ಗುಲ್ಬರ್ಗ ವಿವಿಯಲ್ಲಿ 30 ಸಾವಿರ ಕೊಟ್ಟರೆ ನಕಲಿ ಅಂಕಪಟ್ಟಿ..!
* ಗುಲ್ಬರ್ಗ ವಿವಿ ನಕಲಿ ಅಂಕಪಟ್ಟಿ ಜಾಲದಲ್ಲಿ ಮೌಲ್ಯಮಾಪನ ವಿಭಾಗದ ಸಿಬ್ಬಂದಿಯೇ ಶ್ಯಾಮೀಲು?
* 20 ಸಾವಿರ ಕೊಟ್ಟು ಪಡೆದ ಅಂಕಪಟ್ಟಿ ನಕಲಿ, ಫಲಾನುಭವಿ ವಿದ್ಯಾರ್ಥಿಯಿಂದ ಕುಲಪತಿಗೆ ದೂರು ಸಲ್ಲಿಕೆ
* ದಾಖಲಾತಿಗಳ ಪರಿಶೀಲನೆ ವೇಳೆ ನಕಲಿ ಅಂಕಪಟ್ಟಿ ನೀಡಲಾಗಿದೆ
ಕಲಬುರಗಿ(ಜೂ.30): ಒಂದಿಲ್ಲೊಂದು ಕಾರಣದಿಂದಾಗಿ ವಿವಾದದಲ್ಲಿರುವ ಗುಲ್ಬರ್ಗ ವಿವಿಯಲ್ಲೀಗ ನಕಲಿ ಅಂಕಪಟ್ಟಿ ಹಗರಣ ಸದ್ದು ಮಾಡಲಾರಂಭಿಸಿದೆ. ವಿಶ್ವವಿದ್ಯಾಲಯದ ನೌಕರರು ವಿದ್ಯಾರ್ಥಿಯೊಬ್ಬನಿಂದ ಹಣ ಪಡೆದು ನಕಲಿ ಅಂಕಪಟ್ಟಿ ನೀಡಿರುವ ಪ್ರಕರಣ ಬಯಲಿಗೆ ಬಂದಿದೆ.
ವಿವಿ ಮೌಲ್ಯಮಾಪನ ಸಿಬ್ಬಂದಿ ಬಿಕಾಂ ನಾಲ್ಕನೇ ಸೆಮಿಸ್ಟರ್ ಅನುತ್ತೀರ್ಣ ಆಗಿದ್ದ ವಿದ್ಯಾರ್ಥಿ ನಾಗರಾಜ್ ಎಂಬಾತನಿಂದ 30 ಸಾವಿರ ರು. ಪಡೆದು ಪಾಸ್ ಆಗಿರುವ ಅಂಕಪಟ್ಟಿನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ವಿಶ್ವವಿದ್ಯಾಲಯ ತನಿಖೆ ನಡೆಸಲು ಮುಂದಾಗಿದೆ.
ಹೊಸಪೇಟೆ: ಪಾಸಾದರೂ ಡಿಗ್ರಿ ಅಂಕಪಟ್ಟಿ ಕೊಡುತ್ತಿಲ್ಲ, ವಿದ್ಯಾರ್ಥಿಗಳ ಪರದಾಟ
ನಗರದ ಅಖಿಲ ಕರ್ನಾಟಕ ಸ್ನೇಹ ಗಂಗಾ ಕಾಲೇಜಿನ ವಿದ್ಯಾರ್ಥಿಯಾದ ನಾಗರಾಜ, ಬಿಕಾಂ ನಾಲ್ಕನೇ ಸೆಮಿಸ್ಟರ್‌ನಲ್ಲಿ ಫೇಲಾಗಿ, ಐದನೇ ಮತ್ತು ಆರನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಪಾಸಾಗಿ ಮುಂದೆ ಎಂಎಸ್‌ಡಬ್ಲ್ಯೂ ಕೋರ್ಸ್ ಮಾಡುವುದಕ್ಕಾಗಿ ತಯಾರಿ ನಡೆಸಿದ್ದ. ಹೀಗಾಗಿ ಫೇಲಾಗಿರುವ ನಾಲ್ಕನೇ ಸೆಮಿಸ್ಟರ್ ಫಲಿತಾಂಶವನ್ನು ಹೇಗಾದರೂ ಮಾಡಿ ಪಾಸ್ ಮಾಡಿಕೊಳ್ಳಬೇಕು ಅಂದುಕೊಂಡು ಅದಕ್ಕಾಗಿ ಅಡ್ಡದಾರಿ ಹಿಡಿದಿದ್ದ.
