ಕಾರ್ಯಾರಂಭ ಮಾಡಿರುವ ಗುರುಕುಲಗಳು ಕಳೆದ ಎರಡು ವರ್ಷದಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ನಾಡಿನ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ

ಉತ್ತರ ಕನ್ನಡ(ಸೆ.07): ಭಾರತದ ಭವಿಷ್ಯದ ಶೈಕ್ಷಣಿಕ ಕೇಂದ್ರವಾಗಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಶ್ರೀರಾಮಚಂದ್ರಾಪುರ ಮಠ ಅಭಿವೃದ್ಧಿಪಡಿಸುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಪರಂಪರಾ ಗುರುಕುಲ ಆರಂಭಿಸಲು ಹಾಗೂ ಸದ್ಯದಲ್ಲೇ ಪರಂಪರಾ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಲಾಗುವುದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು. 

Add Asianetnews Kannada as a Preferred SourcegooglePreferred

ಈಗಾಗಲೇ ಪರಂಪರಾ ಗುರುಕುಲ ಸಣ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದ್ದು, ಮುಂದಿನ ವರ್ಷದಿಂದ ಇದು ಬೃಹತ್ ಸ್ವರೂಪ ಪಡೆಯಲಿದೆ. ಆ ಬಳಿಕ ಇದೇ ಆಧಾರದಲ್ಲಿ ಪರಂಪರಾ ವಿಶ್ವವಿದ್ಯಾನಿಲಯ ಆರಂಭಿಸಲು ಅಗತ್ಯ ಚೌಕಟ್ಟು ಸಿದ್ಧಪಡಿಸಲಾಗಿದ್ದು, ಸರ್ಕಾರದ ಹಂತದಲ್ಲಿದೆ. ಕಾರ್ಯಾರಂಭ ಮಾಡಿರುವ ಗುರುಕುಲಗಳು ಕಳೆದ ಎರಡು ವರ್ಷದಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ನಾಡಿನ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಋಷಿಯುಗ ಮತ್ತು ನವಯುಗ ಶಿಕ್ಷಣದ ಸಮನ್ವಯದೊಂದಿಗೆ ಗುರುಕುಲಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.

