Asianet Suvarna News Asianet Suvarna News

Karwar: ಕಡುಬಡತನದಲ್ಲಿ ಅರಳಿದ ಪ್ರತಿಭೆ: ಅಂಗವಿಕಲ ಯುವತಿಯ ಶಿಕ್ಷಣಕ್ಕೆ ಬೇಕಿದೆ ಸಹಾಯ ಹಸ್ತ

*  ಪಿಯುಸಿಯಲ್ಲಿ ಶೇ. 71ರಷ್ಟು ಅಂಕ ಗಳಿಸಿದ್ರೂ ಆರ್ಥಿಕ ಸಮಸ್ಯೆಯಿಂದಾಗಿ ಶಿಕ್ಷಣಕ್ಕೆ ಕೊಕ್ 
*  ಶಿಕ್ಷಣ ಪಡೆಯಲು ಸಹಾಯ ಮಾಡಿ ಎಂದು ಕಣ್ಞೀರಿಡುತ್ತಿದೆ ಯುವತಿಯ ಕುಟುಂಬ 
*  ಯಾರೋ ಮಾಡಿದ ತಪ್ಪಿನಿಂದಾಗಿ ಅಂಗವಿಕಲೆಯಾಗಿರುವ ಯುವತಿ 
 

Disabled Girl Need Help For Education in Karwar grg
Author
Bengaluru, First Published May 21, 2022, 9:05 AM IST

ವರದಿ: ಭರತ್‌ ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ(ಮೇ.21): ಆಕೆ ಎಲ್ಲರಂತೆ ಆಡಿ ಬೆಳೆಯಬೇಕಾಗಿದ್ದ ಯುವತಿ. ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿ ಮಾಡಿರೋ ತಪ್ಪಿನಿಂದಾಗಿ ಆಕೆ ಸಣ್ಣ ಪ್ರಾಯದಲ್ಲೇ ಅಂಗವಿಕಲೆಯಾಗಿಬಿಟ್ಟಳು. ಎರಡು ವರ್ಷಗಳ ಹಿಂದೆ ಈ ಯುವತಿ ತಂದೆಯ ಆಸರೆಯನ್ನು ಕೂಡಾ ಕಳೆದುಕೊಂಡ್ರೆ, ಇದೀಗ ತಾಯಿ ಕೂಡಾ ಅನಾರೋಗ್ಯ ಪೀಡಿತರಾಗಿದ್ದಾರೆ. ಪಿಯುಸಿಯಲ್ಲಿ ಶೇ. 71ರಷ್ಟು ಅಂಕ ಗಳಿಸಿಕೊಂಡು ವಿಜ್ಞಾನ ಕ್ಷೇತ್ರದಲ್ಲೇ ಕಲಿಯಬೇಕೆಂದು ಆಸೆ ಹೊತ್ತಿರುವ ಈ ಯುವತಿಗೆ ಅಡ್ಡಿಯಾಗಿರೋದು ಆರ್ಥಿಕ ಸಮಸ್ಯೆ‌. ತನ್ನ ಹಾಗೂ ತನ್ನ ಕುಟುಂಬದ ಭವಿಷ್ಯಕ್ಕಾಗಿ ಶಿಕ್ಷಣ ಪಡೆಯಬೇಕೆಂಬ ಮಹದಾಸೆಯನ್ನು ಹೊತ್ತಿರುವ ಈ ಯುವತಿ ಸಹಾಯಕ್ಕಾಗಿ ಕೈಚಾಚಿದ್ದಾಳೆ. ಈ ಕುರಿತ ಒಂದು ವರದಿ ಇಲ್ಲಿದೆ... 

