ಬೆಂಗಳೂರು(ಜ.09): ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯುವ ಬಜೆಟ್‌ ಪೂರ್ವಭಾವಿ ಸಿದ್ಧತಾ ಸಭೆಯ ವೇಳೆ ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಿಗೆ 10 ಸಾವಿರ ಶಾಲಾ ಶಿಕ್ಷಕರ ನೇಮಕವೂ ಸೇರಿದಂತೆ ಐದು ಪ್ರಮುಖ ಪ್ರಸ್ತಾವನೆಗಳನ್ನು ಮಂಡಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಶುಕ್ರವಾರ ನಗರದಲ್ಲಿ ತಮ್ಮ ಇಲಾಖಾ ಅಧಿಕಾರಿಗಳೊಂದಿಗೆ ನಡೆಸಿದ ಇಲಾಖೆಯ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಐದು ಪ್ರಸ್ತಾವನೆಗಳನ್ನು ಸರ್ಕಾರದ ಮುಂದೆ ಮಂಡಿಸಲು ಅನುಮತಿ ನೀಡಿದ್ದಾರೆ ಎಂದು ಇಲಾಖಾ ಮೂಲಗಳು ಖಚಿತಪಡಿಸಿವೆ.

ಕ್ರಿಶ್ಚಿಯನ್‌ರ ಮನೇಲಿ ಶ್ರೀರಾಮುಲು ಇಷ್ಟಲಿಂಗ ಪೂಜೆ!

ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಿಗೆ 8 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು 2 ಸಾವಿರ ಪ್ರೌಢ ಶಾಲಾ ಶಿಕ್ಷಕರು ಸೇರಿ ಒಟ್ಟು 10 ಸಾವಿರ ಶಿಕ್ಷಕರ ನೇಮಕಾತಿ, ಒಂದು ಸಾವಿರ ಶಾಲೆಗಳನ್ನು ಉಭಯ ಮಾಧ್ಯಮ ಶಾಲೆಗಳಾಗಿ ಬದಲಾಯಿಸುವುದು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳಲು ರಾಜ್ಯ ಶಾಲಾ ಶಿಕ್ಷಣ ಆಯೋಗವೆಂಬ ಸ್ವಾಯತ್ತ ಸಂಸ್ಥೆ ಸ್ಥಾಪನೆ, 1995ರಿಂದ 2000ದವರೆಗೆ ಪ್ರಾರಂಭಗೊಂಡ ಕನ್ನಡ ಮಾಧ್ಯಮದ ಅನುದಾನರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದು ಹಾಗೂ ರಾಜ್ಯದ 25 ಗ್ರಾಮ ಪಂಚಾಯತಿಗಳು ಮತ್ತು ಬಿಬಿಎಂಪಿ ವ್ಯಾಪ್ತಿಯ 25 ವಾರ್ಡುಗಳಲ್ಲಿ ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ 5ರಿಂದ 12ನೇ ತರಗತಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪಂಚಾಯಿತಿ/ವಾರ್ಡ್‌ ಪಬ್ಲಿಕ್‌ ಶಾಲೆಗಳನ್ನು ಆರಂಭಿಸಲು ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ.

ಈ ಪ್ರಸ್ತಾವನೆಗಳಿಗೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಒಪ್ಪಿಗೆ ನೀಡಿದರೆ ಮುಂದಿನ ಬಜೆಟ್‌ನಲ್ಲಿ ಈ ಪ್ರಸ್ತಾವನೆಗಳು ಸೇರ್ಪಡೆಯಾಗಿ ಸೂಕ್ತ ಅನುದಾನವೂ ದೊರೆಯಲಿದೆ.