ಕೋವಿಡ್‌ ವೇಳೆ ಸರ್ಕಾರಿ ಶಾಲೆ, ಕಾಲೇಜು ಪ್ರವೇಶ ಏರಿಕೆ

*  ಒಟ್ಟಾರೆ ದಾಖಲಾತಿ ಇಳಿದರೂ ಸರ್ಕಾರಿ ಶಾಲೆಗಳಿಗೆ ಬಂಪರ್‌
*  ಕೇಂದ್ರ ಶಿಕ್ಷಣ ಇಲಾಖೆ ಪ್ರಕಟಿಸಿರುವ ವರದಿಯಲ್ಲಿ ಮಾಹಿತಿ
*  3031 ಸರ್ಕಾರಿ ಶಾಲೆಗಳಲ್ಲಿ ಮಾತ್ರ ಇಂಟರ್ನೆಟ್‌
 

Govt School College Admission Increased During Covid in Karnataka grg

ಲಿಂಗರಾಜು ಕೋರಾ

ಬೆಂಗಳೂರು(ಜು.07): ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವಂತಹ ಪರಿಸ್ಥಿತಿಯ ನಡುವೆಯೇ 2020-21ನೇ ಸಾಲಿನ ಕೋವಿಡ್‌ ವರ್ಷದಲ್ಲೂ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಲಕ್ಷಾಂತರ ಸಂಖ್ಯೆಯಲ್ಲಿ ಏರಿಕೆಯಾಗಿರುವುದು ಕಂಡುಬಂದಿದೆ.

ಈ ಖುಷಿ ವಿಚಾರದ ನಡುವೆ ಇಂದಿನ ತಂತ್ರಜ್ಞಾನ ಯುಗದಲ್ಲೂ 33 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಇಂದಿಗೂ ಕಂಪ್ಯೂಟರ್‌ ಸೌಲಭ್ಯವಿಲ್ಲ, ಇಂಟರ್‌ನೆಟ್‌ ಸೌಲಭ್ಯವಿರುವ ಶಾಲೆಗಳ ಸಂಖ್ಯೆ ಕೇವಲ ಮೂರು ಸಾವಿರದಷ್ಟಿದೆ ಎಂಬ ಅಂಶವೂ ಬಯಲಾಗಿದೆ.

Kids Education : ಮಕ್ಕಳು ಈ ಕಾರಣಕ್ಕೆ ಅರ್ಧದಲ್ಲೇ ಶಾಲೆ ಬಿಡ್ತಾರೆ..!

ಕೇಂದ್ರ ಶಿಕ್ಷಣ ಇಲಾಖೆಯು ಇತ್ತೀಚೆಗೆ ಪ್ರಕಟಿಸಿರುವ 2020-21ನೇ ಸಾಲಿನ ಯೂನಿಫೈಡ್‌ ಡಿಸ್ಟ್ರಿಕ್ಟ್ ಇನ್ಫಾರ್ಮೇಶನ್‌ ಸಿಸ್ಮಟ್‌ ಫಾರ್‌ ಎಜುಕೇಷನ್‌ ಪ್ಲಸ್‌ (ಯುಡೈಸ್‌+)’ ವರದಿಯಲ್ಲಿನ ಅಂಶಗಳಿವು. ಇಡೀ ದೇಶದ ಶಾಲೆಗಳಿಗೆ ಸಂಬಂಧಿಸಿದ ಯುಡೈಸ್‌+ ವರದಿಯಲ್ಲಿ ಕರ್ನಾಟಕದ 49,500ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಕೋವಿಡ್‌ ಅವಧಿಯ ದಾಖಲಾತಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಅನುಪಾತ, ಶಾಲೆ ಬಿಟ್ಟಮಕ್ಕಳ ಗಣತಿ, ಕುಡಿಯುವ ನೀರು, ಶೌಚಾಲಯ ಮತ್ತಿತರ ಮೂಲ ಸೌಕರ್ಯ ವ್ಯವಸ್ಥೆ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.