ವೈದ್ಯ ಸಿಬ್ಬಂದಿಯ ಎಡವಟ್ಟಿನಿಂದ ಅಂಗವಿಕಲೆಯಾದ ಯುವತಿ 

ಈ ರೀತಿ ಕುಂಟುತ್ತಾ, ಅಕ್ಕನ ಹೆಗಲ ಆಸರೆ ಪಡೆಯುತ್ತಾ ನಡೆಯುತ್ತಿರುವ ಯುವತಿಯ ಹೆಸರು ರಮ್ಯಾ. ನಾಗಪ್ಪ ನಾಯ್ಕ್ ಹಾಗೂ ಕಮಲಾ ದಂಪತಿಯ ಮೂವರು ಮಕ್ಕಳ ಪೈಕಿ ಎರಡನೇಯವಳು. ತನ್ನ ಮೂರು ವರ್ಷ ಪ್ರಾಯದವರೆಗೆ ಎಲ್ಲರಂತೇ ಇದ್ದ ರಮ್ಯಾ, ಒಂದು ದಿನ ಆಟವಾಡೋವಾಗ ಬಿದ್ದು ಕೈಗೆ ಗಂಭೀರ ಗಾಯ ಮಾಡಿಕೊಂಡಿದ್ದಳು. ಕೂಡಲೇ ಭಟ್ಕಳದ ಸರಕಾರಿ ಆಸ್ಪತ್ರೆಗೆ ಪೋಷಕರು ಕರೆದುಕೊಂಡು ಹೋಗಿದ್ದಾರಾದ್ರೂ, ವೈದ್ಯರ ಬದಲು ನರ್ಸ್ ಕೊಟ್ಟ‌ ಇಂಜೆಕ್ಷನ್‌ನಿಂದಾಗಿ ದೇಹದ ಬಲ ಭಾಗದ ಕಾಲಿನ ಬಲವನ್ನೇ ಕಳೆದುಕೊಂಡು ಬಿಟ್ಟಿದ್ದಳು. ಮೊದಲೇ ಬಡವರಾಗಿದ್ದರಿಂದ ಆಸ್ಪತ್ರೆಯವರು ಕೇವಲ 60,000ರೂ. ಪರಿಹಾರವನ್ನು ಈ ಕುಟುಂಬಕ್ಕೆ ನೀಡಿ ಕೈ ತೊಳೆದುಕೊಂಡು ಬಿಟ್ಟಿದ್ದರು.‌

Karnataka SSLC Results 2022 ಅಡ್ಡಿಯಾಗದ ಅಂಗವೈಕಲ್ಯ , 3,762 ವಿದ್ಯಾರ್ಥಿಗಳ ಸಾಧನೆ!

ಆದರೆ, ಇಂಜೆಕ್ಷನ್ ಇಫೆಕ್ಟ್‌ನಿಂದಾಗಿ ಪದೇ ಪದೇ ಎದುರಾದ ಸಮಸ್ಯೆಯ ಚಿಕಿತ್ಸೆಗಾಗಿ ಈ ಕುಟುಂಬ ಉಡುಪಿ, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಿ ರಮ್ಯಾ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಗಿತ್ತು. ಇಷ್ಟಾದರೂ ಈ ಯುವತಿ ಮಾತ್ರ ಅಂಗವಿಕಲೆಯಾಗಿಯೇ ಉಳಿದುಬಿಟ್ಟಳು. ಹೆಚ್ಚು ದೂರಕ್ಕೆ ನಡೆಯಲಾಗದ್ದರಿಂದ ಶಾಲೆ, ಕಾಲೇಜಿಗೆ ಯಾವುದಾದರೂ ವಾಹನದಲ್ಲೇ ಹೋಗಬೇಕಾದ ಪರಿಸ್ಥಿತಿಯಿತ್ತು. ಇಂದಿಗೂ ಇತರರ ಸಹಾಯವಿಲ್ಲದೇ ಈ ಯುವತಿಗೆ ಹೆಚ್ಚು ದೂರ ನಡೆದಾಡಲು ಸಾಧ್ಯವಿಲ್ಲ. ಪರಿಸ್ಥಿತಿ ಹೀಗಿದ್ದರೂ ಕಲಿಕೆಯಲ್ಲಿ ಈಕೆ ತುಂಬಾ ಬ್ರಿಲಿಯಂಟ್. ಹತ್ತನೇ ತರಗತಿಯಲ್ಲಿ ಶೇ.84.32%  ಅಂಕ ಗಳಿಸಿದ್ದು, ಕನ್ನಡ ವಿಷಯದಲ್ಲಂತೂ 125ಕ್ಕೆ 125 ಪಡೆದು ಸನ್ಮಾನ ಕೂಡಾ ಗಳಿಸಿದ್ದಳು.

