಾನಿ ನರೇಂದ್ರ ಮೋದಿ ಬಹಳ ದೂರದೃಷ್ಟಿಯಿಂದ ಈ ನೀತಿಯನ್ನು ಜಾರಿಗೆ ತಂದಿದ್ದಾರೆ ಎಂದರು. ಕೆಲ ನಾಯಕರು ರಾಷ್ಟ್ರೀಯ ಶಿಕ್ಶಣ ನೀತಿಯ ಬಗ್ಗೆ ಜಿದ್ದಿಗೆ ಬಿದ್ದು ಟೀಕೆ ಮಾಡುತ್ತಿದ್ದಾರೆ. ಅವರು ಇಡೀ ನೀತಿಯನ್ನು ಓದಬೇಕು. ನಂತರ ತಪ್ಪಿದ್ದರೆ ತೋರಿಸಲಿ ಎಂದು ಸಚಿವರು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ವಿರೋಧಿಸಿ ಸಿದ್ದರಾಮಯ್ಯ ಪತ್ರ
ಈ ವರ್ಷ ಶೈಕ್ಷಣಿಕ ಸುಧಾರಣೆಗಳು:
ಶಿಕ್ಷಣ ನೀತಿ ಜಾರಿಗೆ ಹದಿನೈದು ವರ್ಷಗಳ ಕಾಲಾವಕಾಶವನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ. ಆದರೆ, ರಾಜ್ಯ ಸರ್ಕಾರ ಮೊದಲ ವರ್ಷ ಶೈಕ್ಷಣಿಕವಾಗಿ ಸುಧಾರಣೆಗಳನ್ನು ಜಾರಿ ಮಾಡಲಿದೆ. ನಂತರದ ದಿನಗಳಲ್ಲಿ ಆಡಳಿತಾತ್ಮಕ ಮತ್ತು ಶಾಸನಾತ್ಮಕ ಸುಧಾರಣೆಗಳನ್ನು ಅನುಷ್ಠಾನಕ್ಕೆ ತರಲಿದೆ. ಯಾವುದೇ ಕಾರಣಕ್ಕೂ ಶಿಕ್ಷಣ ನೀತಿಯನ್ನು ಆತುರಾತುರವಾಗಿ ಜಾರಿಗೆ ತರುತ್ತಿಲ್ಲ. ಡಾ.ಕೆ. ಕಸ್ತೂರಿ ರಂಗನ್ ನೇತೃತ್ವದ ಸಮಿತಿ ಐದೂವರೆ ವರ್ಷ ಕಾಲ ಶ್ರಮಿಸಿದ ಫಲವೇ ಈ ಶಿಕ್ಷಣ ನೀತಿ ಎಂದು ವಿವರಿಸಿದರು.