ಕೋವಿಡ್‌ನಿಂದಾಗಿ ದೇಶಾದ್ಯಂತ ಸಾವಿರಾರು ಮಕ್ಕಳು ಅನಾಥರಾಗಿದ್ದಾರೆ. ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡ ಮಕ್ಕಳ ಮುಂದಿನ ಭವಿಷ್ಯದ ಚಿಂತೆ ಎಲ್ಲರನ್ನ ಕಾಡುತ್ತಿದೆ. ಈ ನಿಟ್ಟಿನಲ್ಲಿ ಮೊದಲೇ ಧ್ವನಿಯೆತ್ತಿದ್ದ ಬಾಲಿವುಡ್ ನಟ ಸೋನು ಸೂದ್, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅಂಥ ಮಕ್ಕಳ ಕೈಹಿಡಿಯುವಂತೆ ಮನವಿ ಮಾಡಿಕೊಂಡಿದ್ರು.

ಕೋವಿಡ್ ಸೋಂಕಿನಿಂದಾಗಿ ಹಲವು ಕುಟುಂಬಗಳು ಬಾಧಿತವಾಗಿವೆ. ಮಕ್ಕಳು ತಂದೆ-ತಾಯಿ ಅಥವಾ ಪೋಷಕರನ್ನ ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ. ತಮ್ಮನ್ನ ಆರೈಕೆ ಮಾಡುವವರೇ ಮೃತಪಟ್ಟಿದ್ದರಿಂದ ಆ ಮಕ್ಕಳು ಒಬ್ಬಂಟಿಗಳಾಗಿದ್ದಾರೆ. ಸಂಕಷ್ಟದಲ್ಲಿರುವ ಅಂಥ ಮಕ್ಕಳ ಬಗ್ಗೆ ಸರ್ಕಾರಗಳೇ ಕಾಳಜಿ ವಹಿಸಬೇಕು ಎಂದು ಕಳೆದ ವಾರವಷ್ಟೇ ಸೋನು ಸೂದ್ ಅಭಿಪ್ರಾಯ ವ್ಯಕ್ತಪಡಿಸಿದ್ರು.

ವಾಕ್ ಇನ್ ಆಕ್ಸಿಜನ್ ಕೆಫೆ ಸ್ಥಾಪಿಸಿದ ದಿಲ್ಲಿಯ ಖಾಸಗಿ ಶಾಲೆ

ಇದರ ಬೆನ್ನಲ್ಲೇ ಇದೀಗ ಒಂದೊಂದೇ ರಾಜ್ಯಗಳು ನೊಂದ ಮಕ್ಕಳ ಕಣ್ಣೀರೊರೆಸಲು ಮುಂದೆ ಬರ್ತಿವೆ. ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರ ಕೂಡ ಈಗ ಅದೇ ಹಾದಿಯಲ್ಲಿ ಹೆಜ್ಜೆಯನ್ನಿಟ್ಟಿದೆ.

ಕೋವಿಡ್ ನಿಂದಾಗಿ ಅಪ್ಪ-ಅಮ್ಮನನ್ನ ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಸಿಎಂ ಅರವಿಂದ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

ಹೆತ್ತವರನ್ನು ಕಳೆದುಕೊಂಡ ಅನೇಕ ಮಕ್ಕಳನ್ನೂ ನಾನು ಬಲ್ಲೆ. ಅವರಿಗೆ ನಾನು ಇನ್ನೂ ಇದ್ದೇನೆ ಎಂದು ಹೇಳಲು ಬಯಸುತ್ತೇನೆ. ನಿಮ್ಮನ್ನು ಅನಾಥರೆಂದು ಪರಿಗಣಿಸಬೇಡಿ. ಪೋಷಕರನ್ನ ಕಳೆದುಕೊಂಡ ಮಕ್ಕಳ ಅಧ್ಯಯನ ಮತ್ತು ಪಾಲನೆಯ ಬಗ್ಗೆ ಸರ್ಕಾರ ಕಾಳಜಿ ವಹಿಸುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಲಾಕ್‌ಡೌನ್‌ನಂತಹ ಕಠಿಣ ನಿರ್ಧಾರದ ಪರಿಣಾಮವಾಗಿ ಸದ್ಯ ದೆಹಲಿಯಲ್ಲಿ ಕೊರೊನಾ ಪ್ರಕರಣಗಳು ನಿಧಾನವಾಗಿ ಇಳಿಕೆಯಾಗುತ್ತಿವೆ. ದೆಹಲಿಯಲ್ಲಿ ಏಪ್ರಿಲ್ 20 ರಂದು 28,000 ಪ್ರಕರಣಗಳು ದಾಖಲಾಗಿತ್ತು. ಇದೀಗ ಕಳೆದ 24 ಗಂಟೆಗಳಲ್ಲಿ ಸುಮಾರು 20,500 ಪ್ರಕರಣಗಳು ದಾಖಲಾಗಿವೆ. ಸಕಾರಾತ್ಮಕ ಪ್ರಮಾಣವು ಶೇಕಡಾ 22 ಕ್ಕೆ ಇಳಿದಿದೆ. ಕೊರೊನಾ ವೈರಸ್ ವಿರುದ್ಧದ ಹೋರಾಟವು ಕೊನೆಗೊಳ್ಳುವುದಿಲ್ಲ ಅಂತ ಸುದ್ದಿಗೋಷ್ಠಿಯಲ್ಲಿ ಕೇಜ್ರಿವಾಲ್ ತಿಳಿಸಿದ್ದಾರೆ.

