9 ಹೊಸ ವಿಶ್ವವಿದ್ಯಾಲಯಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ
ನಮ್ಮ ದೇಶದ ಭವಿಷ್ಯ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಅಡಗಿದೆ. ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳು, ಯುವಜನರ ಭವಿಷ್ಯವನ್ನು ಉತ್ತಮವಾಗಿ ರೂಪಿಸಿದರೆ ದೇಶದ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು (ಮಾ.29) ನಮ್ಮ ದೇಶದ ಭವಿಷ್ಯ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಅಡಗಿದೆ. ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳು, ಯುವಜನರ ಭವಿಷ್ಯವನ್ನು ಉತ್ತಮವಾಗಿ ರೂಪಿಸಿದರೆ ದೇಶದ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavarj bommai) ಹೇಳಿದರು.
ಉನ್ನತ ಶಿಕ್ಷಣ ಇಲಾಖೆಯು ಮಂಗಳವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಗೊಂದು ವಿಶ್ವವಿದ್ಯಾಲಯ ಮಾದರಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿರುವ ಒಂಬತ್ತು ಹೊಸ ವಿಶ್ವವಿದ್ಯಾಲಯಗಳನ್ನು ವರ್ಚುವಲ್ಲಾಗಿ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಕೃತಿ ವಿವಿಯಲ್ಲಿ ಕಾಶ್ಮೀರದ ಮುಸ್ಲಿಂ ವಿದ್ಯಾರ್ಥಿಗಳ ನಮಾಜ್: ವಿಡಿಯೋ ವೈರಲ್
ದೇಶದಲ್ಲೇ ಪ್ರಥಮ:
ನಮ್ಮ ಸರ್ಕಾರ ಎಲ್ಲ ವರ್ಷಗಳ ಬಜೆಟ್‌ನಲ್ಲೂ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದೆ. ಶಿಕ್ಷಣ ಬೆಳವಣಿಗೆ ಆಗಬೇಕು. ಜಿಲ್ಲೆಗೊಂದು ವಿವಿ ಮಾದರಿಯ ವಿಶ್ವವಿದ್ಯಾಲಯಗಳು ದೇಶದಲ್ಲಿಯೇ ಪ್ರಥಮವಾಗಿ ನಮ್ಮ ರಾಜ್ಯದಲ್ಲಿ ಪ್ರಾರಂಭವಾಗಿವೆ. ಈ ವಿಚಾರದಲ್ಲಿ ಕರ್ನಾಟಕ ಮಾದರಿ ರಾಜ್ಯವಾಗಲಿದೆ. ಅಲ್ಲದೆ, ದೇಶದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಶಿಕ್ಷಣ ಅಂದರೆ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಎನ್ನುವ ಮಾತಿದೆ.
ಐಐಟಿ ಮಾದರಿ 7 ಕೆಐಟಿ:
ಐಐಟಿಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗದ ನಮ್ಮ ರಾಜ್ಯದ ಮಕ್ಕಳಿಗೆ ಅಷ್ಟೇ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಬೆಂಗಳೂರಿನ ಎಸ್‌ಕೆಎಸ್‌ಜೆಐಟಿ ಕಾಲೇಜು ಸೇರಿದಂತೆ ವಿವಿಧ ಜಿಲ್ಲೆಗಳ ಏಳು ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಕರ್ನಾಟಕ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ(ಕೆಐಟಿ)ಗಳಾಗಿ ಮೇಲ್ಜರ್ಜೆಗೇರಿಸಲಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಈ ಕಾಲೇಜುಗಳು ಐಐಟಿ ಮಾದರಿಯಲ್ಲಿ ಬೆಳೆಯಲಿವೆ. ಈ ನಿಟ್ಟಿನಲ್ಲಿ ಈಗಾಗಲೇ ಜಗತ್ತಿನ ಉನ್ನತ ವಿವಿಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದರು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ಸರ್ಕಾರ 25 ವಿವಿಗಳನ್ನು ಸ್ಥಾಪಿಸಿದೆ ಎಂದರು.
ಜತೆಗೆ ಡಿಜಿಟಲೀಕರಣದ ಮೂಲಕ ಆಮೂಲಾಗ್ರ ಬದಲಾವಣೆ ತಂದಿದೆ. ಇದರ ಫಲವಾಗಿ 310 ಸರ್ಕಾರಿ ಪದವಿ ಕಾಲೇಜುಗಳು ಇದೇ ಮೊದಲ ಬಾರಿಗೆ ನ್ಯಾಕ್ ಮಾನ್ಯತೆ ಪಡೆದಿವೆ ಎಂದರು. ಕಾರ್ಯಕ್ರಮದಲ್ಲಿ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಉಪಸ್ಥಿತರಿದ್ದರು.
ಉದ್ಘಾಟನೆಗೊಂಡ 9 ಹೊಸ ವಿವಿಗಳು
‘ಜಿಲ್ಲೆಗೊಂದು ವಿಶ್ವವಿದ್ಯಾಲಯ’ ಮಾದರಿಯಡಿ ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಮಂಡ್ಯ, ಕೊಡಗು, ಕೊಪ್ಪಳ, ಬಾಗಲಕೋಟೆ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಶೂನ್ಯ ಬಜೆಟ್‌ನಲ್ಲಿ ಆರಂಭಿಸಿರುವ ಹೊಸ ವಿಶ್ವವಿದ್ಯಾಲಯಗಳನ್ನು ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಉದ್ಘಾಟಿಸಿದರು.
ಕೊಪ್ಪಳ ವಿಶ್ವವಿದ್ಯಾಲಯದ ನೂತನ ಕುಲಪತಿ ಪ್ರೊ.ಬಿ.ಕೆ.ರವಿಯಿಂದ ಹೊಸ ಕಾರ್ಯ ಯೋಜನೆ
ಇದರೊಂದಿಗೆ ಇತ್ತೀಚೆಗಷ್ಟೆಹೊಸ ಕುಲಪತಿಗಳನ್ನೂ ನೇಮಿಸಿರುವ ಈ ವಿಶ್ವವಿದ್ಯಾಲಯಗಳ ಕಾರ್ಯಚಟುವಟಿಕೆ ಅಧಿಕೃತವಾಗಿ ಚಾಲನೆಯಾದಂತಾಗಿದೆ. ಇದೇ ವೇಳೆ ಧಾರವಾಡದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ನೂತನ ಕ್ಯಾಂಪಸ್ ಮತ್ತು ನಗರದ ಎಸ್‌ಕೆಎಸ್‌ಜೆಐಟಿ ಕಾಲೇಜನ್ನು ಕೆಐಟಿಯಾಗಿ ಉನ್ನತೀಕರಿಸಲು ಶಂಕುಸ್ಥಾಪನೆ ನೆರವೇರಿಸುವ ಮೂಲಕ ರಾಜ್ಯದ 7 ಜಿಲ್ಲೆಗಳ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಕೆಐಟಿಗಳಾಗಿ ಮೇಲ್ಜರ್ಜೆಗೇರಿಸುವ 75 ಕೋಟಿ ರು.ಗಳ ಯೋಜನೆಗೆ ಚಾಲನೆ ನೀಡಿದರು.