Asianet Suvarna News Asianet Suvarna News

SSLC, PUC ಪರೀಕ್ಷೆ: ಶಿಕ್ಷಣ ಸಚಿವರು ಎಡಬಿಡಂಗಿ ನಿರ್ಧಾರ ಎಂದ ಎಚ್‌ಡಿಕೆ

* ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿದ ಸರ್ಕಾರ
* ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುತ್ತಿರುವುದಕ್ಕೆ ಎಚ್‌ಡಿಕೆ ಆಕ್ರೋಶ
* ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

HD Kumaraswamy Hits out at Education minister Suresh Kumar Over SSLC PUC Exams rbj
Author
Bengaluru, First Published Jun 4, 2021, 2:52 PM IST

ಬೆಂಗಳೂರು, (ಜೂನ್.04) : ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಪಡಿಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಮುಂದಾಗಿರುವುದು ರಾಜ್ಯ ಸರ್ಕಾರದ ನಡೆಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಸರಣಿ ಟ್ವಿಟ್ ಮಾಡಿರುವಂತ ಅವರು, ಕೋವಿಡ್‌ ಹಿನ್ನೆಲೆ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಪಡಿಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಮುಂದಾಗಿರುವುದು ರಾಜ್ಯ ಸರ್ಕಾರದ ಬುದ್ಧಿಭ್ರಮಣೆಯ ನಿರ್ಧಾರ. ಮತಿಗೆಟ್ಟಂತೆ ವರ್ತಿಸುತ್ತಿರುವ ಶಿಕ್ಷಣ ಸಚಿವರ ಐಲು-ಪೈಲು ನಿರ್ಧಾರ ಕಂಡು ರಾಜ್ಯದ ಜನತೆ ಹಾದಿ ಬೀದಿಯಲ್ಲಿ ನಗಾಡುವಂತಾಗಿದೆ ಎಂದು ಕಿಡಿಕಾರಿದ್ದಾರೆ.

ದ್ವಿತೀಯ PUC ಪರೀಕ್ಷೆ ರದ್ದು, ಜುಲೈ ಅಥವಾ ಆಗಸ್ಟ್‌ನಲ್ಲಿ SSLC ಎಕ್ಸಾಮ್: ಯಾರೂ ಫೇಲ್ ಆಗೋಲ್ಲ

ಸರ್ಕಾರ ತಕ್ಷಣ ಇಂತಹ ಮತಿ ಹೀನ ನಿರ್ಧಾರದಿಂದ ಹಿಂದೆ ಸರಿಯಬೇಕು. ಪಿಯುಸಿ ಮಕ್ಕಳಿಗೆ ಪರೀಕ್ಷೆ ಇಲ್ಲ. ಎಸ್ ಎಸ್ ಎಲ್ ಸಿ ಮಕ್ಕಳಿಗೆ ಸೀಮಿತ ವಿಷಯಗಳ ಪರೀಕ್ಷೆ ಎಂಬ ಮೊಂಡುತನವನ್ನು ಸರ್ಕಾರ ಕೈಬಿಡಬೇಕು ಎಂದು ಎಚ್‌ಡಿಕೆ ಆಗ್ರಹಿಸಿದ್ದಾರೆ. 

ಮಕ್ಕಳ ಜೀವದೊಂದಿಗೆ ಚೆಲ್ಲಾಟ ಆಡುವುದನ್ನು ಬಿಟ್ಟು, ಶಿಕ್ಷಣ ಸಚಿವರು ಎಡಬಿಡಂಗಿ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಮುಖ್ಯಮಂತ್ರಿಗಳು ಕಡಿವಾಣ ಹಾಕಬೇಕು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮಕ್ಕಳಿಗೆ ಏಕರೂಪ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತರಬೇಕು. ಪಿಯುಸಿ ಮಕ್ಕಳಿಗೆ ಪರೀಕ್ಷೆ ಇಲ್ಲ ಎಂದಾದರೆ ಅದು ಅವರಿಗಿಂತ ಕಿರಿಯರಾದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೂ ಅನ್ವಯಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಪಡಿಸಿದ್ದಕ್ಕೆ ಪ್ರಧಾನಮಂತ್ರಿಯ 'ಗುಮ್ಮ' ಕಾರಣ. ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪರೀಕ್ಷೆ ನಡೆಸಲು ಮುಂದಾಗಿರುವ ಬೃಹಸ್ಪತಿ ಶಿಕ್ಷಣ ಸಚಿವರೋ? ಪೋಷಕರು, ವಿದ್ಯಾರ್ಥಿಗಳ ತಾಳ್ಮೆ ಕೆಣಕುವ ಪರೀಕ್ಷಾ ಮಂತ್ರಿಯೋ ? ಎಂದು ಪ್ರಶ್ನಿಸಿದ್ದಾರೆ.

ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ವಿಷಯದಲ್ಲಿ ಮೌನಿ ಆಗಿರುವ ಶಿಕ್ಷಣ ಸಚಿವರು ಬಿಸಿ ಊಟ ಸಿಗದೆ ಕಂಗಾಲಾಗಿರುವ ಬಡ ವಿದ್ಯಾರ್ಥಿಗಳ ಬಗ್ಗೆ ಮಾತನಾಡುವುದಿಲ್ಲ. ಪರೀಕ್ಷೆಯಲ್ಲಿ ಪಾಸಾಗುವ ಏಳೆಂಟು ಲಕ್ಷ  ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಅನಾಯಸವಾಗಿ ಸೀಟು ದಕ್ಕಿಸಿಕೊಳ್ಳಲು ವ್ಯವಸ್ಥೆ ಮಾಡುವ ಕಡೆ ಚಿತ್ತ ಹರಿಸಲಿ ಎಂದು ಸಲಹೆ ಕೊಟ್ಟಿದ್ದಾರೆ.
 

Follow Us:
Download App:
  • android
  • ios