ಬೆಂಗಳೂರು (ನ.10):  ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಗ್ರಾಮೀಣ ಮಕ್ಕಳಿಗೆ ಆನ್‌ಲೈನ್‌ ಮತ್ತು ಆಫ್‌ಲೈನ್‌ ಶಿಕ್ಷಣ ಪಡೆಯಲು ಪೂರಕವಾಗಿ ಟ್ಯಾಬ್‌ ಮತ್ತು ಲ್ಯಾಪ್‌ ಟಾಪ್‌ ವಿತರಿಸುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ‘ಜ್ಞಾನತಾಣ’ ಅಂತರ್ಜಾಲ ಶಿಕ್ಷಣ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಚಾಲನೆ ನೀಡಿದರು.

ಈ ಯೋಜನೆಯಡಿಯಲ್ಲಿ ರಾಜ್ಯಾದ್ಯಂತ 21 ಕೋಟಿ ರೂ ವೆಚ್ಚದಲ್ಲಿ ಮೊದಲ ವರ್ಷ 20 ಸಾವಿರ ಟ್ಯಾಬ್‌ ಮತ್ತು 10 ಸಾವಿರ ಲಾಪ್‌ಟಾಪ್‌ಗಳನ್ನು ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಗ್ರಾಮೀಣ ಮಕ್ಕಳಿಗೆ ವಿತರಿಸಲಾಗುತ್ತದೆ. ಐದರಿಂದ ಹತ್ತನೇ ತರಗತಿಯ ಮಕ್ಕಳ ಇಂಗ್ಲೀಷ್‌, ಗಣಿತ, ವಿಜ್ಞಾನ ಇತ್ಯಾದಿ ಪಠ್ಯಗಳು ಪ್ರಿಲೋಡೆಡ್‌ ಆಗಿದ್ದು ಇಂಟರ್ನೆಟ್‌ ಬಳಸದೆ ಪಠ್ಯಗಳ ಅಧ್ಯಯನವನ್ನು ನಡೆಸಬಹುದು. 450 ಮಂದಿ ಗೌರವ ಶಿಕ್ಷಕರನ್ನು ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ನಿಯೋಜಿಸಲಾಗಿದೆ.

ನಕಲಿ ಉತ್ಪನ್ನ ಮಾರಾಟಗಾರರಿಂದ ಗ್ರಾಹಕರ ರಕ್ಷಣೆಗೆ ಮುಂದಾದ HP! ..

ಯೋಜನೆಯ ಆಶಯವನ್ನು ಮೆಚ್ಚಿ ಮಾತನಾಡಿದ ಬಿ.ಎಸ್‌.ಯಡಿಯೂರಪ್ಪ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ನಿಗದಿತ ಪಠ್ಯವನ್ನು ಪಡೆದು ಅಧ್ಯಯನ ನಡೆಸುವ ವ್ಯವಸ್ಥೆಯನ್ನು ಈ ಯೋಜನೆಯ ಮೂಲಕ ಒದಗಿಸಲಾಗಿದೆ. ಗ್ರಾಮೀಣ ಮಕ್ಕಳಿಗೆ ಅಂತರ್ಜಾಲ ಶಿಕ್ಷಣವನ್ನು ತಲುಪಿಸಲು ಈ ಯೋಜನೆ ಸಹಕಾರಿ ಎಂದರು.

