ಗದಗ: ರೋಡ್‌ ರೋಮಿಯೋಗಳ ಕಾಟಕ್ಕೆ ಬೆಚ್ಚಿ ಬಿದ್ದ ವಿದ್ಯಾರ್ಥಿನಿಯರು

ಪ್ರಾಚಾರ್ಯರ ಮುಂದೆ ಅಳಲು ತೋಡಿಕೊಂಡ ವಿದ್ಯಾರ್ಥಿನಿಯರು| ಗದಗ ಜಿಲ್ಲೆಯ ನರೇಗಲ್ಲಿ ಪಟ್ಟಣ| ವೇಗವಾಗಿ ಬೈಕ್‌ನಲ್ಲಿ ತೆರಳುವುದು, ದಾರಿಯುದ್ದಕ್ಕೂ ವಿದ್ಯಾರ್ಥಿನಿಯರನ್ನು ಹಿಂಬಾಲಿಸಿ ಚುಡಾಯಿಸುವುದು, ಅಸಭ್ಯವಾಗಿ ಮಾತನಾಡುವ ಪೋಲಿಗಳು| ಪುಂಡ-ಪೋಕರಿಗಳ ಹಾವಳಿಯಿಂದ ಶಾಲೆಗೆ ತೆರಳಲು ಕಿರಿಕಿರಿ ಅನುಭವಿಸುತ್ತಿರುವ ಮಕ್ಕಳು| 

Girl Students Faces Problems due to Ragging at Naregal in Gadag grg

ನಿಂಗರಾಜ ಬೇವಿನಕಟ್ಟಿ

ನರೇಗಲ್ಲ(ಮಾ.19): ನರೇಗಲ್ಲಿ ಪಟ್ಟಣದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಪುಂಡರ ಕಿರಿಕಿರಿ ಹೆಚ್ಚಾಗಿದೆ.

ಶಾಲಾ, ಕಾಲೇಜಿಗೆ ಹೋಗುವ ಮಾರ್ಗದಲ್ಲಿ ಪೋಲಿಗಳು ವೇಗವಾಗಿ ಬೈಕ್‌ನಲ್ಲಿ ತೆರಳುವುದು, ದಾರಿಯುದ್ದಕ್ಕೂ ವಿದ್ಯಾರ್ಥಿನಿಯರನ್ನು ಹಿಂಬಾಲಿಸಿ ಚುಡಾಯಿಸುವುದು, ಅಸಭ್ಯವಾಗಿ ಮಾತನಾಡುವುದು ಮಾಡುತ್ತಾರೆಂದು ನೊಂದ ವಿದ್ಯಾರ್ಥಿನಿಯರು ನುಡಿಯುತ್ತಾರೆ. ಕಾಲೇಜು ಬಿಡಿಸುತ್ತಾರೆ ಎಂಬ ಭಯದಲ್ಲಿ ಕೆಲವರು ಮನೆಯಲ್ಲಿ ಹೇಳುತ್ತಿಲ್ಲ. ಆದರೆ ಇಂತಹ ಕಿರಿಕಿರಿಯಿಂದ ಶಿಕ್ಷಣದತ್ತ ಮನಸ್ಸು ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ. ಎಷ್ಟೋ ವಿದ್ಯಾರ್ಥಿನಿಯರು ಕಣ್ಣೀರು ಹಾಕುತ್ತಿದ್ದಾರೆ. ಕೆಲವು ವಿದ್ಯಾರ್ಥಿನಿಯರು ಶಿಕ್ಷಣವೇ ಬೇಡ, ಬಿಟ್ಟು ಬಿಡೋಣ ಎನ್ನುವ ಮನಸ್ಥಿತಿಗೆ ಬಂದಿದ್ದಾರೆ. ಕೆಲವು ವಿದ್ಯಾರ್ಥಿನಿಯರು ಶಾಲಾ-ಕಾಲೇಜುಗಳ ಮುಖ್ಯಸ್ಥರಿಗೆ ದೂರು ನೀಡುತ್ತಿದ್ದಾರೆ.