ಶಿಕ್ಷಕರ ನೇಮಕಾತಿ ಅಕ್ರಮ ಆರೋಪ; ಶಿಕ್ಷಣ ಸಚಿವರ ತವರು ಜಿಲ್ಲೆಯ 10 ಶಿಕ್ಷಕರು ಸಿಐಡಿ ವಶಕ್ಕೆ

ಪರಂಪರಾ ಗುರುಕುಲದಲ್ಲಿ ವಿದ್ಯಾರ್ಥಿಗಳು ಆರು ವರ್ಷದಲ್ಲಿ 18 ಭಾರತೀಯ ವಿದ್ಯೆಗಳ ಪೂರ್ವಶಿಕ್ಷಣ ಪಡೆಯಲಿದ್ದು, ಪರಂಪರಾ ವಿಶ್ವವಿದ್ಯಾನಿಲಯಲ್ಲಿ ಇವುಗಳ ಉನ್ನತ ಅಧ್ಯಯನಕ್ಕೆ ಅವಕಾಶ ಇರುತ್ತದೆ. ಇದರ ಪಠ್ಯಕ್ರಮ ಸೇರಿದಂತೆ ಸಮಗ್ರ ರೂಪರೇಷೆ ಅಭಿವೃದ್ಧಿಪಡಿಸಿ ಕೇಂದ್ರ ಸರ್ಕಾರಕ್ಕೆ ವಿಸ್ತ್ರತ ಯೋಜನಾ ವರದಿ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಮಹತ್ವಾಕಾಂಕ್ಷಿ ವಿಶ್ವವಿದ್ಯಾಪೀಠ 15 ವರ್ಷಗಳ ವಿಸ್ತ್ರತ ಯೋಜನೆಯಾಗಿದ್ದು, ಇದು ಪೂರ್ಣವಾಗಿ ಕಾರ್ಯಗತಗೊಂಡಾಗ ಭಾರತೀಯ ಪದ್ಧತಿಯ ಸಮಗ್ರ ಶಿಕ್ಷಣವನ್ನು 25 ಸಾವಿರ ವಿದ್ಯಾರ್ಥಿಗಳು ಕಲಿಯಲು ಅವಕಾಶ ಮಾಡಿಕೊಡಲಾಗುತ್ತದೆ. ಈಗಾಗಲೇ 150 ಕೋಟಿ ರೂಪಾಯಿ ವೆಚ್ಚದಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇನ್ನು ಸ್ವಾಮೀಜಿಯವರ ಗುರುಕುಲ ಚಾತುರ್ಮಾಸ್ಯ ಅಂಗವಾಗಿ ಲೋಕಕಲ್ಯಾಣಾರ್ಥವಾಗಿ ಎರಡು ತಿಂಗಳಿಂದ ನಡೆಯುತ್ತಿರುವ ಸಹಸ್ರ ಚಂಡಿ ಮಹಾಯಾಗದ ಪೂರ್ಣಾಹುತಿ ಈ ತಿಂಗಳ 9ರಂದು ನಡೆಯಲಿದೆ. ಲೋಕಕಲ್ಯಾಣಾರ್ಥವಾಗಿ ಮತ್ತು ದೇಶಕ್ಕೆ ಹಾಗೂ ವಿಶ್ವಕ್ಕೆ ಎದುರಾಗಿರುವ ವಿಕೋಪ ನಿವಾರಣೆಗೆ ಸಂಕಲ್ಪಿಸಿ ಈ ಮಹಾಯಾಗ ನಡೆಯುತ್ತಿದ್ದು, ಚಾತುರ್ಮಾಸ್ಯ ಸೇವಾಸಮಿತಿ ಕಾರ್ಯಾಧ್ಯಕ್ಷರು ಮತ್ತು ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನದ ಉಪಾಧಿವಂತ ಮಂಡಳಿಯ ಪ್ರಮುಖರಾದ ಪರಮೇಶ್ವರ ಮಾರ್ಕಾಂಡೇಯ, ವೇದಮೂರ್ತಿ ಅಮೃತೇಶ ಹಿರೇ ಭಟ್ ಅಧ್ವರ್ಯದಲ್ಲಿ ಮಹಾಯಾಗ ಜರಗುತ್ತಿದೆ.

ಇದರೊಂದಿಗೆ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಆಷಾಢ ಹುಣ್ಣಿಮೆಯಂದು 29ನೇ ಚಾತುರ್ಮಾಸ್ಯವನ್ನು ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಗುರುಕುಲ ಚಾತುರ್ಮಾಸ್ಯವಾಗಿ ಆರಂಭಿಸಿದ್ದು, ಇದು ಭಾದ್ರಪದ ಹುಣ್ಣಿಮೆಯಂದು ಸೆಪ್ಟೆಂಬರ್ 10ಕ್ಕೆ ಸಂಪನ್ನಗೊಳ್ಳಲಿದೆ. ಗಂಗಾವಳಿ ನದಿಯನ್ನು ದಾಟಿ ಬಳಿಕ ಶ್ರೀ ಮಲ್ಲಿಕಾರ್ಜುನ ದೇವರ ದರ್ಶನ ಪಡೆದು ಸೀಮೋಲ್ಲಂಘನೆ ಕೈಗೊಳ್ಳಲಿದ್ದಾರೆ. ಈ ಸೀಮೋಲ್ಲಂಘನದೊಂದಿಗೆ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತ ಸಂಪನ್ನಗೊಳ್ಳಲಿದೆ ಅಂತ ಗೋಕರ್ಣ ಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದ್ದಾರೆ.