ವರದಿಯಲ್ಲಿ ಪ್ರಮುಖವಾಗಿ ಕಳೆದ ಶೈಕ್ಷಣಿಕ ವರ್ಷದಲ್ಲಿ (2020-2021) ಕರ್ನಾಟಕದಲ್ಲಿರುವ 72 ಸಾವಿರಕ್ಕೂ ಹೆಚ್ಚು ಸರ್ಕಾರಿ, ಅನುದಾನಿತ, ಅನುದಾನ ರಹಿತ ಖಾಸಗಿ ಶಾಲೆ, ಪಿಯು ಕಾಲೇಜುಗಳಲ್ಲಿ 2019-20ನೇ ಸಾಲಿಗೆ ಹೋಲಿಸಿದರೆ ಒಟ್ಟಾರೆ ದಾಖಲಾತಿ ಪ್ರಮಾಣ ಶೇ.2.32ರಷ್ಟುಕಡಿಮೆಯಾಗಿದೆ. ಆದರೆ, ಸರ್ಕಾರ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಶೇ.1.25ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ 1ರಿಂದ 12ನೇ ತರಗತಿ ವರೆಗೆ ಒಟ್ಟು 1,18,56,736 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ. ಇದು 2019-20ನೇ ಸಾಲಿನ 1,21,39,105 ಸಂಖ್ಯೆಯ ದಾಖಲಾತಿಗೆ ಹೋಲಿಸಿದರೆ 2.82 ಲಕ್ಷ ಮಕ್ಕಳ ದಾಖಲಾತಿ ಕಡಿಮೆಯಾಗಿದೆ. ಕೋವಿಡ್‌ ಸಾಂಕ್ರಾಮಿಕ ವರ್ಷದಲ್ಲಿ ಸಾಕಷ್ಟುಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸದ ಕಾರಣ ದಾಖಲಾತಿ ಕಡಿಮೆಯಾಗಿದೆ ಎಂಬುದು ತಜ್ಞರು ಹಾಗೂ ಅಧಿಕಾರಿಗಳ ವಿಶ್ಲೇಷಣೆಯಾಗಿದೆ.

ಆದರೆ, ಸರ್ಕಾರಿ ಶಾಲೆ, ಪಿಯು ಕಾಲೇಜುಗಳಲ್ಲಿ 2019-20ನೇ ಸಾಲಿನಲ್ಲಿ 1ರಿಂದ 12ನೇ ತರಗತಿಗೆ 49,06,231 ಮಕ್ಕಳು ದಾಖಲಾಗಿದ್ದರೆ, 2020-21ರಲ್ಲಿ 50,31,606 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ದಾಖಲಾತಿ ಸಂಖ್ಯೆ 1.25 ಲಕ್ಷದಷ್ಟುಹೆಚ್ಚಳವಾಗಿರುವುದು ಕಂಡುಬರುತ್ತದೆ. ಇದೇ ಅವಧಿಯಲ್ಲಿ 7,191 ಅನುದಾನಿತ ಶಾಲೆಗಳಲ್ಲಿ 15.06 ಲಕ್ಷ ಮಕ್ಕಳು, 19,915 ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ 53.17 ಲಕ್ಷ ಮಕ್ಕಳು ದಾಖಲಾಗಿದ್ದು ದಾಖಲಾತಿ ಪ್ರಮಾಣ ಕುಸಿತವಾಗಿದೆ ಎಂದು ವರದಿ ಹೇಳಿದೆ.

ಅತಿಥಿ ಉಪನ್ಯಾಸಕರಿಗೆ ಸಿಹಿಸುದ್ದಿ, ವೇತನ ಹೆಚ್ಚಳದ ಜೊತೆಗೆ ಇನ್ನಷ್ಟು ಹುದ್ದೆ ಭರ್ತಿಗೆ ಸರ್ಕಾರ ಆದೇಶ

3031 ಸರ್ಕಾರಿ ಶಾಲೆಗಳಲ್ಲಿ ಮಾತ್ರ ಇಂಟರ್ನೆಟ್‌

ಯುಡೈಸ್‌ ವರದಿ ಪ್ರಕಾರ ರಾಜ್ಯದ 49 ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಕಂಪ್ಯೂಟರ್‌ ಸಂರ್ಪ ಇರುವುದು 16 ಸಾವಿರ ಶಾಲೆಗಳಲ್ಲಿ ಮಾತ್ರ. ಉಳಿದ 33 ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಕಂಪ್ಯೂಟರ್‌ ಸೌಲಭ್ಯವಿಲ್ಲ. 16 ಸಾವಿರ ಶಾಲೆಗಳಲ್ಲಿ ಕಂಪ್ಯೂಟರ್‌ ಸೌಲಭ್ಯವಿದ್ದರೂ, ಇಂಟರ್ನೆಟ್‌ ಸಂಪರ್ಕ ಇರುವುದು 3031 ಶಾಲೆಗಳಲ್ಲಿ ಮಾತ್ರ ಉಳಿದ 46 ಸಾವಿರ ಸಾವಿರ ಶಾಲೆಗಳಲ್ಲಿ ಈ ಸಂಪರ್ಕವಿಲ್ಲ.

ರಾಜ್ಯದ ಶಾಲೆಗಳಲ್ಲಿ ದಾಖಲಾತಿ

ಶಾಲೆ ದಾಖಲಾತಿ 2019-2020 2020-21 ಶೇಕಡಾ
ಸರ್ಕಾರಿ 49,06,231 50,31,606 1.25% ಏರಿಕೆ
ಅನುದಾನಿತ 15,46,326 15,06,780 2.5%ಇಳಿಕೆ
ಅನುದಾನರಹಿತ 56,85,879 53,17,640 6.47% ಇಳಿಕೆ
ಒಟ್ಟು 1,21,39,105 1,18,56,736 2.32% ಇಳಿಕೆ
 

Latest Videos
Follow Us:
Download App:
  • android
  • ios