ಪಿಯುಸಿಯಲ್ಲಿ ಸೈನ್ಸ್ ಪಡೆದು ಶೇ. 71.5% ಅಂಕ ಗಳಿಸಿದ್ದಲ್ಲದೇ, ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಂಡು ಸಂಗೀತ, ಅಂಗವಿಕಲರ ವಿಭಾಗದಲ್ಲಿ ಶಾಟ್‌ಪುಟ್, ಜಾವೆಲಿನ್ ಥ್ರೋ ಮಾಡಿ ಬಹುಮಾನ ಪಡೆದುಕೊಂಡಿದ್ದಾರೆ. ಈ ಯುವತಿಗೆ ಲ್ಯಾಬ್ ಟೆಕ್ನೀಶಿಯನ್ ಕೋರ್ಸ್ ಮಾಡಬೇಕೆಂದು ಬಹಳಷ್ಟು ಆಸೆಯಿದ್ದು, ಆರ್ಥಿಕ ಸಮಸ್ಯೆಯಿಂದಾಗಿ ಕಲಿಯಲಾಗದೆ ಒಂದು ವರ್ಷ ಮನೆಯಲ್ಲೇ ಕುಳಿತಿದ್ದಾಳೆ. ಈ ಬಾರಿಯಾದರೂ ಕಲಿಯಲು ಅವಕಾಶ ದೊರೆಯಬಹುದೇ ? ಎಂಬ ಆಸೆಯಿಂದ ದಾನಿಗಳ‌‌ ಸಹಾಯದ  ಸಹಾಯ ನಿರೀಕ್ಷೆಯಲ್ಲಿರುವ ಯುವತಿ ರಮ್ಯಾ ನಾಗಪ್ಪ ನಾಯ್ಕ್. 

ಅಂದಹಾಗೆ, ಈಕೆಯ ತಂದೆ ನಾಗಪ್ಪ ನಾಯ್ಕ್ ಕೂಲಿ ಕೆಲಸ ಮಾಡ್ತಿದ್ದರಾದ್ರೂ, ಕುಡಿತದ ಚಟದಿಂದ ಆರೋಗ್ಯ ಹಾಳು ಮಾಡಿಕೊಂಡಿದ್ದರು. ಬಳಿಕ ಎರಡೂ ಕಿಡ್ನಿ ಫೈಲ್ಯೂರ್ ಆದ ಕಾರಣ ಉಡುಪಿ, ಮಂಗಳೂರಿನಲ್ಲಿ ಚಿಕಿತ್ಸೆ ಪಡೆದಿದ್ದರೂ ಕೊನೆಗೆ ಆರ್ಥಿಕ ಸಮಸ್ಯೆಯಿಂದ ಚಿಕಿತ್ಸೆ ಪಡೆಯಲಾಗದೆ ಎರಡು ವರ್ಷಗಳ ಹಿಂದೆ ಕೊನೆಯುಸಿರೆಳೆದಿದ್ದರು. ಮಕ್ಕಳ ಶಿಕ್ಷಣ ಹಾಗೂ ಹೊಟ್ಟೆ ಪಾಡಿಗಾಗಿ ಗೇರು ಬೀಜದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಈಕೆಯ ತಾಯಿ ಕಮಲಾ ಅವರು ಕೂಡಾ ಅನಾರೋಗ್ಯ ಹೊಂದಿದ್ದು, ಗರ್ಭಕೋಶದಲ್ಲಿ ಕಾಣಿಸಿಕೊಂಡ ಸಮಸ್ಯೆಯಿಂದಾಗಿ ಇದೀಗ ಈ ಕೆಲಸವನ್ನು ಕೂಡಾ ಬಿಟ್ಟು ಜೀವನ‌‌ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

SSLC Results: ಕನ್ನಡಪ್ರಭ ಪತ್ರಿಕೆ ಹಂಚುವ ಹುಡುಗ ಟಾಪರ್‌..!

