ಸಚಿವ ನಾಗೇಶ್ ಭ್ರಷ್ಟಾಚಾರಿಯಲ್ಲ: ರುಪ್ಸಾ ಉಲ್ಟಾ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಅವರ ವಿರುದ್ಧ ನೇರ ಭ್ರಷ್ಟಾಚಾರದ ಆರೋಪ ಮಾಡಿದ್ದ ಖಾಸಗಿ ಶಾಲಾ ಸಂಘಟನೆ ರುಪ್ಸಾ ಕರ್ನಾಟಕ ಪದಾಧಿಕಾರಿಗಳು ಈಗ ಉಲ್ಟಾಹೊಡೆದಿದ್ದು, ಸಚಿವರ ವಿರುದ್ಧ ನಾವು ಆರೋಪ ಮಾಡಿಲ್ಲ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ ಎಂದು ಲಿಖಿತ ಹೇಳಿಕೆ ನೀಡಿದ್ದಾರೆ.
ಬೆಂಗಳೂರು (ಸೆ.03): ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಅವರ ವಿರುದ್ಧ ನೇರ ಭ್ರಷ್ಟಾಚಾರದ ಆರೋಪ ಮಾಡಿದ್ದ ಖಾಸಗಿ ಶಾಲಾ ಸಂಘಟನೆ ರುಪ್ಸಾ ಕರ್ನಾಟಕ ಪದಾಧಿಕಾರಿಗಳು ಈಗ ಉಲ್ಟಾಹೊಡೆದಿದ್ದು, ಸಚಿವರ ವಿರುದ್ಧ ನಾವು ಆರೋಪ ಮಾಡಿಲ್ಲ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ ಎಂದು ಲಿಖಿತ ಹೇಳಿಕೆ ನೀಡಿದ್ದಾರೆ.
ಇಲಾಖೆ ಹಾಗೂ ಸಚಿವರ ವಿರುದ್ಧ ತಾವು ಮಾಡಿದ್ದ ಭ್ರಷ್ಟಾಚಾರದ ಆರೋಪಗಳ ಸಂಬಂಧ ಸಾಕ್ಷ್ಯಾಧಾರಗಳನ್ನು ನೀಡುವಂತೆ ಇಲಾಖೆಯ ಆಯುಕ್ತ ಆರ್. ವಿಶಾಲ್ ಅವರು ನೀಡಿದ ನಿರ್ದೇಶನದ ಹಿನ್ನೆಲೆಯಲ್ಲಿ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಮ್ಯಾನೇಜ್ಮೆಂಟ್ ಸಂಘ(ರುಪ್ಸಾ ಕರ್ನಾಟಕ) ಅಧ್ಯಕ್ಷ ಲೋಕೇಶ್ ತಾಳಿಕಟ್ಟಿಮತ್ತು ಇತರೆ ಪದಾಧಿಕಾರಿಗಳು ಸಮಜಾಯಿಷಿ ಪತ್ರ ನೀಡಿದ್ದಾರೆ. ಇದನ್ನು ಸ್ವತಃ ತಾಳಿಕಟ್ಟೆಅವರೂ ಖಚಿತಪಡಿಸಿದ್ದಾರೆ.
ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ: ರುಪ್ಸಾದಿಂದ ಸಾಕ್ಷ್ಯ ಸಲ್ಲಿಕೆ
ವೈಯಕ್ತಿಕವಾಗಿ ಶಿಕ್ಷಣ ಸಚಿವರ ಮೇಲೆ ನಮಗೆ ಅಪಾರ ಪ್ರೀತಿ, ಗೌರವ ಮತ್ತು ವಿಶ್ವಾಸವಿದೆ. ನಿಮ್ಮ ಮೇಲೆ ನಾವು ಭ್ರಷ್ಟಾಚಾರದ ಆರೋಪ ಮಾಡಿಲ್ಲ. ನಮ್ಮ ಆರೋಪವನ್ನು ವೈಯಕ್ತಿಕವಾಗಿ ತೆಗೆದುಕೊಂಡಿರುವುದು ನಮಗೆ ನೋವುಂಟು ಮಾಡಿದೆ. ನಾವು ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕಾರಣಿಯ ಹಿಡಿತದಲ್ಲಿಲ್ಲ. ರಾಜಕೀಯ ಉದ್ದೇಶವೂ ನಮಗಿಲ್ಲ. ನಿಮ್ಮನ್ನು ವೈಯಕ್ತಿಕವಾಗಿ ಘಾಸಿಗೊಳಿಸುವ ಉದ್ದೇಶ ನಮಗಿಲ್ಲ. ಇದು ನಮಗೆ ವಿಷಾದ ಉಂಟು ಮಾಡಿದೆ ಎಂದು ಹೇಳಿದ್ದಾರೆ.
ಅಧಿಕಾರಿಗಳನ್ನು ಹೊಗಳಿದ ರುಪ್ಸಾ: ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರು, ನಿರ್ದೇಶಕರು ಉತ್ತಮ ರೀತಿಯಲ್ಲಿ ಕಾರ್ಯರ್ನಿಹಿಸುತ್ತಿದ್ದಾರೆ. ಕೆಳ ಹಂತದ ಕೆಲ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಈ ಬಗ್ಗೆ ದಾಖಲೆಗಳನ್ನು ನೀಡಿದ್ದು ನಮ್ಮ ಆರೋಪದ ಬಗ್ಗೆ ಅನ್ಯತಾ ಭಾವಿಸದೆ ಖಾಸಗಿ ಶಾಲಾ ಸಂಘಟನೆಗಳ ಸಭೆ ಕರೆದು ಇಲಾಖೆಯಲ್ಲಿನ ಲೋಪಗಳು ಹಾಗೂ ಖಾಸಗಿ ಶಾಲೆಗಳ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ರುಪ್ಸಾ ದೂರು ಏನು?: ಮತ್ತೊಂದು ಸಂಘಟನೆಯಾದ ರುಪ್ಸಾ ಕರ್ನಾಟಕದ ಅಧ್ಯಕ್ಷ ಲೋಕೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ‘ಶಾಲಾ ಮಾನ್ಯತೆ ನವೀಕರಣ, ಆರ್‌ಟಿಇ ಶುಲ್ಕ ಮರುಪಾವತಿ ಸೇರಿದಂತೆ ಇಲಾಖೆಯ ಪ್ರತಿಯೊಂದು ಕಾರ್ಯಗಳಿಗೂ ಅಧಿಕಾರಿಗಳು ಲಂಚ, ಶೇ.30ರಿಂದ 40ರಷ್ಟುಕಮಿಷನ್ ಕೇಳುತ್ತಿದ್ದಾರೆ. ಇದನ್ನು ಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹಾಗಾಗಿ ಸಚಿವರನ್ನೂ ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.
ಖಾಸಗಿ ಶಾಲೆ ಸಂಘ ವಿರುದ್ಧ ಮಾನನಷ್ಟ ಕೇಸ್: ನಾಗೇಶ್ ಗರಂ
‘ಪ್ರತೀ 10 ವರ್ಷಕ್ಕೊಮ್ಮೆ ಮಾನ್ಯತೆ ನವೀಕರಣ ಮಾಡಿ ಎಂದು ಹೈಕೋರ್ಚ್ ಹೇಳಿದ್ದರೂ ಇಲಾಖೆ ಪ್ರತಿ ವರ್ಷದ ಪ್ರಕ್ರಿಯೆಯಾಗಿಸಿದೆ. ಪ್ರತೀ ವರ್ಷ ಇದಕ್ಕಾಗಿ ಲಕ್ಷಾಂತರ ರು. ಕೇಳುತ್ತಾರೆ. ಲಂಚ ಕೊಡದಿದ್ದರೆ ಅನಗತ್ಯ ಕಾರಣನ್ನು ತೋರಿಸಿ ಮಾನ್ಯತೆ ನಿರಾಕರಿಸುತ್ತಾರೆ. ಸರ್ಕಾರದಿಂದ ನೀಡುವ ಆರ್‌ಟಿಇ ಮರುಪಾವತಿ ಶುಲ್ಕ ಬಿಡುಗಡೆಗೆ ಶೇ.40ಕ್ಕೂ ಹೆಚ್ಚು ಕಮಿನಷ್ ನೀಡಬೇಕು. ಡಿಡಿಪಿಐಗೆ ಶೇ.20, ಬಿಇಒಗಳಿಗೆ ಶೇ.25ರಷ್ಟು ಕಮಿಷನ್ ಕೊಡಬೇಕು ಎಂದು ದೂರಿದರು. ಕೆಲ ಬಿಇಒ, ಡಿಡಿಪಿಐಗಳು ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ನಮ್ಮ ಬಳಿಕ ಆಡಿಯೋ ಸಾಕ್ಷ್ಯಾಧಾರಗಳು ಇವೆ. ಇಲಾಖೆ ತನಿಖೆ ನಡೆಸುವುದಾದರೆ ಅದನ್ನು ನೀಡಲು ಸಿದ್ಧ’ ಎಂದು ಹೇಳಿದರು.