ಈ ಹಿಂದೆ ನಿಂತಿದ್ದ ಪುಂಡ-ಪೋಕರಿಗಳ ಹಾವಳಿ ಈಗ ಮತ್ತೆ ತಲೆಯೆತ್ತಿ ನಿಂತಿದೆ. ಈ ವಿಷಯವನ್ನು ಪಾಲಕರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಒಬ್ಬ ಪಾಲಕರು ಪೊಲೀಸರ ಗಮನಕ್ಕೂ ತಂದಿದ್ದಾರೆ. ಕೋವಿಡ್‌ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಶಾಲಾ-ಕಾಲೇಜುಗಳು ಆರಂಭವಾಯಿತಲ್ಲ ಎಂದು ನಿಟ್ಟುಸಿರು ಬಿಡುವ ವೇಳೆ ಪುಂಡರ ಕಾಟ ವಿದ್ಯಾರ್ಥಿನಿಯರಿಗೆ ತಲೆನೋವು ತಂದಿದೆ.

ಟವರ್‌ಗಳೇ ಇಲ್ಲ, ನೀವು ಹೇಗೆ ಆನ್‌ಲೈನ್ ಕ್ಲಾಸ್ ಮಾಡ್ತೀರಿ... ಹಾಲಪ್ಪ ಪ್ರಶ್ನೆ

ಸ್ಥಳೀಯ ಅಬ್ಬಿಗೇರಿ ರಸ್ತೆಯಲ್ಲಿ 2 ಪದವಿ ಕಾಲೇಜು, 3 ಪಪೂ ಕಾಲೇಜು, 1 ಐಟಿಐ, 1 ಸಿಬಿಎಸ್‌ಸಿ ಶಾಲೆ, 1 ಕಿವುಡ ಮತ್ತು ಮೂಕಮಕ್ಕಳ ವಸತಿಶಾಲೆ, 6 ಪ್ರೌಢಶಾಲೆ, 6 ಪ್ರಾಥಮಿಕ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯ ಕಲಿಕೆಗೆಂದು ಇಲ್ಲಿಗೆ ಆಗಮಿಸುತ್ತಾರೆ. ಬಸ್‌ ನಿಲ್ದಾಣದಿಂದ ಶಾಲಾ-ಕಾಲೇಜು ತಲುಪುವ ವೇಳೆ ವಿದ್ಯಾರ್ಥಿನಿಯರಿಗೆ ಕಿರಿಕಿರಿಯಾಗುತ್ತಿದೆ. ಎಷ್ಟೋ ಹೆಣ್ಣುಮಕ್ಕಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಅತ್ತ ಪಾಲಕರಿಗೆ ತಿಳಿಸಿದರೆ ಶಾಲೆ ಬಿಡಿಸುತ್ತಾರೆಂಬ ಭಯ, ಇತ್ತ ಕಾಲೇೕಜಿಗೆ ಬಂದರೆ ಪುಂಡ-ಪೋಕರಿಗಳ ಕಿರಿಕಿರಿ. ಕೆಲವರು ಮೌಕಿಕವಾಗಿ ಶಾಲಾ ಮುಖ್ಯಸ್ಥರ ಗಮನಕ್ಕೆ ತಂದಿದ್ದಾರೆ.

ಬೀಟ್‌ ನಿಗದಿ:

2018ರ ಜೂನ್‌ನಲ್ಲಿ ಇಂತಹ ಪ್ರಸಂಗ ಎದುರಾದಾಗ ಅಂದಿನ ಪಿಎಸ್‌ಐ ಬಿ.ವೈ. ಕಜ್ಜಗಲ್ಲ ಮೂರು ಕಡೆಗಳಲ್ಲಿ ಬೀಟ್‌ ನಿಗದಿ ಮಾಡಿದ್ದರು. ಬೆಳಗಿನ ವೇಳೆ ಮೂರು ಗಂಟೆ ಹಾಗೂ ಸಂಜೆ ವೇಳೆ ಎರಡು ಗಂಟೆಯಂತೆ ಪೊಲೀಸರಿಗೆ ಡ್ಯೂಟಿ ನಿಗದಿ ಮಾಡಿದ್ದರು. ಪ್ರಾರಂಭದಲ್ಲಿ ಸರಿಯಾಗಿಯೆ ಕಾರ್ಯನಿರ್ವಹಿಸಿದ ಸಿಬ್ಬಂದಿ ಮುಂದೆ ಕಾಟಾಚಾರಕ್ಕೆಂಬಂತೆ ಆಗೊಮ್ಮೆ ಈಗೊಮ್ಮೆ ಭೇಟಿ ನೀಡಿ ಸಹಿ ಮಾಡಿದ್ದಾರೆ. ಮಾ. 2019ರಲ್ಲಿ ಕೊನೆಯ ಸಹಿ ಮಾಡಿದ್ದ ಇಲಾಖಾ ಸಿಬ್ಬಂದಿ ಇದನ್ನು ಸ್ಥಗಿತಗೊಳಿಸಿದ್ದಾರೆ.

ಶೈಕ್ಷಣಿಕ ವರ್ಷ ಆರಂಭಕ್ಕೆ ಡೇಟ್ ಫಿಕ್ಸ್..? 1ರಿಂದ 5ನೇ ತರಗತಿ ಯಾವಾಗ..?

ಬೀದಿ ಕಾಮಣ್ಣರ ಹಾವಳಿಯಿಂದ ವಿದ್ಯಾರ್ಥಿನಿಯರ ಶಿಕ್ಷಣ ಕುಂಠಿತವಾಗುತ್ತಿದೆ. ಕೆಲವು ಮಕ್ಕಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ಹಿಂದೆ ಇಂತಹ ಪ್ರಸಂಗಗಳು ನಡೆದಾಗ ಸ್ಥಳಿಯ ಪೊಲೀಸರು ನಿಯಂತ್ರಣ ಮಾಡಿದ್ದರು. ಈಗ ಮತ್ತೆ ಉಲ್ಬಣಗೊಂಡಿದೆ. ಸಂಬಂಧಿಸಿದವರು ತಕ್ಷಣ ಕ್ರಮಕ್ಕೆ ಮುಂದಾಗಬೇಕು.

ವೈ.ಸಿ. ಪಾಟೀಲ ಪ್ರಾಚಾರ್ಯ

ಪುಂಡ-ಪೋಕರಿಗಳ ಹಾವಳಿಯಿಂದ ಮಕ್ಕಳು ಶಾಲೆಗೆ ತೆರಳಲು ಕಿರಿಕಿರಿಯಾಗುತ್ತಿದೆ. ಇದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯವಾಗುತ್ತಿದೆ. ಇದು ಮಕ್ಕಳ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ನಿರ್ಭೀತಿಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸುವಂತಾಗಲು ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಾಲಕರು ರಾಜಶೇಖರ ಶಿರಹಟ್ಟಿ ತಿಳಿಸಿದ್ದಾರೆ. 

ಅಬ್ಬಿಗೇರಿ ರಸ್ತೆಯಲ್ಲಿ ಶಾಲಾ ಕಾಲೇಜುಗಳು ಹೆಚ್ಚಿದ್ದು, ಇಲ್ಲಿಗೆ ಗಣನೀಯ ಪ್ರಮಾಣದಲ್ಲಿ ಮಕ್ಕಳು ಬರುತ್ತಾರೆ. ಕಳೆದ ಕೆಲವು ದಿನಗಳಿಂದ ಪೆಟ್ರೋಲಿಂಗ್‌ ನಾನೇ ಮಾಡುತ್ತಿದ್ದೇನೆ. ನಾಳೆಯಿಂದ ಮೊದಲಿನ ಬೀಟ್‌ ಪುಸ್ತಕವನ್ನು ಪರಿಶೀಲಿಸಿ ಸಿಬ್ಬಂದಿಯನ್ನು ನಿಯೋಜಿಸುತ್ತೇನೆ ಎಂದು ಪಿಎಸ್‌ಐ ರಾಘವೇಂದ್ರ ಎಸ್‌. ಹೇಳಿದ್ದಾರೆ.
 

Latest Videos
Follow Us:
Download App:
  • android
  • ios