ಬೆಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ 75 ಎಕರೆ ಗುಳುಂ..!
ಜಿಲ್ಲಾಡಳಿತಕ್ಕೆ ವಿವಿಯಿಂದಲೇ ವರದಿ ಸಲ್ಲಿಕೆ, ಪಂತರಪಾಳ್ಯ,ನಾಯಂಡಹಳ್ಳಿ, ಕೆಂಚೇನಹಳ್ಳಿ, ಮಲ್ಲತ್ತಹಳ್ಳಿ, ನಾಗರಬಾವಿ ಸುತ್ತ ಅತಿಕ್ರಮಣ, ಜಾಗ ವಶಕ್ಕೆ ಪಡೆಯಲು ಸಮಿತಿಗಳ ರಚನೆ ಆಗಿದ್ದಾಗ್ಯೂ ಒತ್ತುವರಿದಾರರಿಗೆ ಪ್ರಭಾವಿಗಳ ಬೆಂಬಲ, ಫಲ ನೀಡದ ವಿವಿ ಸಿಂಡಿಕೇಟ್ ಯತ್ನ.
ಲಿಂಗರಾಜು ಕೋರಾ
ಬೆಂಗಳೂರು(ಮಾ.03): ಬೆಂಗಳೂರು ವಿಶ್ವವಿದ್ಯಾಲಯದ ಸಾವಿರಾರು ಎಕರೆ ವಿಸ್ತೀರ್ಣದ ವಿಶಾಲ ಕ್ಯಾಂಪಸ್ ಜಾಗದ ಪೈಕಿ ಬರೋಬ್ಬರಿ 75 ಎಕರೆಯಷ್ಟು ಜಾಗ ಭೂಗಳ್ಳರ, ಒತ್ತುವರಿದಾರರ ಪಾಲಾಗಿದೆ. ಇದು ವಿಶ್ವವಿದ್ಯಾಲಯವೇ ಸರ್ಕಾರಕ್ಕೆ ಸಲ್ಲಿಸಿರುವ ಅಧಿಕೃತ ಮಾಹಿತಿ.
ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ಗೆ ಸರ್ಕಾರ ನೀಡಿದ್ದ 1200 ಎಕರೆ ಭೂಮಿಯಲ್ಲಿ 75 ಎಕರೆ ಜಾಗವನ್ನು ವಿವಿಧ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿ ಕೊಂಡಿದ್ದಾರೆ ಎಂದು ವಿಶ್ವವಿದ್ಯಾಲಯವೇ ಬೆಂಗಳೂರು ನಗರ ಜಿಲ್ಲಾಡಳಿತಕ್ಕೆ ಇತ್ತೀಚೆಗಷ್ಟೆ ವರದಿ ಸಲ್ಲಿಸಿದೆ. ಕರ್ನಾಟಕ ಭೂ ಕಬಳಿಕೆ ತಡೆ ವಿಶೇಷ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇತ್ತೀಚೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಅವರು ನಡೆಸಿದ ವಿಶೇಷ ಸಭೆಯ ವೇಳೆ ವಿವಿಯ ಅಭಿವೃದ್ಧಿ ಅಧಿಕಾರಿಗಳು ಕ್ಯಾಂಪಸ್ ಜಾಗ ಒತ್ತುವರಿ ಸಂಬಂಧ ವಿವರವಾದ ವರದಿ ನೀಡಿದ್ದಾರೆ.
ಸೋಲಾರ್ ಯೋಜನೆ ನೆಪದಲ್ಲಿ ಹಣ ಕಬಳಿಸಲು ಬೆಂಗಳೂರು ವಿವಿ ಹುನ್ನಾರ?
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡಾವಳಿಯ ಪ್ರತಿಯು ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದ್ದು, ಕ್ಯಾಂಪಸ್‌ಗೆ ಹೊಂದಿಕೊಂಡಂತಿರುವ ಪಂತರಪಾಳ್ಯ, ನಾಯಂಡಹಳ್ಳಿ, ಕೆಂಚೇನಹಳ್ಳಿ, ಮಲ್ಲತ್ತಹಳ್ಳಿ ಮತ್ತು ನಾಗರಬಾವಿ ಗ್ರಾಮಗಳ ಭಾಗಗಳಲ್ಲಿ ಅತಿ ಹೆಚ್ಚು ಅತಿಕ್ರಮಣವಾಗಿದೆ. ಅತಿ ಹೆಚ್ಚು 35.20 ಎಕರೆಯಷ್ಟು ಒತ್ತುವರಿ ಸರ್ವೆ ನಂಬರ್ 23ರಲ್ಲಿ ಜನತಾ ಸೈಟ್ಸ್ ಮತ್ತು ವೆಲ್‌ಫೇರ್ ಹೌಸ್ ಬ್ಯುಲ್ಡಿಂಗ್ ಸೊಸೈಟಿಯಿಂದ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಉಳಿದಂತೆ ಮಲ್ಲತ್ತಹಳ್ಳಿಯಲ್ಲಿ 2.10 ಎಕರೆ ಪಂಚಜ್ಞಾನ ವಿದ್ಯಾಪೀಠ, 1.14 ಎಕರೆ, 3.29 ಎಕರೆ ಮತ್ತು 3 ಎಕರೆಯ ಪ್ರತ್ಯೇಕ ಜಾಗಗಳು ವಿವಿಧ ಖಾಸಗಿ ವ್ಯಕ್ತಿಗಳಿಂದ, ವಿದ್ಯಾಗಿರಿ ಲೇಔಟ್‌ನಲ್ಲಿ 2 ಎಕರೆ ಒತ್ತುವರಿ, ಇದರಲ್ಲಿ ಒಂದು ಎಕರೆ ದೇವಸ್ಥಾನ ನಿರ್ಮಾನಕ್ಕಾಗಿ, ಗವಿಪುರ ಲೇಔಟ್ ಹೌಸಿಂಗ್ ಬಿಲ್ಡಿಂಗ್ ಸೊಸೈಟಿಯಿಂದ 19.12 ಎಕರೆ, ಉಪಾಧ್ಯಾಯ ಲೇಔಟ್ ಮತ್ತು ರಸ್ತೆಗಾಗಿ 1ಎಕರೆ ಜಾಗ ಒತ್ತುವರಿಯಾಗಿರುವುದಾಗಿ ವರದಿಯಲ್ಲಿ ಮಾಹಿತಿ ನೀಡಲಾಗಿದೆ.