‘ಕೋವಿಡ್‌ -19ರ ಕಾಲಘಟ್ಟದಲ್ಲಿ ಶಾಲಾ ಮಕ್ಕಳಿಂದ ಹಿಡಿದು ಸ್ನಾತಕೋತ್ತರ ವಿದ್ಯಾರ್ಥಿಗಳು ಆನ್‌ ಲೈನ್‌ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ. ಗ್ರಾಮೀಣ ಮಕ್ಕಳು ಇಂತಹ ಶಿಕ್ಷಣ ಕ್ರಮದಿಂದ ವಂಚಿತರಾಗದಂತೆ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸುವ ಈ ಯೋಜನೆಯನ್ನು ನಾನು ಸಂತೋಷದಿಂದ ಉದ್ಘಾಟಿಸುತ್ತಿದ್ದೇನೆ’ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕೃಷಿ ಕಾರ್ಯಕ್ರಮಗಳು, ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ, ಜನ ಜಾಗೃತಿ ಯೋಜನೆ, ಶೈಕ್ಷಣಿಕ ಕಾರ್ಯಕ್ರಮಗಳು ಸೇರಿದಂತೆ ಸಮಾಜ ಪರವಾಗಿರುವ ಹತ್ತು ಹಲವು ಕಾರ್ಯಕ್ರಮಗಳನ್ನು ಕೈಗೊಂಡು ನಾಡಿನ ಸಮಗ್ರ ಅಭಿವೃದ್ಧಿಗೆ ಸರ್ಕಾರದೊಂದಿಗೆ ಕೈಜೋಡಿಸಿರುವ ಹೆಗ್ಗಳಿಕೆಯನ್ನು ವಿರೇಂದ್ರ ಹೆಗ್ಗಡೆಯವರು ಹೊಂದಿದ್ದಾರೆ. ಸಾಮಾಜಿಕ ಕಳಕಳಿಯ ಈ ಪರಂಪರೆಯನ್ನು ಮುಂದುವರಿಸುವ ಮತ್ತೊಂದು ಹೆಜ್ಜೆಯನ್ನು ಜ್ಞಾನತಾಣ ಯೋಜನೆಯ ಮೂಲಕ ವಿರೇಂದ್ರ ಹೆಗ್ಗಡೆಯವರು ಇಟ್ಟಿದ್ದಾರೆ ಎಂದು ಯಡಿಯೂರಪ್ಪ ಅಭಿಪ್ರಾಯ ಪಟ್ಟರು.

ಜ್ಞಾನತಾಣವು ಸಹಸ್ರಾರು ವಿದ್ಯಾರ್ಥಿಗಳ ಬಾಳಿಗೆ ದಾರಿದೀಪವಾಗಿದೆ. ಧರ್ಮಸ್ಥಳವು ನಾಡಿನಾದ್ಯಂತ ವಿವಿಧ ಪ್ರಕಾರ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು ವೈವಿಧ್ಯಮಯ ಶಿಕ್ಷಣವನ್ನು ನೀಡುತ್ತಿದೆ. ವಿರೇಂದ್ರ ಹೆಗ್ಗಡೆಯವರು ತಮ್ಮ ದೂರದೃಷ್ಟಿಯ ಯೋಜನೆಗಳ ಮೂಲಕ ರಾಜ್ಯದ ಲಕ್ಷಾಂತರ ಜನರ ಬದುಕನ್ನು ಹಸನುಗೊಳಿಸಿದ್ದಾರೆ. ಧರ್ಮಸ್ಥಳವು ಧಾರ್ಮಿಕ ಸಂಸ್ಥೆಯೊಂದು ಸಾಮಾಜಿಕ ಕಾರ್ಯದ ಮೂಲಕ ಜಗತ್ತಿಗೆ ಮಾದರಿಯಾಗಿರುವ ಅಪೂರ್ವ ಉದಾಹರಣೆ ಎಂದು ಯಡಿಯೂರಪ್ಪ ಗುಣಗಾನ ಮಾಡಿದರು.

1 ಲಕ್ಷ ಮಕ್ಕಳಿಗೆ ಪ್ರಯೋಜನ- ಹೆಗ್ಗಡೆ :  ಈ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ, ಕೋವಿಡ್‌ ನ ಭಯಭೀತ ಸನ್ನಿವೇಶದಲ್ಲೂ ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಉದ್ದೇಶದಿಂದ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಅತ್ಯುತ್ತಮ ಯೋಜನೆ ಜಾರಿಗೆ ಬಂದಿದೆ. ಒಂದು ಲಕ್ಷ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆಯಲಿದ್ದಾರೆ. ರಾಜ್ಯದ ಕ್ರಾಂತಿಕಾರಿ ಅಭಿವೃದ್ಧಿಗೆ ಇದು ಧರ್ಮಸ್ಥಳದ ಸಣ್ಣ ಕೊಡುಗೆ ಎಂದು ತಿಳಿಸಿದರು.