ಲಸಿಕೆ ಹಾಕಿಸಿಕೊಂಡಿದ್ದೀರಾ? CoWinನಿಂದ ವಾಕ್ಸಿನೇಷನ್ ಸರ್ಟಿಫಿಕೇಟ್ ಡೌನ್‌ಲೋಡ್ ಹೇಗೆ?

ಇದೇ ವೇಳೆ ಕೋವಿಡ್‌ನಿಂದ ತಬ್ಬಲಿಗಳಾಗಿರೋ ಮಕ್ಕಳಿ ಉಚಿತ ಶಿಕ್ಷಣ ಘೋಷಣೆ ಮಾಡಿದ ಕೇಜ್ರಿವಾಲ್, ಬಳಿಕ ಟ್ವೀಟ್ ಮಾಡೋ ಮೂಲಕ ಮತ್ತೊಮ್ಮೆ ಸ್ಪಷ್ಟಪಡಿಸಿದೆ.  ದೆಹಲಿ ರಾಜ್ಯ ಸರ್ಕಾರ, ಕೋವಿಡ್‌ನಿಂದ ಪೋಷಕರನ್ನ ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತದೆ ಎಂಬ ಘೋಷಣೆಯನ್ನ ಸಾರ್ವಜನಿಕರಿಗೆ ತಿಳಿಸಿದ್ದಾರೆ.

ಅಂದಹಾಗೇ ಕೇವಲ ದೆಹಲಿ ಸರ್ಕಾರವೊಂದೇ ಅಲ್ಲ, ಮಧ್ಯಪ್ರದೇಶ, ಛತ್ತೀಸ್‌ಗಢ ರಾಜ್ಯಗಳು ಈಗಾಗಲೇ ಅನಾಥ ಮಕ್ಕಳಿಗೆ ಸಹಾಯ ಹಸ್ತ ಚಾಚೋದಾಗಿ ಘೋಷಿಸಿವೆ. ಮಧ್ಯಪ್ರದೇಶ ರಾಜ್ಯದಲ್ಲಿ ಕೋವಿಡ್‌ನಿಂದ ಮೃತಪಟ್ಟ ಪೋಷಕರ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಮಾಸಿಕ ೫ ಸಾವಿರ ಪಿಂಚಣಿ ನೀಡೋದಾಗಿ ಅಲ್ಲಿನ ಸರ್ಕಾರ ಘೋಷಣೆ ಮಾಡಿದೆ. ಕುಟುಂಬದ ಆಧಾರಸ್ತಂಭಗಳನ್ನ ಕಳೆದುಕೊಂಡವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಬಡ್ಡಿರಹಿತ ಸಾಲ ನೀಡುವುದು. ಜೊತೆಗೆ ಪೋಷಕರನ್ನ ಕಳೆದುಕೊಂಡ ಮಕ್ಕಳ ಕುಟುಂಬಕ್ಕೆ ಉಚಿತ ಪಡಿತರ ನೀಡೋದಾಗಿಯೂ ಸಿಎಂ ಶಿವರಾಜ್ಸಿಂಗ್ ಚೌಹಾಣ್ ಘೋಷಿಸಿದ್ದಾರೆ.

ಕೋವಿಡ್ ಎರಡನೇ ಅಲೆಯಿಂದ ದೇಶದಲ್ಲಿ ಈಗಾಗಲೇ ಸಾಕಷ್ಟು ಜನರು ತಮ್ಮ ಪ್ರಾಣಗಳನ್ನು ಕಳದುಕೊಂಡಿದ್ದಾರೆ. ಪೋಷಕರನ್ನು ಕಳೆದುಕೊಂಡ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ದಿಲ್ಲಿ ಸರ್ಕಾರ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ಅಂಥ ಮಕ್ಕಳ ದೇಖರೇಖಿಗೆ ಮುಂದಾಗಿರುವುದು ಸ್ವಾಗತಾರ್ಹವಾಗಿದೆ.

ಗೂಗಲ್ ಮ್ಯಾಪ್ಸ್‌ನಲ್ಲೇ ಲಭ್ಯ ಬೆಡ್, ಆಮ್ಲಜನಕ ಲೊಕೇಷನ್ ಮಾಹಿತಿ!

ಇನ್ನು ಚತ್ತೀಸ್‌ಗಡ ಸರ್ಕಾರ ಕೂಡ ಕೊರೊನಾದಿಂದ ಅನಾಥರಾಗಿರುವ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುವ ಜವಾಬ್ದಾರಿ ಹೊತ್ತುಕೊಂಡಿದೆ. ೧ ರಿಂದ ೮ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಮಾಸಿಕ ೫೦೦ ಹಾಗೂ ೯ ರಿಂದ ೧೨ನೇ ತರಗತಿವರೆಗಿನ ಮಕ್ಕಳಿಗೆ ೧ ಸಾವಿರ ರೂಪಾಯಿ ಮಾಸಿಕ ಪಿಂಚಣಿಯನ್ನ ನೀಡೋದಾಗಿ ಘೋಷಿಸಿದೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಓದುತ್ತಿರೋ ಮಕ್ಕಳಿಗೆ ಸೌಲಭ್ಯ ಸಿಗಲಿದೆ.