Asianet Suvarna News Asianet Suvarna News

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ವಿರೋಧಿಸಿ ಸಿದ್ದರಾಮಯ್ಯ ಪತ್ರ

* ರಾಷ್ಟ್ರೀಯ ಶಿಕ್ಷಣ ನೀತಿ ಆದೇಶ ವಾಪಸ್ ಪಡೆಯಲು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ.
* ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರಿಗೆ ಪತ್ರ ಬರೆದ ಸಿದ್ದು
* ಹೊಸ ಶಿಕ್ಷಣ ನೀತಿ ಚರ್ಚೆಯಲ್ಲಿ ತಾವು ಭಾಗವಹಿಸುವುದಿಲ್ಲ ಎಂದಿರುವ ಸಿದ್ದು

opposition leader Siddaramaiah writes letter to opposing NEP in Karnataka rbj
Author
Bengaluru, First Published Sep 3, 2021, 5:22 PM IST

ಬೆಂಗಳೂರು, (ಸೆ.03): ಕರ್ನಾಟಕದಲ್ಲಿ ಪ್ರಪ್ರಥಮವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸಲು ಚಾಲನೆ ನೀಡಲಾಗುತ್ತಿದೆ. ಆದ್ರೆ, ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ಹೊರಡಿಸಿರುವ ಆದೇಶವನ್ನು ಕೂಡಲೇ ವಾಪಸ್ ಪಡೆಯುವಂತೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಗೊಂದಲ ಬೇಡ: ಸಚಿವ ಅಶ್ವತ್ಥನಾರಾಯಣ

 ಈ ಸಂಬಂಧ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಅವರಿಗೆ ಪತ್ರ ಬರೆದಿರುವ ಅವರು, ಹೊಸ ಶಿಕ್ಷಣ ನೀತಿ ಕುರಿತಾದ ಚರ್ಚೆಯಲ್ಲಿ ತಾವು ಭಾಗವಹಿಸುವುದಿಲ್ಲ ಎಂದಿದ್ದಾರೆ.

ಸಿದ್ದರಾಮಯ್ಯನವರ ಪತ್ರ ಹೀಗಿದೆ
ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಅನುಷ್ಠಾನಗೊಳಿಸಲು ಚಾಲನೆ ನೀಡಲಾಗಿದೆಯೆಂದು ಹಾಗೂ ಈ ಕುರಿತು ಚರ್ಚಿಸಲು ದಿನಾಂಕವನ್ನು ನೀಡುವಂತೆ ತಮ್ಮ ಕಛೇರಿಯಿಂದ ಪತ್ರ ಬರೆದು ಕೋರಲಾಗಿದೆ. ಕರ್ನಾಟಕದಲ್ಲಿ ಈಗಾಗಲೆ ತರಾತುರಿಯಲ್ಲಿ ವಿದ್ಯಾರ್ಥಿಗಳು, ತಜ್ಞರು, ಪ್ರಾಧ್ಯಾಪಕರು, ಪೋಷಕರುಗಳ ಜೊತೆ ಚರ್ಚಿಸದೆ, ಸಾಧಕ-ಬಾಧಕಗಳನ್ನು ಪರಿಶೀಲಿಸದೆ ಈ ಶೈಕ್ಷಣಿಕ ವರ್ಷದಿಂದಲೆ ಅನುಷ್ಠಾನ ಮಾಡುವುದಾಗಿ ಹೇಳಿ ಉದ್ಘಾಟನೆಯನ್ನೂ ಮಾಡಲಾಗಿದೆ. ಉದ್ಘಾಟನೆಯನ್ನೂ ಮುಗಿಸಿ ಚರ್ಚೆ ಮಾಡಬೇಕು ಎಂದು ಕರೆಯುವುದು ಸಂಸದೀಯವಾಗಿ ಸರಿಯಲ್ಲ.

ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಈ ವರ್ಷ ದಾಖಲಾಗುವ ವಿದ್ಯಾರ್ಥಿಗಳಿಗೆ ಬಂಪರ್ ಗಿಫ್ಟ್

ಒಂದು ಶಿಕ್ಷಣ ನೀತಿಯ ಅನುಷ್ಠಾನವೆಂದರೆ ಸಣ್ಣ ಸಂಗತಿಯೆ? ತಾವೂ ಕೂಡ ಬೆವರಿನ ಸಂಸ್ಕೃತಿಯ ಹಿನ್ನೆಲೆಯ ಸಮುದಾಯದಿಂದ ಬಂದಿದ್ದೀರಿ. ರಾಷ್ಟ್ರಕವಿ ಕುವೆಂಪು ಅವರು ಶಿಕ್ಷಣ, ಅದರ ಗುಣಮಟ್ಟವನ್ನು ಸುಧಾರಣೆ, ಕಲಿಕೆಯ ಮಾಧ್ಯಮ ಹಾಗೂ ಸರ್ಕಾರದ ಜವಾಬ್ಧಾರಿಗಳ ಬಗ್ಗೆ ಮಾತನಾಡಿದ್ದಾರೆ. ಶಿಕ್ಷಣದ ಕುರಿತಂತೆ ಕೆಲಸ ಮಾಡುತ್ತಿರುವವರೆಲ್ಲರೂ ಕುವೆಂಪು ಅವರ ವಿಚಾರಗಳನ್ನು ಓದಿ, ಅದರಂತೆ ನಡೆದುಕೊಳ್ಳಬೇಕಾಗಿದೆ.

ಮುಂದುವರೆದ ದೇಶಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಸರ್ಕಾರಗಳೆ ನಿರ್ವಹಿಸುತ್ತವೆ. ಯಾವುದೇ ನಾಡಿನಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆ ಸಮರ್ಪಕವಾಗಿದ್ದರೆ ಆ ನಾಡಿನ ಸಮಸ್ತ ಆರೋಗ್ಯವೂ ಸರಿಯಾಗಿರುತ್ತದೆ. ಇಂದು ಭಾರತದ ಸಮಾಜಗಳು ತೀವ್ರ ರೂಪದ ಬಿಕ್ಕಟ್ಟುಗಳನ್ನು ಎದುರಿಸುತ್ತಿವೆ. ಅದಕ್ಕೆ ಕಾರಣಗಳು ಹಲವಿವೆ.

ಮೊದಲನೆಯದಾಗಿ ವಿದ್ಯಾರ್ಥಿ ಶಿಕ್ಷಕ ಪ್ರಮಾಣ ವಿಪರೀತ ಹೆಚ್ಚಾಗಿದೆ, ಅದು ಕಡಿಮೆಯಾಗಬೇಕು. ಶಿಕ್ಷಣ ಕ್ಷೇತ್ರಕ್ಕೆ ಅತಿ ಕಡಿಮೆ ಅನುದಾನ ನೀಡಲಾಗುತ್ತಿದೆ. ಈ ನೀತಿಯ ಶಿಫಾರಸ್ಸುಗಳ ಪ್ರಕಾರ ಜಿಡಿಪಿಯಲ್ಲಿ ಕನಿಷ್ಠ ಶೇ 6 ರಷ್ಟು ಮೀಸಲಿರಿಸಬೇಕು. ಇದಾಗಬೇಕೆಂದರೆ ಕರ್ನಾಟಕದಲ್ಲಿ ಕನಿಷ್ಠ 1.08ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿರಿಸಬೇಕಾಗುತ್ತದೆ. ಹೊಸ ಶಿಕ್ಷಣ ನೀತಿಯ ಹೇರಿಕೆಯು ಹಲವು ಸಮಸ್ಯೆಗಳನ್ನು ಒಳಗೊಂಡಿದೆ ಎಂದು ಹೇಳುತ್ತಿದೆ. ಒಕ್ಕೂಟ ವ್ಯವಸ್ಥೆಯ ಮೂಲ ಸ್ಫೂರ್ತಿಯ ನಿರಾಕರಣೆ, ಖಾಸಗೀಕರಣ, ತರಗತಿಗಳನ್ನು ನಿರಾಕರಿಸಿ ಕಾಲೇಜು, ವಿಶ್ವ ವಿದ್ಯಾಲಯಗಳ ಪಾವಿತ್ರ್ಯದ ನಿರಾಕರಣೆ, ಬಡವರು, ಹಿಂದುಳಿದವರು, ದಮನಿತರ ಸಿಗಬಹುದಾದ ಸುಲಭ ಶಿಕ್ಷ,ಣದ ನಿರಾಕರಣೆ, ಕೋಮು ಅಜೆಂಡಾಗಳನ್ನು ತಂದು ಅವೈಜ್ಞಾನಿಕತೆಯನ್ನು, ದ್ವೇಷವನ್ನು ತುಂಬಿ ಭಾರತವನ್ನು ಶಾಶ್ವತ ಅಂಧಕಾರಕ್ಕೆ ತಳ್ಳಲಾಗುತ್ತಿದೆ ಮುಂತಾದ ಗಂಭೀರ ಆರೋಪಗಳಿವೆ.