ಮೌಲ್ಯಮಾಪನ ವಿಭಾಗದ ಎಫ್‌ಡಿಎ ಸಂಜಯ ಕುಮಾರ್‌ಗೆ ನಾಗರಾಜ್ ಭೇಟಿ ಮಾಡಿ ಡೀಲ್ ಮಾಡಲು ಮುಂದಾದ, 30 ಸಾವಿರ ರು. ಹಣ ನೀಡಿದರೆ, ನಾಲ್ಕನೇ ಸೆಮಿಸ್ಟರ್ ಅಂಕಪಟ್ಟಿ ನೀಡುವುದಾಗಿ ಎಫ್‌ಡಿಎ ಹೇಳಿದ್ದರು ಎನ್ನಲಾಗಿದೆ. ಅದಕ್ಕೆ ಒಪ್ಪಿಕೊಂಡ ವಿದ್ಯಾರ್ಥಿ ನಾಗರಾಜ್, ಮುಂಗಡವಾಗಿ 20 ಸಾವಿರ ರು. ಕೊಟ್ಟು ಅಂಕಪಟ್ಟಿ ಪಡೆದುಕೊಂಡಿದ್ದಾರೆ.
ಫುಟ್‌ಪಾತ್‌ನಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಸಿವಿಲ್ ಎಂಜಿನಿಯರ್
ಅಂಕಪಟ್ಟಿ ಕೈಗೆ ಸಿಕ್ಕ ಮೇಲೆ ವಿದ್ಯಾರ್ಥಿಗೆ ಶಾಕ್:
ನಂತರ ನಾಗರಾಜ್ ಎಂಎಸ್‌ಡಬ್ಲ್ಯೂ ಪ್ರವೇಶ ಪಡೆಯಲು ಬೇರೊಂದು ಕಾಲೇಜಿಗೆ ಹೋಗಿದ್ದಾರೆ. ಅಲ್ಲಿ ದಾಖಲಾತಿಗಳನ್ನು ಪರಿಶೀಲನೆ ಮಾಡಲೆಂದು ಅಂಕಪಟ್ಟಿಯನ್ನು ವಿಶ್ವವಿದ್ಯಾಲಯಕ್ಕೆ ರವಾನಿಸಲಾಗಿದೆ. ಆದರೆ, ಮೌಲ್ಯಮಾಪನ ವಿಭಾಗದಲ್ಲಿ ನಾಗರಾಜ್ ಪಾಸಾಗಿರುವ ಬಗ್ಗೆ ನಮೂದೇ ಆಗಿಲ್ಲ. ಆಗ ನಾಗರಾಜ್‌ಗೆ ನಕಲಿ ಅಂಕಪಟ್ಟಿನೀಡಲಾಗಿದೆ ಎಂಬ ಅಸಲಿ ವಿಷಯ ಗೊತ್ತಾಗಿದೆ. ನಂತರ ಆತನೇ ಇಡೀ ಪ್ರಕರಣವನ್ನು ವಿವರಿಸಿ, ನಕಲಿ ಅಂಕಪಟ್ಟಿಕೊಟ್ಟ ಎಫ್‌ಡಿಎ ಸಂಜಯಕುಮಾರ ವಿರುದ್ಧ ಕುಲಪತಿಗಳಿಗೆ ದೂರು ಸಲ್ಲಿಸಿದ್ದಾರೆ.
ಸೈಬರ್ ಕ್ರೈಂಗೆ ದೂರು ಕುಲಪತಿ ಹೇಳಿಕೆ:
ಈ ನಕಲಿ ಅಂಕಪಟ್ಟಿ ದಂಧೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಲಪತಿ ಪ್ರೊ. ದಯಾನಂದ ಅಗಸರ್ ಅವರು, 2019ರಲ್ಲಿ ವಿದ್ಯಾರ್ಥಿ ನಾಗರಾಜ್ ಬಿ.ಕಾಂ ನಾಲ್ಕನೇ ಸೆಮಿಸ್ಟರ್ ಪಾಸಾಗಲು ಮೌಲ್ಯಮಾಪನ ವಿಭಾಗದ ಎಫ್‌ಡಿಎಗೆ ಹಣ ನೀಡಿದ್ದಾರೆ. 2020ರಲ್ಲಿ ನಾಗರಾಜಗೆ ಅಂಕಪಟ್ಟಿ ಅವರೇ ನೀಡಿದ್ದರು. ಆದರೆ, ಆ ಅಂಕಪಟ್ಟಿ ಪರಿಶೀಲನೆ ವೇಳೆ ವಿವಿ ಪೋರ್ಟಲ್‌ನಲ್ಲಿ ಫೇಲ್ ಅಂತಾ ತೋರಿಸಿದೆ. ಹೀಗಾಗಿ ಮೇಲ್ನೋಟಕ್ಕೆ ಎಫ್‌ಡಿಎ ಸಂಜಯಕುಮಾರ ಹಣ ಪಡೆದು ಅಂಕಪಟ್ಟಿನೀಡಿರುವುದು ಸಾಬೀತಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೇ, ಈ ಬಗ್ಗೆ ಮೌಲ್ಯಮಾಪನ ವಿಭಾಗದಲ್ಲಿ ಸೂಕ್ತ ತನಿಖೆ ನಡೆಸಲಾಗುವುದು. ನಕಲಿ ಅಂಕಪಟ್ಟಿ ಕುರಿತು ತನಿಖೆ ನಡೆಸಲು ಸೈಬರ್ ಕ್ರೈಂ ಮೊರೆ ಹೋಗಿರುವುದಾಗಿ ವಿಸಿ ಪೊ. ದಯಾನಂದ ಅಗÓರ್ ಹೇಳಿದ್ದಾರೆ.