Ballari: ವಿದ್ಯಾರ್ಥಿಗಳ ಮೇಲೆ ಕೋವಿಡ್ ದಾಳಿ: ಆತಂಕದಲ್ಲಿ ಪೋಷಕರು
* ಬಳ್ಳಾರಿ ನಗರದಲ್ಲಿಯೇ 70ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸೋಂಕು
* ಬಿಐಟಿಎಂ ಎಂಜಿನಿಯರಿಂಗ್ ಕಾಲೇಜಿನ 28 ವಿದ್ಯಾರ್ಥಿಗಳಿಗೆ ಪಾಸಿಟಿವ್
* ಕಾಲೇಜು ಬಂದ್‌ಗೆ ಡಿಸಿ ಆದೇಶ
ಬಳ್ಳಾರಿ(ಜ.15): ಕೋವಿಡ್(Covid-19) ವೈರಸ್ ಜಿಲ್ಲಾದ್ಯಂತ ತೀವ್ರವಾಗಿ ಹಬ್ಬುತ್ತಿದ್ದು, ಶಾಲಾ-ಕಾಲೇಜುಗಳಿಗೂ(School-Colleges) ಸೋಂಕು ವ್ಯಾಪಿಸಿದೆ. ಬಳ್ಳಾರಿ(Ballari) ನಗರದಲ್ಲಿಯೇ 70ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೋವಿಡ್ ಇರುವುದು ದೃಢಗೊಂಡಿದೆ. ಹೆಚ್ಚಿನ ವಿದ್ಯಾರ್ಥಿಗಳು ಇರುವ ಶಾಲಾ-ಕಾಲೇಜುಗಳು, ಹಾಸ್ಟೆಲ್‌ಗಳಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದ್ದಂತೆಯೇ ಮಕ್ಕಳಲ್ಲಿ ಕೋವಿಡ್ ಇರುವುದು ಖಚಿತಗೊಳ್ಳುತ್ತಿದೆ.
ಈ ವರೆಗೆ ಸಾಮಾನ್ಯ ಜನರಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೋವಿಡ್ ಇದೀಗ ಮಕ್ಕಳ(Children) ಮೇಲೆ ದಾಳಿ ನಡೆಸಿರುವುದು ಕಂಡು ಬರುತ್ತಿದೆ. ಎಲ್ಲ ಕಡೆ ವೈದ್ಯಕೀಯ ಪರೀಕ್ಷೆಯನ್ನು ಚುರುಕುಗೊಳಿಸಿದ್ದೇವೆ. ವಿದ್ಯಾರ್ಥಿಗಳಲ್ಲಿ(Students) ಹೆಚ್ಚಿನ ಸೋಂಕು ಹರಡಿಬಹುದಾದ ಸಾಧ್ಯತೆ ಹಿನ್ನೆಲೆಯಲ್ಲಿ ಮಕ್ಕಳ ಪರೀಕ್ಷೆ ಹೆಚ್ಚಳಗೊಳಿಸಿದ್ದು, ಪರೀಕ್ಷೆ ನಡೆಸಿದಾಗ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬಂದಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜನಾರ್ದನ ಕನ್ನಡಪ್ರಭಕ್ಕೆ(Kannada Prabha) ತಿಳಿಸಿದ್ದಾರೆ.
Covid Crisis: 236 ದಿನದ ಬಳಿಕ ಬೆಂಗ್ಳೂರಲ್ಲಿ 20 ಸಾವಿರ ಅಧಿಕ ಜನಕ್ಕೆ ವೈರಸ್
ಎಲ್ಲೆಲ್ಲಿ? ಎಷ್ಟೆಷ್ಟು ಪ್ರಕರಣಗಳು?
ನಗರ ಹೊರ ವಲಯದ ಬಿಐಟಿಎಂ ಎಂಜಿನಿಯರಿಂಗ್ ಕಾಲೇಜಿನ 28 ವಿದ್ಯಾರ್ಥಿಗಳಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ನಗರದ ಶೆಟ್ರಗುರುಶಾಂತಪ್ಪ ಕಾಲೇಜಿನ ಒಟ್ಟು 9 ವಿದ್ಯಾರ್ಥಿಗಳು, ಎಎಸ್‌ಎಂ ಕಾಲೇಜಿನ ಗಾಂಧಿನಗರ ಮಹಿಳಾ ಎಸ್ಟಿಹಾಸ್ಟೆಲ್‌ನ 14, ವಿಮ್ಸ್ ಹಾಸ್ಟೆಲ್‌ನ 10 ವಿದ್ಯಾರ್ಥಿಗಳಿಗೆ ಸೋಂಕು ಇರುವುದು ಖಚಿತವಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ 14 ಜನರಲ್ಲಿ ಕೋವಿಡ್ ಇರುವುದು ಪತ್ತೆಯಾಗಿದೆ.
ಬಿಐಟಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ(BITM Engineering College) 3500 ವಿದ್ಯಾರ್ಥಿಗಳಿದ್ದು, 400 ಜನ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದಾರೆ. ಈ ಪೈಕಿ 600 ವಿದ್ಯಾರ್ಥಿಗಳ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ 28 ಪ್ರಕರಣಗಳು ಖಚಿತವಾಗಿವೆ.
