Hijab Row ಸರ್ಕಾರದ ಆದೇಶಕ್ಕೆ ಸೆಡ್ಡು, ಹಿಜಾಬ್-ಕೇಸರಿ ಶಾಲು ಮಧ್ಯೆ ನೀಲಿ ಶಾಲು ಎಂಟ್ರಿ

* ಕಡ್ಡಾಯವಾಗಿ ಸಮವಸ್ತ್ರ ಸಂಹಿತೆ ಆದೇಶಕ್ಕೆ ಸೆಡ್ಡು
* ಹಿಜಾಬ್-ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯರ್ಥಿಗಳು
* ಹಿಜಾಬ್-ಕೇಸರಿ ಶಾಲು ಮಧ್ಯೆ ನೀಲಿ ಶಾಲು ಎಂಟ್ರಿ

Dalit students wearing blue shawl and support hijab at chikkamagaluru college rbj

ಚಿಕ್ಕಮಳೂರು, (ಫೆ.07): ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಸಮವಸ್ತ್ರ ಸಂಹಿತೆ(Uniform) ಪಾಲಿಸುವಂತೆ ಕರ್ನಾಟಕ ಸರ್ಕಾರ(Karnataka Government) ಆದೇಶ ಹೊರಡಿಸಿದೆ. 

ಆದರೂ ಇಂದು ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ (Hijab) ಧರಿಸಿ ಬಂದಿದ್ರೆ, ಹಾಗೂ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು(Kesari Shawl) ಧರಿಸಿ ಬಂದಿದ್ದಾರೆ.  ಈ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.

Hijab Row ಹಿಜಾಬ್‌, ಕೇಸರಿ ಶಾಲು ಜಟಾಪಟಿಗೆ ಬ್ರೇಕ್‌, ಮಹತ್ವದ ರೂಲ್ಸ್ ಜಾರಿಗೆ ತಂದ ಸರ್ಕಾರ

ಈ ಹಿಜಾಬ್ ಹಾಗೂ ಕೇಸರಿ ಶಾಲು ಹಗ್ಗಾಜಗ್ಗಾಟದ ಮಧ್ಯೆ ನೀಲಿ ಶಾಲು ಬಂದಿದೆ.  ಮುಸ್ಲಿಂ ವಿದ್ಯಾರ್ಥಿನಿಯರು ಮೊದಲಿನಿಂದಲೂ ಧರಿಸಿ ಬರುತ್ತಿರುವ ಹಿಜಾಬ್‌ಗೆ ವಿರೋಧ ಮಾಡಬಾರದು ಎಂದು ಆಗ್ರಹಿಸಿದ ವಿದ್ಯಾರ್ಥಿಗಳು ‘ನೀಲಿ ಶಾಲು’ ಧರಿಸಿ ಕಾಲೇಜಿಗೆ ಬಂದಿದ್ದಾರೆ. ‘ಜೈ ಭೀಮ್‌’, ‘ಜೈ ಅಂಬೇಡ್ಕರ್‌’ ಎಂದು ಕೂಗಿ ಹಿಜಾಬ್‌ಗೆ ಬೆಂಬಲ ಸೂಚಿಸಿರುವುದು ಹೊಸ ಸಂಚಲನ ಮೂಡಿಸಿದೆ.

ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನ ಕೆಲ ವಿದ್ಯಾರ್ಥಿಗಳು ನೀಲಿ ಶಾಲು ಧರಿಸಿ ಘೋಷಣೆ ಕೂಗಿದ್ದಾರೆ. ಹಿಜಾಬ್‌ ವಿರೋಧಿಸಿ ಕೇಸರಿ ಶಾಲು ಹಾಕಿಕೊಂಡು ಬರುತ್ತಿದ್ದ ಬೆಳವಣಿಗೆಯ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದರು. ಹಿಜಾಬ್ ವಿರೋಧಿಸಿ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದರು. ಕಾಲೇಜಿನಲ್ಲಿ ಹಿಜಾಬ್‌ಗೆ ಅವಕಾಶ ನೀಡಬಾರದು ಎಂದು ಕೆಲ ವಿದ್ಯಾರ್ಥಿಗಳು ಆಗ್ರಹಿಸಿದರು.