ಬೆಂಗಳೂರು ವಿವಿಯ ಜಾಗ ಒತ್ತುವರಿ ಪ್ರಕರಣ ಹೊಸದಲ್ಲ. ಹತ್ತಾರು ವರ್ಷಗಳಿಂದ ಒತ್ತುವರಿ ಆರೋಪ, ಹಲವು ವರದಿಗಳು ಬಂದಿವೆ. ವಿವಿಯ ಸಿಂಡಿಕೇಟ್ ಸಭೆಯಲ್ಲಿ ಒತ್ತುವರಿ ಜಾಗ ವಶಕ್ಕೆ ಪಡೆಯಲು ಆಗ್ರಹ, ಸಮಿತಿಗಳ ರಚನೆ ಹೀಗೆ ಸಾಕಷ್ಟುಪ್ರಯತ್ನಗಳಾಗಿದ್ದರೂ ಒತ್ತುವರಿದಾರರು ಹೊಂದಿರುವ ಪ್ರಭಾವ, ಸ್ಥಳೀಯ ರಾಜಕಾರಣಿಗಳ ಕೃಪಾ ಕಟಾಕ್ಷದಿಂದ ತೆರವು ಎನ್ನುವುದು ಆಗ್ರಹಕ್ಕೇ ಸೀಮಿತವಾಗಿ ಉಳಿದಿದೆ.
ಬೆಂಗಳೂರು ಯುಜಿಸಿ ಕಚೇರಿ ಸದ್ದಿಲ್ಲದೆ ದಿಲ್ಲಿಗೆ: ಪ್ರಮುಖ ಉನ್ನತ ಶಿಕ್ಷಣ ಕಚೇರಿ ನಷ್ಟ
ಶೀಘ್ರ ಮತ್ತೊಂದು ಹೊಸ ಸರ್ವೆ!
ಈ ಮಧ್ಯೆ, ಭೂ ಕಬಳಿಕ ನಿಷೇಧ ವಿಶೇಷ ನ್ಯಾಯಾಲಯಕ್ಕೆ ವಿಶ್ವವಿದ್ಯಾಲಯ ಖುದ್ದು ಪ್ರತ್ಯೇಕ ವರದಿ ಸಲ್ಲಿಸಬೇಕಿರುವ ಹಿನ್ನೆಲೆಯಲ್ಲಿ ಇದಕ್ಕೂ ಮುನ್ನ ಮತ್ತೊಮ್ಮೆ ಕ್ಯಾಂಪಸ್ ಜಾಗ ಒತ್ತುವರಿ ಸರ್ವೆ ನಡೆಸಲಿದೆ. ಜಿಲ್ಲಾಡಳಿತದ ಸಹಕಾರದೊಂದಿಗೆ ಶೀಘ್ರದಲ್ಲೇ ಸರ್ವೆ ಕಾರ್ಯ ನಡೆಯಲಿದ್ದು ಈಗಾಗಲೇ ಕಂಡು ಬಂದಿರುವ 75 ಎಕರೆ ಒತ್ತುವರಿ ಜತೆಗೆ ಇನ್ನೂ ಯಾವುದೇ ಜಾಗ ಒತ್ತುವರಿಯಾಗಿರುವುದು ಕಂಡುಬಂದಲ್ಲಿ ಅದನ್ನೂ ಸೇರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ವಿವಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೊಸ ಸಮೀಕ್ಷೆ ಮುಗಿದ ಬಳಿಕ ವಿಶ್ವವಿದ್ಯಾನಿಲಯವು ಅತಿಕ್ರಮಣದಾರರ ವಿವರ ಹಾಗೂ ಅಗತ್ಯ ದಾಖಲೆಗಳೊಂದಿಗೆ ವಿಸ್ತೃತ ವರದಿಯನ್ನು ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸುತ್ತದೆ. ಬೆಂಗಳೂರು ದಕ್ಷಿಣ ಮತ್ತು ಉತ್ತರ ತಾಲೂಕಿನ ಭೂದಾಖಲೆಗಳ ಉಪನಿರ್ದೇಶಕರು ಹಾಗೂ ತಹಶೀಲ್ದಾರರ ಜಂಟಿ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.