ಶೆಟ್ರಗುರುಶಾಂತಪ್ಪ (ಎಸ್‌ಜಿ) ಕಾಲೇಜಿನಲ್ಲಿ 6 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡ ಬಳಿಕ ಮತ್ತೆ 400 ವಿದ್ಯಾರ್ಥಿಗಳಿಗೆ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ವರದಿ ಇನ್ನೂ ಬಂದಿಲ್ಲ. ಎಎಸ್‌ಎಂ ಕಾಲೇಜು ಮಹಿಳಾ ಹಾಸ್ಟೆಲ್‌ನ 220 ವಿದ್ಯಾರ್ಥಿಗಳ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಇನ್ನು ವರದಿ ಬರಬೇಕಾಗಿದೆ.
ಕಾಲೇಜು ಬಂದ್‌ಗೆ ಡಿಸಿ ಆದೇಶ:
ಎಸ್‌ಜಿ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಹಬ್ಬಿರುವುದರಿಂದ ಎಸ್‌ಜಿ ಕಾಲೇಜು, ಎಎಸ್‌ಎಂ ಕಾನೂನು ಕಾಲೇಜು, ಕೊಟ್ಟೂರುಸ್ವಾಮಿ ಬಿಇಎಡ್ ಕಾಲೇಜು, ಬಾಲಕಿಯರ ಹಾಸ್ಟೆಲ್, ಎಂಜಿನಿಯರಿಂಗ್ ಹಾಸ್ಟೆಲ್‌ಗಳನ್ನು ಜ. 23ರ ವರೆಗೆ ಬಂದ್ ಮಾಡಿಸಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಆದೇಶ ಹೊರಡಿಸಿದ್ದಾರೆ.
1 ಸಾವಿರಕ್ಕೂ ಅಧಿಕ ಟೆಸ್ಟ್
ನಗರದ ಸರ್ಕಾರಿ ಪದವಿಪೂರ್ವ ಕಾಲೇಜು (ಮುನ್ಸಿಪಲ್) ಕಾಲೇಜಿನಲ್ಲಿ ಶುಕ್ರವಾರ 1 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಕಾಲೇಜಿನಲ್ಲಿ 2500 ವಿದ್ಯಾರ್ಥಿಗಳಿದ್ದು ಗುರುವಾರ 350 ಜನರಿಗೆ ಪರೀಕ್ಷೆ ನಡೆಸಲಾಗಿದೆ. ಕಾಲೇಜಿನ ಪ್ರಾಂಶುಪಾಲ ಕೆ.ವೆಂಕಟರೆಡ್ಡಿ ಸೇರಿದಂತೆ ಕಾಲೇಜು ಆಡಳಿತ ಮಂಡಳಿ ಸದಸ್ಯರಿದ್ದರು.
Corona Update ಕರ್ನಾಟಕದಲ್ಲಿ ಕೊರೋನಾ ಏರಿಕೆ, ಸಾವಿನ ಸಂಖ್ಯೆಯಲ್ಲೂ ಹೆಚ್ಚಳ
ವಿದ್ಯಾರ್ಥಿಗಳನ್ನು ಬಿಟ್ಟುಬಿಡದೇ ಕಾಡುತ್ತಿರುವ ಕೊರೋನಾ
ಬೆಳಗಾವಿ(Belagavi) ಜಿಲ್ಲೆಯಲ್ಲಿ ಕೋವಿಡ್ ವೈರಸ್ ವಿದ್ಯಾರ್ಥಿಗಳನ್ನು ಬಿಟ್ಟುಬಿಡದೆ ಕಾಡುತ್ತಿದೆ. ಹೌದು, ಬಣಜವಾಡ ವಸತಿ ಪಿಯು ಕಾಲೇಜಿನ 59 ವಿದ್ಯಾರ್ಥಿಗಳು ಹಾಗೂ ಯಂಕಂಚಿ ಗ್ರಾಮದ ಪ್ರೌಢಶಾಲೆಯ 10 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಬೆಳಗಾವಿಯ ಬಿಮ್ಸ್ ವೈದ್ಯಕೀಯ ಕಾಲೇಜಿನ(Belagavi BIMS Medical College) 20ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ನಗರದ ಖಾಸಗಿ ಶಾಲೆಯ ಮೂವರು ಸಿಬ್ಬಂದಿಗೂ ಕೋವಿಡ್ ದೃಢಪಟ್ಟಿದೆ. ಬೆಳಗಾವಿ ಜಿಲ್ಲೆಯಲ್ಲಿ ಒಂದೇ ವಾರದ ಅಂತರದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೋವಿಡ್ ಕಾಣಿಸಿಕೊಂಡಿದೆ. ಮಕ್ಕಳಿಗೆ ಕೊರೋನಾ ಕಾಟ ಕೊಡುತ್ತಿರುವ ಹಿನ್ನೆಲೆಯಲ್ಲಿ ಪೋಷಕರಲ್ಲಿ ಆತಂಕ ಶುರುವಾಗಿದೆ.