ಗರ್ಭಕೋಶವನ್ನು ತೆಗೆಯಿಸಲು ಸರಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಈ‌ ಮನೆಯಲ್ಲಿ ಒಂದೊತ್ತಿನ ಊಟಕ್ಕೂ ಸಮಸ್ಯೆಯಾಗಿದ್ದು, ಎಲ್ಲದಕ್ಕೂ ಪಕ್ಕದ ಮನೆಯವರು ಹಾಗೂ ದಾನಿಗಳ ಸಹಾಯ ಪಡೆಯಬೇಕಿದೆ. ರೇಶನ್ ಅಕ್ಕಿಯಿಂದ ಮಾಡಲಾಗುವ ಗಂಜಿಯಿಂದಲೇ ಇವರ ದಿನ ಸಾಗುತ್ತಿದ್ದು, ಇದು ಬಿಟ್ಟರೆ ಈ ಕುಟುಂಬಕ್ಕೆ ಆಹಾರಕ್ಕೂ ಗತಿಯಿಲ್ಲ. ಇವರಿರುವ ಹಳೇ ಬಾಡಿಗೆ ಮನೆಯಂತೂ ಮಳೆಗಾಲದಲ್ಲಿ ಸೋರುತ್ತಿದ್ದು, ಮನೆಯ ಸೂರು ಯಾವಾಗ ಬೀಳಬಹುದೋ ಅನ್ನೋ ಭೀತಿಯಿಂದ ರಾತ್ರಿ ಪಕ್ಕದ ಮನೆಯವರ ಮನೆಗೆ ತೆರಳಿ ಮಲಗುತ್ತಾರೆ. ಈಕೆಯ ಅಕ್ಕ ಯಶೋಧಾ ಯಾನೆ ದಿವ್ಯ ಮಂಕಿಯ ಕಾಲೇಜಿನಲ್ಲಿ ಬಿಎ ಕಲಿಯುತ್ತಿದ್ದು, ತಮ್ಮ ಚೇತನ್ ಈಗಷ್ಟೇ ಪಿಯುಸಿ ಮುಗಿಸಿ ಮನೆಯಲ್ಲಿದ್ದಾನೆ. ಈ ಕುಟುಂಬ ಬಹಳಷ್ಟು ಸಂಕಷ್ಟದಲ್ಲಿದ್ದು, ತಮಗಾಗಿ ಅಲ್ಲ, ತನ್ನ ಮಗಳ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡಿ ಎಂದು ಕೋರಿಕೆ ಸಲ್ಲಿಸಿದ್ದಾರೆ ರಮ್ಯಾಳ ತಾಯಿ ಕಮಲಾ. 

ಒಟ್ಟಿನಲ್ಲಿ ಯಾರೋ ಮಾಡಿದ ತಪ್ಪಿನಿಂದಾಗಿ ಅಂಗವಿಕಲೆಯಾಗಿರುವ ಈ ಯುವತಿಗೆ ಶಿಕ್ಷಣ ಪಡೆಯಬೇಕೆಂಬುದು ಮಹದಾಸೆ. ಈ ಕಾರಣದಿಂದ ಹೃದಯವಂತರು ಸಹಾಯ ಮಾಡಿದಲ್ಲಿ ಈ ಯುವತಿ ತನ್ನ ಕನಸು ಪೂರೈಸಿಕೊಳ್ಳಬಹುದಲ್ಲದೇ, ಈ ಬಡ ಕುಟುಂಬಕ್ಕೆ ಆಸರೆಯೂ ದೊರೆತಂತಾಗುತ್ತದೆ.‌ ಈ ಯುವತಿಯ ಶಿಕ್ಷಣಕ್ಕೆ ಸಹಾಯ ಮಾಡುವವರು ಈ‌ ಮೂಲಕ ಸಹಾಯ ಮಾಡಬಹುದು. 

Kamala Nagappa Naik 
A/c: 64610100013138
IFSC: BARBOVJSHUT
MICR: 581012354
Branch: Shirali
Mobile: 9380419866, 6360064604 
 

Follow Us:
Download App:
  • android
  • ios