ಬೆಂಗಳೂರು, (ಮೇ.12): ಕೊರೋನಾ ವೈರಸ್ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೊಳ್ಳಿ ಇಟ್ಟಿದೆ. ಮಹಾಮಾರಿ ಕೊರೋನಾ ಎಂಟ್ರಿ ಬಳಿಕ ಸರಿಯಾದ ಸಮಯಕ್ಕೆ ಶಿಕ್ಷಣ, ವಿದ್ಯಾಭ್ಯಾಸ ಹಾಗೂ ಶಾಲೆಗಳಿಲ್ಲದೆ ವಿದ್ಯಾರ್ಥಿಗಳು ಮನೆಯಲ್ಲೇ ಕಾಲಕಳೆಯುವಂತಾಗಿದೆ.

ಇನ್ನು ಶಾಲಾ ವಿದ್ಯಾರ್ಥಿಗಳಿಗೆ ನೀಡಬೇಕಾದ ಬಾಕಿ ಉಳಿದಿರುವ ಅಹಾರ ಧಾನ್ಯಗಳನ್ನು ಮೇ ತಿಂಗಳ ಅಂತ್ಯದೊಳಗೆ ಪೂರ್ಣವಾಗಿ ವಿತರಿಸಲು ಸೂಚನೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಕಷ್ಟದಲ್ಲಿರುವ ವಿದ್ಯಾರ್ಥಿಗಳ ಕುಟುಂಬಗಳಿಗೆ ಅನುಕೂಲವಾಗಲಿದೆ.

ಪಡಿತರ ಪಡೆಯಲು ಬೆರಳಚ್ಚು (ಬಯೋಮೆಟ್ರಿಕ್) ಕಡ್ಡಾಯವಲ್ಲ..!

ಇಂದು (ಬುಧವಾರ) ವಿಧಾನಸೌಧದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಉಪಹಾರದ ಬದಲಿಗೆ ನೀಡಲಾಗುತ್ತಿದ್ದ ಬಾಕಿ ಉಳಿದಿರುವ ಅಡುಗೆ ಎಣ್ಣೆ ಸೇರಿದಂತೆ ಆಹಾರ ಧಾನ್ಯಗಳನ್ನು ಲಾಕ್-ಡೌನ್ ಅವಧಿ ಮುಗಿದ ತಕ್ಷಣವೇ ವಿತರಿಸಬೇಕೆಂದು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಈ ಆಹಾರ ಧಾನ್ಯಗಳಿಗೆ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ. ಪೂರ್ಣ ದಿನಗಳಿಗೆ ವಿತರಣೆ ಮಾಡಲು ಅಗತ್ಯವಿರುವ ಆಹಾರ ಧಾನ್ಯ ಕೆಎಸ್‌ಎಫ್ ಸಿ ಗೋದಾಮುಗಳಲ್ಲಿ ಏಕ ಕಾಲದಲ್ಲಿ ಸಂಗ್ರಹಣೆ ಮಾಡಿ ಎತ್ತುವಳಿ ಮಾಡಲು ಕಷ್ಟಸಾಧ್ಯವಾಗಿರುವುದರಿಂದ ಎರಡು ಹಂತಗಳಲ್ಲಿ ವಿತರಿಸಲು ತೀರ್ಮಾನಿಸಿ ಈಗಾಗಲೇ ಒಂದು ಹಂತದ ವಿತರಣೆ ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇಂದಿರಾ ಕ್ಯಾಂಟೀನ್‌ನಲ್ಲಿ ಫ್ರೀ ಊಟ-ತಿಂಡಿ: ಬೆಂಗ್ಳೂರು ಕಡೆಗಣಿಸಿದ್ದಕ್ಕೆ ಸಿದ್ದು ಆಕ್ರೋಶ 

ಮೊದಲ ಹಂತದ 108 ದಿನಗಳ ಆಹಾರ ಧಾನ್ಯಗಳನ್ನು ಎಲ್ಲ ಶಾಲೆಗಳಿಗೆ ವಿತರಿಸಲಾಗಿದೆ. ಉಳಿದ ಅವಧಿಯಾದ 2021ರ ನವೆಂಬರ್ ನಿಂದ 2021ಮಾರ್ಚ್ ವರೆಗಿನ 132 ದಿನಗಳಿಗೆ ಸಂಬಂಧಿಸಿದ ಆಹಾರ ಧಾನ್ಯಗಳನ್ನು ಕೆಲವು ಶಾಲೆಗಳಿಗೆ ವಿತರಿಸಲಾಗಿದೆ. ಲಾಕ್-ಡೌನ್ ಘೋಷಣೆಯಾದ್ದರಿಂದ ಕೆಲವು ಶಾಲೆಗಳಿಗೆ ಎರಡನೇ ಹಂತದ ಆಹಾರ ಧಾನ್ಯಗಳನ್ನು ವಿತರಿಸಲು ಸಾಧ್ಯವಾಗಿಲ್ಲ. ಲಾಕ್-ಡೌನ್ ಮುಗಿದ ಕೂಡಲೇ ಪ್ರಕ್ರಿಯೆ ಪ್ರಾರಂಭಿಸಿ ಉಳಿದ ಶಾಲೆಗಳಿಗೆ ಮೇ ಅಂತ್ಯದೊಳಗೆ ವಿತರಿಸಲು ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ತೊಗರಿ ಬೇಳೆ ಸರಬರಾಜುದಾರರಿಗೆ ಏ. 27ರಂದು ಮತ್ತು ಅಡುಗೆ ಎಣ್ಣೆ ಸರಬರಾಜುದಾರರಿಗೆ ಮೇ 7ರಂದು ಸರಬರಾಜು ಕಾರ್ಯಾದೇಶ ನೀಡಲಾಗಿದೆ ಎಂದು ತಿಳಿಸಿದ ಸಚಿವರು, ದಾಸ್ತಾನಿನಲ್ಲಿರುವ ಆಹಾರ ಧಾನ್ಯಗಳನ್ನು ಡಿಡಿಪಿಐ ಮತ್ತು ಜಿಪಂ ಸಿಇಒಗಳೊಂದಿಗೆ ಚರ್ಚಿಸಿ ತಕ್ಷಣವೇ ಕೂಡಲೇ ವಿತರಿಸಲು ಸೂಚನೆ ನೀಡಲಾಗಿದೆ. ಎಲ್ಲ ಶಾಲೆಗಳ ಮುಖ್ಯಸ್ಥರು ಶಾಲೆಗಳಲ್ಲಿ ಹಾಜರಿರುವಂತೆ ಸೂಚಿಸಿ ಸೂಚಿತ ಅವಧಿಗೆ ಆಹಾರ ಧಾನ್ಯಗಳ ವಿತರಣೆಗೆ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.

ಶಾಲೆಗಳು ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಪ್ರಸ್ತುತ 6 ತಿಂಗಳ ಅವಧಿಗೆ ಒಂದು ಬಾರಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದ್ದು, ಮುಂದಿನ ಶೈಕ್ಷಣಿಕ ಸಾಲಿನಿಂದ ಇದನ್ನು ಸರಿಪಡಿಸಲಾಗುತ್ತದೆ. ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ ತಿಂಗಳು ವಿದ್ಯಾರ್ಥಿಗಳ ಮನೆಗೆ ಆಹಾರ ಧಾನ್ಯ ವಿತರಣೆಗೆ ನೀಲಿನಕ್ಷೆ ತಯಾರಿಸಲು ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.