2025-26ನೇ ಸಾಲಿನ ದಾಖಲಾತಿ ಬಳಿಕ ಶುಲ್ಕ ವಿವರ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಡೊನೇಷನ್ ಪಡೆದರೆ ಶುಲ್ಕದ 10 ಪಟ್ಟು ದಂಡ ಹಾಗೂ ದಾಖಲಾತಿ ವೇಳೆ ಪೋಷಕರು ಅಥವಾ ಮಕ್ಕಳಿಗೆ ಪರೀಕ್ಷೆ ನಡೆಸಿದರೆ 25 ಸಾವಿರ ರು. ದಂಡ ವಿಧಿಸುವುದಾಗಿ ಎಚ್ಚರಿಸಿದೆ.

 ಬೆಂಗಳೂರು (ಜು.7): ಖಾಸಗಿ ಶಾಲೆಗಳು 2025-26ನೇ ಸಾಲಿಗೆ ಮಕ್ಕಳ ದಾಖಲಾತಿ ಮತ್ತು ಶುಲ್ಕ ವಸೂಲಿ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಆ ಶಾಲೆಗಳು ತಾವು ನಿಗದಿಪಡಿಸಿರುವ ಶುಲ್ಕದ ವಿವರಗಳನ್ನು ಶಾಲಾ ವೆಬ್‌ಸೈಟ್‌ ಹಾಗೂ ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕೆಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಡೊನೇಷನ್ ಪಡೆದರೆ ಹತ್ತು ಪಟ್ಟು ದಂಡ!

ಅಲ್ಲದೆ, ದಾಖಲಾತಿ ಸಮಯದಲ್ಲಿ ಡೊನೇಷನ್‌ ಅಥವಾ ಕ್ಯಾಪಿಟೇಷನ್‌ ಶುಲ್ಕ ಪಡೆದಿರುವುದು ಸಾಬೀತಾದರೆ ಆ ಶುಲ್ಕದ 10 ಪಟ್ಟಿನವರೆಗೆ ದಂಡ ವಿಧಿಸಲು ಸೂಚಿಸಿದೆ. ಅದೇ ರೀತಿ ದಾಖಲಾತಿಗೂ ಮುನ್ನ ಯಾವುದೇ ಮಗು, ಪೋಷಕರನ್ನು ಪರೀಕ್ಷೆಗೆ ಒಳಪಡಿಸಿರುವುದು ಕಂಡು ಬಂದರೆ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ 25 ಸಾವಿರ ರು. ದಂಡ ವಿಧಿಸಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ವಿಕಾಸ್‌ ಕಿಶೋರ್‌ ಸುರಳ್ಕರ್‌ ಸುತ್ತೋಲೆ ಹೊರಡಿಸಿದ್ದಾರೆ.

ಶಾಲೆಗೆ ದಾಖಲಾಗುವ ಮಗು ಅಥವಾ ಪೋಷಕರ ಟೆಸ್ಟ್ ಮಾಡಿದ್ರೆ ಭಾರೀ ದಂಡ!

ಇಲಾಖಾ ಕಾಯ್ದೆ ಹಾಗೂ ನಿಯಮಗಳ ಪ್ರಕಾರ, ಖಾಸಗಿ ಶಾಲೆಗಳು ವಿದ್ಯಾರ್ಥಿಗಳು, ಪೋಷಕರಿಂದ ಯಾವುದೇ ರೀತಿಯ ಡೊನೇಷನ್‌ ಅಥವಾ ಕ್ಯಾಪಿಟೇಷನ್‌ ಶುಲ್ಕ ಪಡೆಯುವುದು ಕಾನೂನು ಬಾಹಿರ. ಅದೇ ರೀತಿ ಯಾವುದೇ ಮಗುವನ್ನು ದಾಖಲಾತಿ ಮಾಡುವಾಗ ಮಕ್ಕಳ ಬುದ್ಧಿವಂತಿಕೆ ಅಥವಾ ಅವರ ಪೋಷಕರ ವಿದ್ಯಾರ್ಹತೆ, ಇತರೆ ವಿಚಾರಗಳ ಪರಿಶೀಲನೆ ಮಾಡುವುದು, ಪರೀಕ್ಷೆಗೆ ಒಳಪಡಿಸುವಂತಹ ಕೆಲಸ ಮಾಡುವಂತಿಲ್ಲ. ದಾಖಲಾತಿ ವೇಳೆ ಮಕ್ಕಳು ಮತ್ತು ಪೋಷಕರಿಗೆ ಯಾವುದೇ ರೀತಿ ಪರೀಕ್ಷೆ ನಡೆಸುವಂತಿಲ್ಲ. ನಿಯಮ ಮೀರಿದರೆ ಮೊದಲ ಬಾರಿಗೆ ತಪ್ಪಿಗೆ 25 ಸಾವಿರ ರು. ದಂಡ, ನಂತರ ಪ್ರತಿ ಪುನರಾವರ್ತಿತ ತಪ್ಪಿಗೆ ತಲಾ 50 ಸಾವಿರ ರು.ನಂತೆ ದಂಡ ವಸೂಲಿ ಮಾಡಲು ಆಯುಕ್ತರು ಸೂಚಿಸಿದ್ದಾರೆ.