ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ: ರುಪ್ಸಾದಿಂದ ಸಾಕ್ಷ್ಯ ಸಲ್ಲಿಕೆ
ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಗಂಭೀರ ಆರೋಪ ಮಾಡಿದ್ದ ಖಾಸಗಿ ಶಾಲಾ ಸಂಘಟನೆ ರುಪ್ಸಾ ಕರ್ನಾಟಕದ ಪದಾಧಿಕಾರಿಗಳು ಗುರುವಾರ ಇಲಾಖೆಯ ಆಯುಕ್ತ ಆರ್.ವಿಶಾಲ್ ಅವರನ್ನು ಭೇಟಿ ಮಾಡಿ ಕೆಲ ಅಧಿಕಾರಿಗಳ ವಿರುದ್ಧ ಸಕ್ಷ್ಯಾಧಾರಗಳನ್ನು ಸಲ್ಲಿಸಿ ತನಿಖೆಗೆ ಒತ್ತಾಯಿಸಿದ್ದಾರೆ.
ಬೆಂಗಳೂರು (ಸೆ.02): ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಗಂಭೀರ ಆರೋಪ ಮಾಡಿದ್ದ ಖಾಸಗಿ ಶಾಲಾ ಸಂಘಟನೆ ರುಪ್ಸಾ ಕರ್ನಾಟಕದ ಪದಾಧಿಕಾರಿಗಳು ಗುರುವಾರ ಇಲಾಖೆಯ ಆಯುಕ್ತ ಆರ್.ವಿಶಾಲ್ ಅವರನ್ನು ಭೇಟಿ ಮಾಡಿ ಕೆಲ ಅಧಿಕಾರಿಗಳ ವಿರುದ್ಧ ಸಕ್ಷ್ಯಾಧಾರಗಳನ್ನು ಸಲ್ಲಿಸಿ ತನಿಖೆಗೆ ಒತ್ತಾಯಿಸಿದ್ದಾರೆ.
ಆದರೆ, ಭ್ರಷ್ಟಾಚಾರದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಅವರೂ ಭಾಗಿಯಾಗಿದ್ದಾರೆಂದು ಆರೋಪಿಸಿದ್ದ ಪದಾಧಿಕಾರಿಗಳು ಈ ಸಂಬಂಧ ಯಾವುದೇ ಸಾಕ್ಷಿ ಆಧಾರಗಳನ್ನು ಸಲ್ಲಿಸಿಲ್ಲ. ಖುದ್ದು ಆಯುಕ್ತರು ಸಚಿವರ ವಿರುದ್ಧ ಮಾಡಿದ ಆರೋಪವನ್ನು ಪ್ರಶ್ನಿಸಿದ್ದು ಇದಕ್ಕೆ ಪದಾಧಿಕಾರಿಗಳು, ತಾವು ನೀಡಿದ ಯಾವುದೇ ದೂರುಗಳಿಗೆ ಇಲಾಖೆಯಲ್ಲಿ ಕ್ರಮ ಆಗದ ಹಿನ್ನೆಲೆಯಲ್ಲಿ ಇದರ ಹಿಂದೆ ಸಚಿವರ ಕೃಪಾಕಟಾಕ್ಷ ಇರಬೇಕೆಂದು ಭಾವಿಸಿ ಆರೋಪ ಮಾಡಿದ್ದಾಗಿ ಸಮಜಾಹಿಷಿ ನೀಡಿದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲೂ ಶೇ.40 ಕಮಿಷನ್..!
ಯಾವ್ಯಾವ ದಾಖಲೆ ಸಲ್ಲಿಸಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿರುವ ನೋಂದಾಯಿತ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ರುಪ್ಸಾ-ಕರ್ನಾಟಕ) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆಅವರು, ಪ್ರಮುಖವಾಗಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ನೀಡುವ 12 ಕೋಟಿ ರು. ವೆಚ್ಚದ ಟೆಂಡರ್ ಪ್ರಕ್ರಿಯೆಯಲ್ಲಿ ಸಂಪೂರ್ಣ ನಿಯಮ ಉಲ್ಲಂಘನೆಯಾಗಿದೆ. ಜೊತೆಗೆ ದರ ನಿಗದಿ, ಗುಣಮಟ್ಟದಲ್ಲಿ ಭಾರೀ ಅಕ್ರಮ ನಡೆದಿದೆ. ಹೊಸ ಕಂಪ್ಯೂಟರ್‌ಗಳ ಬದಲು ಬಳಸಿದ ಕಂಪ್ಯೂಟರ್ ನೀಡಿದ್ದಾರೆ. ಅವು ಈಗಾಗಲೇ ಹಾಳಾಗಿಹೋಗಿವೆ. ಈ ಬಗ್ಗೆ ದಾಖಲೆಗಳನ್ನು ನೀಡಿದ್ದೇವೆ ಎಂದು ತಿಳಿಸಿದರು.
