ಸ್ವಾತಂತ್ರ್ಯದ 75 ವರ್ಷದಲ್ಲಿ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದ್ದು ಆರ್ಥಿಕತೆಯೂ ಬಲಗೊಂಡಿದೆ. ವಿಶ್ವದ 5 ನೇ ಅತಿ ದೊಡ್ಡ ಆರ್ಥಿಕತೆ ನಮ್ಮದಾಗಿದ್ದು ಭವ್ಯ ಭಾರತ ನಿರ್ಮಿಸಲು ಇನ್ನು 25 ವರ್ಷ ಅಮೃತ ಕಾಲವಾಗಿದೆ. ಇದರಲ್ಲಿ ನಾವೆಲ್ಲರೂ ಭಾಗಿಯಾಗಿ ನಮ್ಮ ಕರ್ತವ್ಯ ನಿರ್ವಹಿಸೋಣ ಎಂದು ಕರೆ ನೀಡಿದ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ 

ಬೆಂಗಳೂರು(ಜು.11):  ಭವ್ಯ ಭಾರತ ನಿರ್ಮಿಸಲು ಮುಂದಿನ 25 ವರ್ಷ ಅಮೃತ ಕಾಲವಾಗಿದ್ದು, ಇದರಲ್ಲಿ ನಾವೆಲ್ಲರೂ ಪಾಲುದಾರರಾಗಬೇಕು ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅಭಿಪ್ರಾಯಪಟ್ಟರು. ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಬೆಂಗಳೂರು ನಗರ ವಿಶ್ವವಿದ್ಯಾಲಯದ 2ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯದ 75 ವರ್ಷದಲ್ಲಿ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದ್ದು ಆರ್ಥಿಕತೆಯೂ ಬಲಗೊಂಡಿದೆ. ವಿಶ್ವದ 5 ನೇ ಅತಿ ದೊಡ್ಡ ಆರ್ಥಿಕತೆ ನಮ್ಮದಾಗಿದ್ದು ಭವ್ಯ ಭಾರತ ನಿರ್ಮಿಸಲು ಇನ್ನು 25 ವರ್ಷ ಅಮೃತ ಕಾಲವಾಗಿದೆ. ಇದರಲ್ಲಿ ನಾವೆಲ್ಲರೂ ಭಾಗಿಯಾಗಿ ನಮ್ಮ ಕರ್ತವ್ಯ ನಿರ್ವಹಿಸೋಣ ಎಂದು ಕರೆ ನೀಡಿದರು.

ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳನ್ನು ಸೇರ್ಪಡೆ ಮಾಡುವುದು ಶಿಕ್ಷಣ ತಜ್ಞರು, ನೀತಿ ನಿರೂಪಕರು, ಸಮಾಜದ ಜವಾಬ್ದಾರಿಯಾಗಿದೆ. ವಿಶ್ವವಿದ್ಯಾನಿಲಯಗಳು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುತ್ತಿದ್ದು ವಿಶೇಷವಾಗಿ ಬಡವರು, ಅತ್ಯಂತ ದುರ್ಬಲರು ಹಾಗೂ ನಮ್ಮ ಪರಿಸರದ ಕಾಳಜಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಘಟಿಕೋತ್ಸವ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿ

ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ಗೆ ಭಾಜನರಾದ ಪ್ರೆಸಿಡೆನ್ಸಿ ವಿವಿ ಕುಲಾಧಿಪತಿ ನಿಸಾರ್‌ ಅಹಮದ್‌(ಶಿಕ್ಷಣ), ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ(ಸಮಾಜ ಸೇವೆ), ರಾಷ್ಟ್ರಕವಿ ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದ (ಸಾಹಿತ್ಯ ಕ್ಷೇತ್ರ) ಅವರನ್ನು ಅಭಿನಂದಿಸಿದ ರಾಜ್ಯಪಾಲರು, ನಿಮ್ಮ ಸಮಾಜಮುಖಿ ಕಾರ್ಯಗಳು ನಿರಂತರವಾಗಿರಲಿ ಎಂದು ಆಶಿಸಿದರು. ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಇದೇ ಸಂದರ್ಭದಲ್ಲಿ ಶುಭ ಕೋರಿದರು.