ಸರ್ಕಾರ ಈ ಎಲ್ಲದರ ಕುರಿತು ಚರ್ಚೆ ನಡೆಸಬೇಕಾಗಿತ್ತು. ಇದೇನನ್ನೂ ನೀವು ಮಾಡಿಲ್ಲ. ನನ್ನ, ನಿಮ್ಮ ಆಯಸ್ಸು, ರಾಜಕೀಯ ವೃತ್ತಿ ಎಲ್ಲವೂ ಮುಂದೆAದೊ ಒಂದು ದಿನ ಮುಗಿಯುತ್ತದೆ. ಆದರೆ ಶಿಕ್ಷಣ ನೀತಿಯ ಹೆಸರಲ್ಲಿ ಬಲಿಪಶುಗಳಾಗುವ ಮಕ್ಕಳ ಮುಂದೆ 70-80 ವರ್ಷಗಳ ಭವಿಷ್ಯವಿದೆ. ಶಿಕ್ಷಣದ ಹಂತದಲ್ಲಿ ಅವರ ಭವಿಷ್ಯ ಅಲ್ಲೋಲ, ಕಲ್ಲೋಲವಾದರೆ ಅದರ ಶಾಪವನ್ನು ಹೊರುವವರು ಯಾರು? ಈ ನಾಡಿನ, ರೈತರ, ಪಶುಪಾಲಕರ, ಕುಶಲಕರ್ಮಿಗಳ, ಸಣ್ಣ ಪುಟ್ಟ ವ್ಯಾಪಾರಿಗಳ, ಕಾರ್ಮಿಕರ ಮನೆಗಳಿಂದ ಬಂದ ಮಕ್ಕಳು ಗುಣ ಮಟ್ಟದ ಶಿಕ್ಷಣ ಪಡೆದು ಜಾಗತಿಕ ಮಟ್ಟದ ಉದಾರ ಮಾನವತಾವಾದಿ, ವೈಜ್ಞಾನಿಕ ಶಿಕ್ಷಣ ಪಡೆಯಬಾರದೆ?

ತಾವು ನಿಜವಾಗಿಯೂ ನೈಜ ಸ್ಫೂರ್ತಿಯಲ್ಲಿ ಚರ್ಚೆಮಾಡಬಯಸಿದರೆ, ಕೂಡಲೆ ಈ ಹೊಸ ಶಿಕ್ಷಣ ನೀತಿಯನ್ನು ಹಿಂದಕ್ಕೆ ಪಡೆಯಿರಿ. ಚರ್ಚೆ ನಡೆಸಿದ ಮೇಲೆ ನಿಜವಾಗಿಯೂ ಈ ನೀತಿ ಆರೋಗ್ಯಕರವೆನ್ನಿಸಿ ಅನುಷ್ಠಾನ ಸೂಕ್ತವೆನ್ನಿಸಿದರೆ, ಈ ಶತಮಾನಕ್ಕೆ ಅತ್ಯಗತ್ಯ ಎನ್ನಿಸಿದರೆ ನಾವೆ ನಿಂತು ಅನುಷ್ಠಾನ ಮಾಡಲು ಬೆಂಬಲಿಸುತ್ತೇವೆ. ಇಲ್ಲದಿದ್ದರೆ ಮಕ್ಕಳ ಭವಿಷ್ಯದ ಕುತ್ತಿಗೆ ಕೊಯ್ಯುವಂಥ ಪಾಪದ ಕೆಲಸದಲ್ಲಿ ಭಾಗಿಯಾದೆವು ಎಂಬ ಪಶ್ಚಾತ್ತಾಪವನ್ನು ಹೊರಬೇಕಾಗುತ್ತದೆ ಎಂಬುದನ್ನು ತಮಗೆ ತಿಳಿಸಬಯಸುತ್ತೇನೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರದ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿದ್ದಾರೆ.

ಸಿದ್ದರಾಮಯ್ಯ
ವಿಪಕ್ಷ ನಾಯಕ, ಕರ್ನಾಟಕ ವಿಧಾನಸಭೆ

Follow Us:
Download App:
  • android
  • ios