ಹಿಜಾಬ್ ನಮ್ಮ ಹಕ್ಕು ಎಂದು ತೆಗೆಯಲ್ಲ ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಹೇಳಿದರು. ಕಾಲೇಜಿನಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಇತ್ತು. ಐಡಿಎಸ್‌ಜಿ ಕಾಲೇಜಿನಲ್ಲಿನ ಹಲವು ವಿದ್ಯಾರ್ಥಿಗಳು ನೀಲಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದರು. ಹಿಜಾಬ್‌ಗೆ ಬೆಂಬಲ ವ್ಯಕ್ತಪಡಿಸಿದರು. 

ಸರ್ಕಾರದ ಆದೇಶಕ್ಕೆ ಸೆಡ್ಡು
ಮೊದಲಿಗೆ ಉಡುಪಿ ಜಿಲ್ಲೆಯಲ್ಇ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ತೀವ್ರಗೊಳ್ಳುತ್ತಿರುವುದರಿಂದ ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಿದೆ. ಆದ್ರೆ. ಸರ್ಕಾರದ ಆದೇಶಕ್ಕೆ ವಿದ್ಯಾರ್ಥಿಗಳು ಡೋಂಟ್ ಕೇರ್ ಎಂದಿದ್ದಾರೆ.

ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ಇತರೆ ಜಿಲ್ಲೆಗಳಲ್ಲೂ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದಾರೆ. ಇದಕ್ಕೆ ಪ್ರತಿರೋಧವಾಗಿ ಹಿಂದೂ ವಿದ್ಯಾರ್ಥಿಗಳು ಸಹ ಕೇಸರಿ ಶಾಲು ಹಾಕಿಕೊಂಡು ಕಾಲೇಜುಗಳಿಗೆ ಬಂದಿದ್ದಾರೆ. ಈ ಮೂಲಕ ಸರ್ಕಾರದ ಆದೇಶಕ್ಕೆ ಸೆಡ್ಡು ಹೊಡೆದಿದ್ದಾರೆ. 

ಇದರಿಂದ ಕಾಲೇಜು ಆಡಳಿತ ಮಂಡಳಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಇದನ್ನು ಹೇಗೆ ತಡೆಯಬೇಕೆಂಬ ಚಿಂತನೆಯಲ್ಲಿದ್ದಾರೆ. ಇನ್ನೂ ಕೆಲವೆಡೆ ಕೇಸರಿ-ಹಿಜಾಬ್ ಹೆಚ್ಚಾಗುತ್ತಿದ್ದಂತೆಯೇ ಮುಂಜಾಗ್ರತಾವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ತೀರ್ಪು ಬಂದ ಬಳಿಕ ಮುಂದಿನ ನಿರ್ಧಾರ ಮಾಡುತ್ತೇವೆ
ಇನ್ನು ಹಿಜಾಬ್ ವಿವಾದದ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರದ ಸುತ್ತೋಲೆಯನ್ನು ಎಲ್ಲರೂ ಪಾಲಿಸಬೇಕು. ವಿದ್ಯಾರ್ಥಿಗಳು ಶಾಂತಿ ಕದಡುವ ಕೆಲಸ ಮಾಡಬಾರದು. ನಾಳೆ ನ್ಯಾಯಾಲಯದಿಂದ ತೀರ್ಪು ಬರುತ್ತದೆ. ತೀರ್ಪು ಬಂದ ಬಳಿಕ ಮುಂದಿನ ನಿರ್ಧಾರ ಮಾಡುತ್ತೇವೆ. ಹಿಜಾಬ್ ವಿವಾದದ ಹಿಂದೆ ಕೆಲ ಶಕ್ತಿಗಳು ಕೆಲಸ ಮಾಡುತ್ತಿವೆ. ಸದ್ಯ ಕೋರ್ಟ್‌ನಲ್ಲಿ ಪ್ರಕರಣ ಇರುವ ಹಿನ್ನೆಲೆ ಮಾತಾಡಲ್ಲ ಎಂದರು.

ಒಟ್ಟಿನಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಮಧ್ಯೆ ನೀಲಿ ಶಾಲು ಎಂಟ್ರಿಕೊಟ್ಟಿದ್ದು ಈ ವಿವಾದ ಮತ್ತಷ್ಟು ತಾರಕಕ್ಕೇರುವ ಲಕ್ಷಣಗಳು ಕಾಣಿಸುತ್ತಿವೆ. ಇದನ್ನ ಸರ್ಕಾರ ಯಾವ ರೀತಿ ನಿಯಂತ್ರಣಕ್ಕೆ ತರುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.
 

Latest Videos
Follow Us:
Download App:
  • android
  • ios