ವಿವಿ ಕುಲಪತಿ ಲಿಂಗರಾಜು ಗಾಂಧಿ ಮಾತನಾಡಿ, 38 ವಿದ್ಯಾರ್ಥಿಗಳಿಗೆ 51 ಚಿನ್ನದ ಪದಕ ಒಳಗೊಂಡಂತೆ ವಿವಿಯ 29,914 ಸ್ನಾತಕ, 5997 ಸ್ನಾತಕೋತ್ತರ ಸೇರಿದಂತೆ ಒಟ್ಟು 35,911 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಇದರಲ್ಲಿ 21,239 ವಿದ್ಯಾರ್ಥಿನಿಯರು, 14,672 ವಿದ್ಯಾರ್ಥಿಗಳಿದ್ದಾರೆ. 61 ವಿದ್ಯಾರ್ಥಿಗಳು ರಾರ‍ಯಂಕ್‌ ಪಡೆದಿದ್ದಾರೆ. ಹೊಸ ವಿವಿ ಆಗಿರುವುದರಿಂದ ವಿಶ್ವವಿದ್ಯಾಲಯವೇ 38 ಚಿನ್ನದ ಪದಕ ಮತ್ತು ದಾನಿಗಳು 13 ಚಿನ್ನದ ಪದಕ ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಸೆಂಟ್ರಲ್‌ ಕಾಲೇಜಿನ ಎಂಎಸ್ಸಿ ರಸಾಯನಶಾಸ್ತ್ರ ವಿಭಾಗದ ಪದ್ಮಾವತಿ ವಿ.ಕೆ.ನಾಯರ್‌, ಕೃಪಾನಿಧಿ ಕಾಲೇಜಿನ ಬಿಕಾಂ ವಿಭಾಗದ ಎಂ.ಅಜಿತ್‌ಕುಮಾರ್‌, ಶೇಷಾದ್ರಿಪುರಂ ಕಾಲೇಜಿನ ಬಿಬಿಎ ವಿದ್ಯಾರ್ಥಿನಿ ಎಸ್‌.ದೀಪ್ತಿ ತಲಾ 3 ಚಿನ್ನದ ಪದಕಕ್ಕೆ ಭಾಜನರಾಗಿದ್ದು ಪ್ರಮುಖರಾಗಿದ್ದಾರೆ.

Mysuru: ಉತ್ಪನ್ನಗಳ ಗುಣಮಟ್ಟ ಕಾಪಾಡಿಕೊಳ್ಳಿ: ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋತ್‌

ಸಂಶೋಧನೆಗೆ ಅನುದಾನ ಸಾಲದು: ಮಂಜುನಾಥ್‌

ನಿಧಿಯ ಕೊರತೆಯಿಂದಾಗಿ ಬಹುತೇಕ ಎಲ್ಲ ವಿವಿಗಳಲ್ಲಿ ಸಂಶೋಧನಾ ಕಾರ್ಯಗಳಿಗೆ ಹಿನ್ನಡೆ ಉಂಟಾಗಿದೆ. ರಾಜ್ಯ ಸರ್ಕಾರ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗವು ಸಾಕಷ್ಟು ಅನುದಾನ ನೀಡಬೇಕು ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಒತ್ತಾಯಿಸಿದರು.

ವಿದ್ಯಾರ್ಥಿಗಳು ಪದವಿ, ಪದಕ ಪಡೆದರೆ ಮಾತ್ರ ಸಾಲದು. ಜ್ಞಾನದ ಜೊತೆಗೆ ಸಂಸ್ಕಾರ, ವಿವೇಕ, ಮಾನವೀಯತೆ ಬೆಳೆಸಿಕೊಳ್ಳಬೇಕು. ಇಂದು ಅನೇಕ ವಿದ್ಯಾವಂತರು ದುಷ್ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿರುವುದು ಕಳವಳಕಾರಿ. ನಮ್ಮ ಬುದ್ಧಿವಂತಿಕೆಯನ್ನು ರಚನಾತ್ಮಕ ಉದ್ದೇಶಗಳಿಗೆ ಬಳಸಬೇಕು. ಸೋಲುಗಳಿಗೆ ಎದೆಗುಂದಬೇಡಿ. ಆತ್ಮ ವಿಶ್ವಾಸ, ನಂಬಿಕೆ, ಕಠಿಣ ಪರಿಶ್ರಮದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಸಲಹೆ ನೀಡಿದರು.