ರುಪ್ಸಾ, ಕ್ಯಾಮ್ಸ್ ಮೇಲೆ ಮಾನನಷ್ಟ ಕೇಸ್: ಶಿಕ್ಷಣಾಧಿಕಾರಿಗಳ ಎಚ್ಚರಿಕೆ
ಪ್ರಾಥಮಿಕ ಮತ್ತು ಪ್ರೌಢಶಾಲಾ ಮಾನ್ಯತೆ ನವೀಕರಣ ಸೇರಿ ಇತರೆ ವಿಚಾರದಲ್ಲಿ ಶಿಕ್ಷಣ ಇಲಾಖೆ ಮೇಲೆ ರುಪ್ಸಾ ಹಾಗೂ ಕ್ಯಾಮ್ಸ್ ಮಾಡಿರುವ ಭ್ರಷ್ಟಾಚಾರ ಆರೋಪವನ್ನು ಕರ್ನಾಟಕ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘ ತಳ್ಳಿಹಾಕಿದ್ದು, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದೆ.
ಬೆಂಗಳೂರು (ಸೆ.04): ಪ್ರಾಥಮಿಕ ಮತ್ತು ಪ್ರೌಢಶಾಲಾ ಮಾನ್ಯತೆ ನವೀಕರಣ ಸೇರಿ ಇತರೆ ವಿಚಾರದಲ್ಲಿ ಶಿಕ್ಷಣ ಇಲಾಖೆ ಮೇಲೆ ರುಪ್ಸಾ ಹಾಗೂ ಕ್ಯಾಮ್ಸ್ ಮಾಡಿರುವ ಭ್ರಷ್ಟಾಚಾರ ಆರೋಪವನ್ನು ಕರ್ನಾಟಕ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘ ತಳ್ಳಿಹಾಕಿದ್ದು, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದೆ. ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ. ಪ್ರಧಾನಿಯವರಿಗೆ ಬರೆದಿರುವ ಪತ್ರದ ಆರೋಪಗಳೆಲ್ಲ ರಾಜಕೀಯ ದುರುದ್ದೇಶದಿಂದ ಕೂಡಿವೆ. ಅವ್ಯವಹಾರದ ಬಗ್ಗೆ ಕ್ರಮ ವಹಿಸಲು ಇಲಾಖಾ ಆಂತರಿಕ ವ್ಯವಸ್ಥೆ ಇದೆ.
ರುಪ್ಸಾ ಆರೋಪದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಇಲಾಖೆ ಅನುಮತಿ ಕೋರಿದ್ದು, ಒಪ್ಪಿಗೆ ಸಿಕ್ಕಲ್ಲಿ ಕಾನೂನು ಹೋರಾಟ ನಡೆಸುತ್ತೇವೆ ಎಂದು ಸಂಘ ತಿಳಿಸಿದೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಎಸ್. ರಾಜಕುಮಾರ, ‘ಪ್ರಾಥಮಿಕ ಮತ್ತು ಪ್ರೌಢಶಾಲಾ ಮಾನ್ಯತೆ ನವೀಕರಣ ಕಳೆದ ಎರಡು ವರ್ಷಗಳಿಂದ ಆನ್‌ಲೈನ್ ಮೂಲಕ ನಡೆಯುತ್ತಿದೆ. ಶಾಲಾ ಆಡಳಿತ ಮಂಡಳಿ ಅಗತ್ಯ ದಾಖಲಾತಿ ಒದಗಿಸಿದರೆ ನವೀಕರಣ ಆಗುತ್ತದೆ. ಮಾನ್ಯತೆ ಪಡೆಯದ ಶಾಲೆಗಳ ವಿದ್ಯಾರ್ಥಿಗಳಿಗೂ ಪರೀಕ್ಷೆಗೆ ಅವಕಾಶ ನೀಡಲಾಗುತ್ತಿದೆ’ ಎಂದರು.
ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ: ರುಪ್ಸಾದಿಂದ ಸಾಕ್ಷ್ಯ ಸಲ್ಲಿಕೆ
‘ಆರ್‌ಟಿಇ ಶುಲ್ಕ ಮರುಪಾವತಿ ಕೂಡ ಜಾಲತಾಣದಿಂದ ನಿರ್ವಹಣೆ ಆಗುತ್ತಿದೆ. ಕಟ್ಟಡದ ಅಗ್ನಿ ಸುರಕ್ಷತೆ, ಮೂಲಭೂತ ಸೌಕರ್ಯ ವಿಚಾರದಲ್ಲಿ ಮಂಡಳಿಗಳ ಕೋರಿಕೆ ಮೇರೆಗೆ ಸಮರ್ಪಕವಾಗಿಸಿಕೊಳ್ಳಲು ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ಇವೆರಡು ವಿಚಾರದಲ್ಲಿ ಭ್ರಷ್ಟಾಚಾರದ ಪ್ರಶ್ನೆ ಉದ್ಭವಿಸಲ್ಲ. ಶಾಲೆಗಳಿಗೆ ಸಿಬಿಎಸ್‌ಇ ಪಠ್ಯಕ್ರಮ ಅನುಮತಿಗೆ ಲಂಚ, ಹೊಸ ಶಾಲೆಗಳ ನೋಂದಣಿ ಪರಿಶೀಲಿಸುವ ತ್ರಿಸದಸ್ಯ ಸಮಿತಿಯ ಅವ್ಯವಹಾರ, ಕಮೀಷನ್ ಆರೋಪ ಸುಳ್ಳು. ರುಪ್ಸಾ ಲೋಕೇಶ್, ಕಾಮ್ಸ್‌ನ ಶಶಿಕುಮಾರ ಅಧಿಕಾರಿಗಳನ್ನು ಗುರಿಯಾಗಿಸಿ ದೂರುವುದನ್ನು ಖಂಡಿಸುತ್ತೇವೆ’ ಎಂದರು. ಕರ್ನಾಟಕ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಕೆ.ಜಿ.ಆಂಜನಪ್ಪ, ಖಜಾಂಚಿ ಜಿ.ಸಿ. ಪಂಕಜಾ, ಉಪಾಧ್ಯಕ್ಷ ಗೋವಿಂದಪ್ಪ, ಮಾಧ್ಯಮ ಸಮಿತಿ ಅಧ್ಯಕ್ಷ ಪ್ರಶಾಂತ ಇದ್ದರು.
