ದುಬೈ ಕನ್ನಡ ಪಾಠಶಾಲೆಗೆ ದಶಮಾನೋತ್ಸವ ಸಂಭ್ರಮ
ದೂರದ ಅರಬ್ಬರ ನಾಡಿನಲ್ಲಿ ಕನ್ನಡ ಕಟ್ಟುವ ಕನ್ನಡ ಮಿತ್ರರ ಪ್ರಯತ್ನವನ್ನು ಅಭಿನಂದಿಸಿದರು. ಅಲ್ಲದೆ, ಕನ್ನಡ ಪಾಠಶಾಲೆಯ ಎಲ್ಲ ಪ್ರಯತ್ನಗಳಿಗೆ ತಮ್ಮ ಮಾಧ್ಯಮ ಸಂಸ್ಥೆಯ ಬೆಂಬಲ ಸೂಚಿಸಿದ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದ ಮುಖ್ಯ ಸಂಪಾದಕ ರವಿ ಹೆಗಡೆ
ದುಬೈ(ಮೇ.16): ಕನ್ನಡ ಮಿತ್ರರು ಯುಎಇ ಸಂಘಟನೆಯ ನೇತೃತ್ವದ, ವಿಶ್ವದ ಅತಿದೊಡ್ಡ ಕನ್ನಡ ಕಲಿಕಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ‘ಕನ್ನಡ ಪಾಠಶಾಲೆ ದುಬೈ’ನ 10ನೇ ವರ್ಷದ ಶೈಕ್ಷಣಿಕ ಸಮಾರೋಪ ಮತ್ತು ದಶಮಾನೋತ್ಸವ ಕಾರ್ಯಕ್ರಮ ಇತ್ತೀಚೆಗೆ ದುಬೈನ ಇಂಡಿಯನ್ ಅಕಾಡೆಮಿಯಲ್ಲಿ ಅದ್ಧೂರಿಯಾಗಿ ನಡೆಯಿತು.
ಭವ್ಯ ವೇದಿಕೆಯ ಮೇಲೆ ಸಂಪನ್ನಗೊಂಡ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದ ಮುಖ್ಯ ಸಂಪಾದಕರಾದ ರವಿ ಹೆಗಡೆ, ಕನ್ನಡ ಮಿತ್ರರು ಯುಎಇ ಸ್ಥಾಪಕ ಅಧ್ಯಕ್ಷ ಶಶಿಧರ್ ನಾಗರಾಜಪ್ಪ, ಉಪಾಧ್ಯಕ್ಷ ಬಿ.ಆರ್.ಸಿದ್ದಲಿಂಗೇಶ್, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹಾಗೂ ಉಪಾಧ್ಯಕ್ಷ ಮೋಹನ್ ನರಸಿಂಹಮೂರ್ತಿ, ಕರ್ನಾಟಕ ಪ್ರಜಾಶಕ್ತಿ ಸಮಿತಿಯ ರಾಜ್ಯಾಧ್ಯಕ್ಷ ಡಾ। ಜೆ.ಪಿ.ವಿಶ್ವನಾಥ್, ಭೀಮ ಜ್ಯುವೆಲ್ಲರ್ಸ್ ಮುಖ್ಯಸ್ಥ ಯು.ನಾಗರಾಜ ರಾವ್, ಕರ್ನಾಟಕ ಸಂಘ ದುಬೈನ ಮಹಾ ಪೋಷಕರಾದ ಡಾ। ಬಿ.ಕೆ.ಯುಸುಫ಼್, ಆಕ್ಮೆ ಸಂಸ್ಥೆಯ ಮುಖ್ಯಸ್ಥ ಹರೀಶ್ ಶೇರಿಗಾರ್, ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಗಳ ದುಬೈ ಮುಖ್ಯಸ್ಥ ಗೋವಿಂದ ನಾಯ್ಕ ಪಾಲ್ಗೊಂಡಿದ್ದರು.
ಅರಬರ ನಾಡಿನಲ್ಲಿ ಕನ್ನಡ ಡಿಂಡಿಮ ಮೊಳಗಿಸಿದ ಕನ್ನಡಿಗರು!
