ಬೆಂಗಳೂರು, (ಅ.30): ಮಧ್ಯಂತರ ರಜೆ ಮಧ್ಯೆಯೂ ಶಾಲಾ ಶಿಕ್ಷಕರು ಅ.31ರಂದು ವಾಲ್ಮೀಕಿ ಜಯಂತಿ ಮತ್ತು ನ.1ರಂದು ಕನ್ನಡ ರಾಜ್ಯೋತ್ಸವ ಆಚರಣೆ ಮಾಡಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ರಜೆಯ ಮಧ್ಯೆಯೂ ಕೊರೋನಾ ಮುನ್ನೆಚ್ಚರಿಕೆ ಕ್ರಮ ಅನುಸರಿಸುವ ಮೂಲಕ ವಾಲ್ಮೀಕಿ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವ ಆಚರಿಸಬೇಕು. ಈ ವೇಳೆ ಸುರಕ್ಷತಾ ಕ್ರಮ ಅನುಸರಿಸಬೇಕು. ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ಹಾಜರಿರಬೇಕು ಎಂದು ಸುತ್ತೋಲೆ ಹೊರಡಿಸಿದೆ. 

ಬಿಗ್ ನ್ಯೂಸ್: ಕರ್ನಾಟಕದಲ್ಲಿ ಶಾಲೆ ಪ್ರಾರಂಭಿಸಲು ಸಕಲ ಸಿದ್ಧತೆ

ಈ ಬಾರಿಯ ವಾಲ್ಮೀಕಿ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯಾವುದೇ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ನೀಡಬಾರದು. ಇಲ್ಲಿಯವರೆಗೂ ವಿದ್ಯಾಗಮ ಯೋಜನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಸಾಧನೆ ಮತ್ತು ಕೊರತೆಯನ್ನು ಪಟ್ಟಿ ಮಾಡಲು ಹಾಗೂ ಸದರಿ ವಿಶ್ಲೇಷಣೆ ಅನುಸಾರ ಕಲಿಕೆಗೆ ಅವಶ್ಯಕ ಬೋಧನಾ ಕಲಿಕಾ ಯೋಜನೆ, ಕಲಿಕಾ ಸಾಮಗ್ರಿ ತಯಾರಿಕೆ ಮುಂತಾದ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಶಿಕ್ಷಣ ಇಲಾಖೆ ತಿಳಿಸಿದೆ.

ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಸರ್ಕಾರ ಶಿಕ್ಷಕರಿಗೆ ತಾತ್ಕಾಲಿಕ ರಜೆ ನೀಡಿದೆ. ಈ ನಡುವೆ ಎಂದಿನಂತೆ ವಾಲ್ಮೀಕಿ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವವನ್ನು ಶಾಲೆಯಲ್ಲಿ ಆಚರಿಸುವಂತೆ ಶಿಕ್ಷಕರಿಗೆ ಇಲಾಖೆ ಸೂಚಿಸಿದೆ.