ಅಧಿಕಾರಿಗಳನ್ನು ಹೊಗಳಿದ ರುಪ್ಸಾ: ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರು, ನಿರ್ದೇಶಕರು ಉತ್ತಮ ರೀತಿಯಲ್ಲಿ ಕಾರ್ಯರ್ನಿಹಿಸುತ್ತಿದ್ದಾರೆ. ಕೆಳ ಹಂತದ ಕೆಲ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಈ ಬಗ್ಗೆ ದಾಖಲೆಗಳನ್ನು ನೀಡಿದ್ದು ನಮ್ಮ ಆರೋಪದ ಬಗ್ಗೆ ಅನ್ಯತಾ ಭಾವಿಸದೆ ಖಾಸಗಿ ಶಾಲಾ ಸಂಘಟನೆಗಳ ಸಭೆ ಕರೆದು ಇಲಾಖೆಯಲ್ಲಿನ ಲೋಪಗಳು ಹಾಗೂ ಖಾಸಗಿ ಶಾಲೆಗಳ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ರುಪ್ಸಾ ದೂರು ಏನು?: ಮತ್ತೊಂದು ಸಂಘಟನೆಯಾದ ರುಪ್ಸಾ ಕರ್ನಾಟಕದ ಅಧ್ಯಕ್ಷ ಲೋಕೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ‘ಶಾಲಾ ಮಾನ್ಯತೆ ನವೀಕರಣ, ಆರ್‌ಟಿಇ ಶುಲ್ಕ ಮರುಪಾವತಿ ಸೇರಿದಂತೆ ಇಲಾಖೆಯ ಪ್ರತಿಯೊಂದು ಕಾರ್ಯಗಳಿಗೂ ಅಧಿಕಾರಿಗಳು ಲಂಚ, ಶೇ.30ರಿಂದ 40ರಷ್ಟುಕಮಿಷನ್ ಕೇಳುತ್ತಿದ್ದಾರೆ. ಇದನ್ನು ಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹಾಗಾಗಿ ಸಚಿವರನ್ನೂ ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.
ಸಚಿವ ನಾಗೇಶ್ ಭ್ರಷ್ಟಾಚಾರಿಯಲ್ಲ: ರುಪ್ಸಾ ಉಲ್ಟಾ
‘ಪ್ರತೀ 10 ವರ್ಷಕ್ಕೊಮ್ಮೆ ಮಾನ್ಯತೆ ನವೀಕರಣ ಮಾಡಿ ಎಂದು ಹೈಕೋರ್ಚ್ ಹೇಳಿದ್ದರೂ ಇಲಾಖೆ ಪ್ರತಿ ವರ್ಷದ ಪ್ರಕ್ರಿಯೆಯಾಗಿಸಿದೆ. ಪ್ರತೀ ವರ್ಷ ಇದಕ್ಕಾಗಿ ಲಕ್ಷಾಂತರ ರು. ಕೇಳುತ್ತಾರೆ. ಲಂಚ ಕೊಡದಿದ್ದರೆ ಅನಗತ್ಯ ಕಾರಣನ್ನು ತೋರಿಸಿ ಮಾನ್ಯತೆ ನಿರಾಕರಿಸುತ್ತಾರೆ. ಸರ್ಕಾರದಿಂದ ನೀಡುವ ಆರ್‌ಟಿಇ ಮರುಪಾವತಿ ಶುಲ್ಕ ಬಿಡುಗಡೆಗೆ ಶೇ.40ಕ್ಕೂ ಹೆಚ್ಚು ಕಮಿನಷ್ ನೀಡಬೇಕು. ಡಿಡಿಪಿಐಗೆ ಶೇ.20, ಬಿಇಒಗಳಿಗೆ ಶೇ.25ರಷ್ಟು ಕಮಿಷನ್ ಕೊಡಬೇಕು ಎಂದು ದೂರಿದರು. ಕೆಲ ಬಿಇಒ, ಡಿಡಿಪಿಐಗಳು ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ನಮ್ಮ ಬಳಿಕ ಆಡಿಯೋ ಸಾಕ್ಷ್ಯಾಧಾರಗಳು ಇವೆ. ಇಲಾಖೆ ತನಿಖೆ ನಡೆಸುವುದಾದರೆ ಅದನ್ನು ನೀಡಲು ಸಿದ್ಧ’ ಎಂದು ಹೇಳಿದರು.