Asianet Suvarna News Asianet Suvarna News

ಮತ್ತೆ ಹೆಚ್ಚಾದ ವೈರಸ್‌ ಕಾಟ: ಇಂದಿನಿಂದ ಶಾಲೆ ಆರಂಭಿಸುವ ನಿರ್ಧಾರ ವಾಪಸ್‌

* ಸಿಎಂ ಖಡಕ್‌ ಎಚ್ಚರಿಕೆಗೆ ಖಾಸಗಿ ಶಾಲೆಗಳು ತಬ್ಬಿಬ್ಬು
* ನಾವು ಹೇಳೋವರೆಗೂ ಆರಂಭಿಸಬೇಡಿ ಎಂದ ಬೊಮ್ಮಾಯಿ
* ಸರ್ಕಾರ ಹೇಳುವವರೆಗೂ ಶಾಲೆಗಳನ್ನು ಆರಂಭಿಸಲ್ಲ: ರುಪ್ಸಾ

Do Not Start Offline Classes in Karnataka Says CM Basavaraj Bommai grg
Author
Bengaluru, First Published Aug 2, 2021, 7:27 AM IST

ಬೆಂಗಳೂರು(ಆ.02): ಸರ್ಕಾರ ಜುಲೈ ಅಂತ್ಯದೊಳಗೆ ಶಾಲೆ ಆರಂಭಕ್ಕೆ ಅನುಮತಿ ನೀಡದಿದ್ದರೆ ಆಗಸ್ಟ್‌ 2ರಿಂದ ಸ್ವಯಂ ಪ್ರೇರಿತವಾಗಿ ಶಾಲೆ ಆರಂಭಿಸುವುದಾಗಿ ಹೇಳಿದ್ದ ಕೆಲ ಖಾಸಗಿ ಶಾಲಾ ಸಂಘಟನೆಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಖಡಕ್‌ ಎಚ್ಚರಿಕೆ ಹಿನ್ನೆಲೆಯಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿವೆ.

ಆದಷ್ಟು ಬೇಗ ಶಾಲೆ ಆರಂಭಿಸುವಂತೆ ಮನವಿ ಮಾಡಲು ಹೋಗಿದ್ದ ಖಾಸಗಿ ಸಂಘಟನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋವಿಡ್‌ ಸೋಂಕು ಪ್ರಮಾಣ ಹೆಚ್ಚಾಗದೆ ತಹಬದಿಗೆ ಬಂದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ. ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಭೌತಿಕ ತರಗತಿಗಳನ್ನು ಯಾವುದೇ ಶಾಲೆಗಳು ಆರಂಭಿಸಕೂಡದು ಎಂದು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಇದರಿಂದ ತಬ್ಬಿಬ್ಬಾದ ಖಾಸಗಿ ಶಾಲಾ ಸಂಘಟನೆಗಳು ಸುದ್ದಿಗೋಷ್ಠಿ ನಡೆಸಿ ಆ.2ರಿಂದ ಶಾಲೆ ಆರಂಭಿಸುವಂತಹ ನಿರ್ಧಾರವನ್ನು ಕೈಬಿಟ್ಟಿದ್ದೇವೆ ಎಂದು ಹೇಳಿವೆ.

ಕೋವಿಡ್‌ ಏರಿಕೆ: ಶಾಲೆಗಳು, ಪಿಯು ಕಾಲೇಜು ವಿಳಂಬ?

ಈ ಸಂಬಂಧ ಭಾನುವಾರ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘದ (ರುಪ್ಸಾ) ಅಧ್ಯಕ್ಷ ಹಾಲನೂರು ಲೇಪಾಕ್ಷಿ ಮತ್ತು ರುಪ್ಸಾ -ಕರ್ನಾಟಕ ರಾಜ್ಯಾಧ್ಯಕ್ಷ ಲೋಕೇಶ್‌ ತಾಳಿಕಟ್ಟೆಅವರು, ಮುಂದಿನ ದಿನಗಳಲ್ಲಿ ಸಭೆ ನಡೆಸಿ ಶಾಲಾರಂಭದ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿರುವುದರಿಂದ ಹಾಗೂ ಕೋವಿಡ್‌ ಸೋಂಕು ಕೆಲವು ದಿನಗಳಿಂದ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆ.2ರಿಂದ ಭೌತಿಕ ತರಗತಿಗಳನ್ನು ಆರಂಭಿಸುವ ಬಗ್ಗೆ ನಾವು ನೀಡಿದ್ದ ಹೇಳಿಕೆಯನ್ನು ವಾಪಸ್‌ ಪಡೆಯುತ್ತಿದ್ದೇವೆ. ಸರ್ಕಾರದ ನಿರ್ಧಾರದಂತೆ ನಡೆದುಕೊಳ್ಳಲಾಗುವುದು ಎಂದು ಹೇಳಿದರು.

ಸರ್ಕಾರ ಹೇಳುವವರೆಗೂ ಶಾಲೆಗಳನ್ನು ಆರಂಭಿಸಲ್ಲ

ಶಾಲೆ ಆರಂಭದ ವಿಚಾರ ಹಾಗೂ ಖಾಸಗಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಸಭೆ ನಡೆಸಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಸರ್ಕಾರ ಸೂಚಿಸುವವರೆಗೂ ಭೌತಿಕ ತರಗತಿಗಳನ್ನು ಆರಂಭಿಸದಂತೆ ಸೂಚಿಸಿದ್ದಾರೆ. ಅದರಂತೆ ನಡೆದುಕೊಳ್ಳುತ್ತೇವೆ. ಸರ್ಕಾರ ಶೀಘ್ರ ಶಾಲಾರಂಭದ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ರುಪ್ಸಾ ಕರ್ನಾಟಕ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ತಿಳಿಸಿದ್ದಾರೆ. 
 

Follow Us:
Download App:
  • android
  • ios