ಇನ್ನು, ಜೀವರ್ಗಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌ಟಿಇ ಶುಲ್ಕ ಮರುಪಾವತಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ಸಿಡಿ ಸಹಿತ ದೂರು ನೀಡಿದರೂ ಇಲಾಖೆಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಮೂರು ಬಾರಿ ನೆಪಮಾತ್ರಕ್ಕೆ ವರ್ಗಾವಣೆ ಮಾಡಿ ಮತ್ತೆ ಮತ್ತೆ ಅದೇ ತಾಲ್ಲೂಕಿಗೆ ನಿಯೋಜಿಸಲಾಗಿದೆ. ಅಲ್ಲದೆ, ದೂರು ನೀಡಿದ 25 ಶಾಲಾ ಆಡಳಿತ ಮಂಡಳಿಯವರಿಗೆ ದಾಖಲೆ ಪರಿಶೀಲನೆ ಹೆಸರಲ್ಲಿ ಕಿರುಕುಳ ನೀಡಿರುವ ದಾಖಲೆಗಳನ್ನು ಸಲ್ಲಿಸಿದ್ದೇವೆ.
ಅದೇ ರೀತಿ ಬೆಂಗಳೂರಿನ ದಕ್ಷಿಣ ಬಿಇಒ ಪ್ರಕಾಶ್ ಅವರ ವಿರುದ್ಧ 94 ಲಕ್ಷ ರು. ಆರ್‌ಟಿಇ ಮರುಪಾವತಿ ಶುಲ್ಕ ದುರುಪಯೋಗದ ಬಗ್ಗೆ ಇಲಾಖೆಯ ತನಿಖೆಯಲ್ಲೇ ಸಾಬೀತಾದರೂ ಯಾವುದೇ ಕ್ರಮ ಕೈಗೊಳ್ಳದೆ ಖುಲಾಸೆಗೊಳಿಸಿಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ವಹಿಸಲು ಕೋರಿದ್ದೇವೆ. ಕಟ್ಟಡ ಮತ್ತು ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಇಲ್ಲದೆ ಇದ್ದರೆ ಮುಚ್ಚಳಿಕೆ ಬರೆಸಿಕೊಂಡು ಒಂದು ವರ್ಷಕ್ಕೆ ಮಾತ್ರ ಮಾನ್ಯತೆ ನವೀಕರಿಸಲು ಸರ್ಕಾರ ಸೂಚಿಸಿದರೂ ಬೆಂಗಳೂರು ದಕ್ಷಿಣ ಡಿಡಿಪಿಐ ರಾಜೇಂದ್ರ ನಿಯಮ ಮೀರಿ ಸುಮಾರು 300 ಶಾಲೆಗಳಿಗೆ ಐದು ವರ್ಷಗಳಿಗೆ ಮಾನ್ಯತೆ ನವೀಕರಿಸಿ ಅಕ್ರಮವೆಸಗಿದ್ದಾರೆ.
ಶಿಕ್ಷಣ ಇಲಾಖೆಯಲ್ಲೂ ಕಮಿಷನ್: ಸಚಿವ ನಾಗೇಶ್‌ರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ರುಪ್ಸಾ ಆಗ್ರಹ
ಈ ಬಗ್ಗೆಯೂ ದಾಖಲೆಗಳನ್ನೂ ನೀಡಿದ್ದು ಅವರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದೇವೆ. ಇದೆಲ್ಲದರ ಜೊತೆಗೆ ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿ ಸರ್ಕಾರಿ ಶಾಲಾ ಶಿಕ್ಷಕರು ಕರ್ತವ್ಯದ ಅವಧಿಯಲ್ಲೇ ಖಾಸಗಿ ಮಾರ್ಕೆಟಿಂಗ್ ಕಂಪನಿಯೊಂದರ ಬ್ಯಾನರ್ ಹಾಕಿಕೊಂಡು ಕಂಪನಿ ಉತ್ಪನ್ನಗಳ ಪರ ಮಾರ್ಕೆಟಿಂಗ್ ಮಾಡುತ್ತಿದ್ದಾರೆ. ಈ ಬಗ್ಗೆ ಚಿತ್ರದುರ್ಗ ಜಿಲ್ಲೆಯ ದಾಖಲೆಗಳನ್ನು ಮಾತ್ರ ಸಲ್ಲಿಸಲಾಗಿದೆ. ಇಡೀ ರಾಜ್ಯದಲ್ಲಿ ಸುಮಾರು 6000 ಶಿಕ್ಷಕರು ಇದರಲ್ಲಿ ಭಾಗಿಯಾಗಿರುವ ಮಾಹಿತಿ ಇದೆ ಎಂದು ಹೇಳಿದ್ದಾರೆ.