ರವಿ ಹೆಗಡೆ ಮಾತನಾಡಿ, ದೂರದ ಅರಬ್ಬರ ನಾಡಿನಲ್ಲಿ ಕನ್ನಡ ಕಟ್ಟುವ ಕನ್ನಡ ಮಿತ್ರರ ಪ್ರಯತ್ನವನ್ನು ಅಭಿನಂದಿಸಿದರು. ಅಲ್ಲದೆ, ಕನ್ನಡ ಪಾಠಶಾಲೆಯ ಎಲ್ಲ ಪ್ರಯತ್ನಗಳಿಗೆ ತಮ್ಮ ಮಾಧ್ಯಮ ಸಂಸ್ಥೆಯ ಬೆಂಬಲ ಸೂಚಿಸಿದರು. ಅತಿಥಿಗಳಾದ ಗೋವಿಂದ ನಾಯ್ಕ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿನ ಮಾತೃಭಾಷೆ ಕುರಿತಾದ ತಾತ್ಸಾರದ ಬಗ್ಗೆ ಬೆಳಕು ಚೆಲ್ಲಿದರು. ಅಲ್ಲದೆ, ಮಕ್ಕಳಿಗೆ ಮಾತೃ ಭಾಷೆಯ ಮಹತ್ವದ ಬಗ್ಗೆ ಹೆಚ್ಚು ತಿಳಿಸಿಕೊಡುವಂತೆ ಕರೆ ನೀಡಿದರು. ಡಾ। ಜಿ.ಪಿ.ವಿಶ್ವನಾಥ್ ಅವರ ಕನ್ನಡ ಕಾಳಜಿಯ ಭಾಷಣ ಎಲ್ಲರನ್ನೂ ಹುರುದುಂಬಿಸಿದರೆ, ಹರೀಶ್ ಶೆರಿಗಾರ್ ಅವರು ಅರ್ಥಪೂರ್ಣವಾಗಿ ಶುಭಾಶಯ ಸಲ್ಲಿಸಿ ತಮ್ಮ ಸಹಕಾರ ಘೋಷಿಸಿದರು.
ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಪ್ರಾಸ್ತಾವಿಕ ಭಾಷಣದಲ್ಲಿ ಕನ್ನಡ ಪಾಠ ಶಾಲೆ ದುಬೈಗೆ ಮಾನ್ಯತೆ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಭಿನಂದನೆ ಸಲ್ಲಿಸಿ ಸಚಿವ ಶಿವರಾಜ್ ತಂಗಡಿಗಿಯವರ ಕನ್ನಡ ಕಾಳಜಿ ಮತ್ತು ಪ್ರಾಧಿಕಾರದ ಕಾರ್ಯದರ್ಶಿ ಸಂತೋಶ್ ಹಾನಗಲ್ಲ ಅವರ ಸಹಕಾರಕ್ಕಾಗಿ ಧನ್ಯವಾದ ಅರ್ಪಿಸಿದರು. ಮುಂದಿನ ದಿನಗಳಲ್ಲಿ ಗಲ್ಫ್ ಪ್ರಾಂತ್ಯದಲ್ಲಿ ಕನ್ನಡ ಕಲಿಕೆ ಮಾಡಿದ ಮಕ್ಕಳಿಗೆ ‘ಕನ್ನಡ ಸಾಹಿತ್ಯ ಪರಿಷತ್ತಿನ’ ಪ್ರವೇಶ, ಕಾವ, ಜಾಣ, ರತ್ನ ಎಂಬ ೪ ಹಂತದ ಪರೀಕ್ಷೆಗೆ ಅನುವಾಗುವಂತೆ ದುಬೈನಲ್ಲಿ ಪರೀಕ್ಷಾ ಕೇಂದ್ರವನ್ನು ತೆರೆಯುವ ಬಗ್ಗೆ ಡಾ। ಮಹೇಶ್ ಜೋಷಿ ಯವರೊಂದಿಗೆ ಪ್ರಗತಿಯಲ್ಲಿರುವ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಕರ್ನಾಟಕ ಅನಿವಾಸಿ ಭರತೀಯ ಸಮಿತಿಯ ಉಪಾಧ್ಯಕ್ಷೆ ಡಾ। ಆರತಿ ಕೃಷ್ಣ ಅವರು ತಮ್ಮ ಸಂದೇಶವನ್ನು ತಲುಪಿಸಿದರು.
ಮಕ್ಕಳಿಗೆ ಪ್ರಮಾಣ ಪತ್ರ:
ದಶಮಾನೋತ್ಸವ ಈ ಕಾರ್ಯಕ್ರಮದ ವಿಶೇಷ ಅಹ್ವಾನಿತರಾಗಿ ಆಗಮಿಸಿದ್ದ ಗಣ್ಯರು ಮತ್ತು ಸಂಘ ಸಂಸ್ಥೆಗಳ ಪ್ರಮುಖರು ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿದರು.