ಜಾಗತಿಕ ಆನ್‌ಲೈನ್ ಕಲಿಕಾ ವೇದಿಕೆ ಕೋರ್ಸೆರಾ, ಎಐ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು 'ಪ್ರಾಜೆಕ್ಟ್ ಹೆಲಿಕ್ಸ್' ಎಂಬ ಹೊಸ ವೇದಿಕೆಯನ್ನು ಬೆಂಗಳೂರಿನಲ್ಲಿ ಅನಾವರಣಗೊಳಿಸಿದೆ. ಅಲ್ಲದೆ, ಮ್ಯಾನೇಜ್ಮೆಂಟ್ ಶಿಕ್ಷಣ ವಿಸ್ತರಣೆಗಾಗಿ ಐಐಎಂ ಬೆಂಗಳೂರು ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಇತ್ತೀಚೆಗಷ್ಟೇ ಉಡೆಮಿ ಜೊತೆ ವಿಲೀನಗೊಂಡಿರುವ ಕೋರ್ಸೆರಾ, ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದೆ.

ಬೆಂಗಳೂರು: ಜಾಗತಿಕ ಆನ್‌ಲೈನ್ ಕಲಿಕಾ ವೇದಿಕೆಯಾದ 'ಕೋರ್ಸೆರಾ' ಭವಿಷ್ಯದ ಉದ್ಯೋಗ ಮಾರುಕಟ್ಟೆಗೆ ತಕ್ಕಂತೆ ಕೃತಕ ಬುದ್ಧಿಮತ್ತೆ (ಎಐ) ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ತನ್ನ ಹೊಸ ವೇದಿಕೆಯಾದ 'ಪ್ರಾಜೆಕ್ಟ್ ಹೆಲಿಕ್ಸ್' ಅನ್ನು ಗುರುವಾರ ಬೆಂಗಳೂರಿನಲ್ಲಿ ಅನಾವರಣಗೊಳಿಸಿತು.

'ಕೋರ್ಸೆರಾ' ಮತ್ತು 'ಉಡೆಮಿ' ಜಂಟಿಯಾಗಿ ಆಯೋಜಿಸಿದ್ದ 'ಎಫ್‌ಡಬ್ಲ್ಯೂಡಿ 2026' ವಾರ್ಷಿಕ ಕಾರ್ಯಕ್ರಮದಲ್ಲಿ ಈ ಎಐ-ಆಧಾರಿತ ಸ್ಕಿಲ್ಸ್ ಪ್ಲಾಟ್‌ಫಾರ್ಮ್ ಅನ್ನು ಪ್ರದರ್ಶಿಸಲಾಯಿತು. ಇದೇ ವೇಳೆ, ಮ್ಯಾನೇಜ್ಮೆಂಟ್ ಶಿಕ್ಷಣವನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಲು 'ಐಐಎಂ ಬೆಂಗಳೂರು' ಜೊತೆಗಿನ ಮಹತ್ವದ ಪಾಲುದಾರಿಕೆಯನ್ನು ಕಂಪನಿ ಘೋಷಿಸಿತು.

ಏನಿದು 'ಪ್ರಾಜೆಕ್ಟ್ ಹೆಲಿಕ್ಸ್'?

ವ್ಯವಹಾರದ ಅಗತ್ಯಗಳಿಗೆ ತಕ್ಕಂತೆ ಉದ್ಯೋಗಿಗಳಿಗೆ ವೈಯಕ್ತಿಕ ಕಲಿಕೆ ಮತ್ತು ಕೌಶಲ್ಯಗಳನ್ನು ಒದಗಿಸಲು ಈ ವೇದಿಕೆಯನ್ನು ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಕಲಿಯುವವರು ತಮ್ಮ ಗುರಿಗಳನ್ನು ಸಾಮಾನ್ಯ ಭಾಷೆಯಲ್ಲಿ ವಿವರಿಸಿದರೆ, ಅದಕ್ಕೆ ತಕ್ಕಂತೆ 'ಎಐ' ಕಲಿಕಾ ಮಾರ್ಗವನ್ನು ರೂಪಿಸಿಕೊಡುತ್ತದೆ. 2027ರ ಮೊದಲಾರ್ಧದಲ್ಲಿ ಈ ವೇದಿಕೆ ಉದ್ಯಮ-ಗ್ರಾಹಕರಿಗೆ ಲಭ್ಯವಾಗುವ ನಿರೀಕ್ಷೆಯಿದೆ.

ಕೋರ್ಸೆರಾದ ಭಾರತ ಮತ್ತು ಏಷ್ಯಾ ಪೆಸಿಫಿಕ್ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಆಶುತೋಷ್ ಗುಪ್ತಾ ಮಾತನಾಡಿ, "ಎಐ ಪರಿಕರಗಳ ಬಳಕೆ ವೇಗವಾಗಿ ಬೆಳೆಯುತ್ತಿದೆ. ದೈನಂದಿನ ಕೆಲಸಗಳಲ್ಲಿ ಕಲಿಕೆಯನ್ನು ಅಳವಡಿಸಿಕೊಳ್ಳಲು ಹಾಗೂ ಉದ್ಯೋಗಿಗಳಿಗೆ ಸೂಕ್ತ ಕೌಶಲ್ಯದ ವಿಶ್ವಾಸ ತುಂಬಲು 'ಪ್ರಾಜೆಕ್ಟ್ ಹೆಲಿಕ್ಸ್' ನೆರವಾಗಲಿದೆ," ಎಂದರು.

ಐಐಎಂ ಬೆಂಗಳೂರು ಜೊತೆ ಒಪ್ಪಂದ

ಮ್ಯಾನೇಜ್‌ಮೆಂಟ್‌ ಶಿಕ್ಷಣವನ್ನು ಜಾಗತಿಕ ಮಟ್ಟದ ವಿದ್ಯಾರ್ಥಿಗಳಿಗೆ ತಲುಪಿಸಲು ಕೋರ್ಸೆರಾ, ಐಐಎಂ ಬೆಂಗಳೂರಿನ 'ಐಐಎಂಬಿಎಕ್ಸ್ ಡಿಜಿಟಲ್ ಲರ್ನಿಂಗ್ ಫೌಂಡೇಶನ್' (ಐಐಎಂಬಿಎಕ್ಸ್‌) ಜೊತೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಬಿಸಿನೆಸ್ ಸ್ಟ್ರಾಟಜಿ, ಉದ್ಯಮಶೀಲತೆ, ಡೇಟಾ ಆಧಾರಿತ ನಿರ್ಧಾರ, ಡಿಜಿಟಲ್ ಮಾರ್ಕೆಟಿಂಗ್, ಪಬ್ಲಿಕ್ ಪಾಲಿಸಿ ಮತ್ತು ಫಿನ್‌ಟೆಕ್‌ನಂತಹ ಹೊಸ ಕೋರ್ಸ್‌ಗಳನ್ನು ಕೋರ್ಸೆರಾ ವೇದಿಕೆಯಲ್ಲಿ ಆರಂಭಿಸಲಾಗುವುದು ಎಂದು ಐಐಎಂಬಿಎಕ್ಸ್‌ನ ಸಿಇಒ ಸೀತಾರಾಮನ್ ಶಂಕರ್ ತಿಳಿಸಿದರು.

ಕರ್ನಾಟಕದಲ್ಲಿ ಕೋರ್ಸೆರಾ

ಕೌಶಲ್ಯಾಭಿವೃದ್ಧಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ರಾಜ್ಯದಲ್ಲಿ ಬರೋಬ್ಬರಿ 43 ಲಕ್ಷ ಕೋರ್ಸೆರಾ ಬಳಕೆದಾರರಿದ್ದಾರೆ. ಇದು ಭಾರತದಲ್ಲೇ ಮೂರನೇ ಅತಿದೊಡ್ಡ ಸಂಖ್ಯೆಯಾಗಿದೆ. ವಿಶೇಷವೆಂದರೆ, ರಾಜ್ಯದಲ್ಲಿ ಸರಾಸರಿ ಪ್ರತಿ ಎರಡು ನಿಮಿಷಕ್ಕೊಮ್ಮೆ ಒಬ್ಬರು 'ಜನರೇಟಿವ್ ಎಐ' ಕೋರ್ಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ. ಇದುವರೆಗೆ 7.5 ಲಕ್ಷ ಮಂದಿ ಈ ಕೋರ್ಸ್‌ಗೆ ನೋಂದಾಯಿಸಿಕೊಂಡಿದ್ದಾರೆ. ಎಐ ಜೊತೆಗೆ ಡೇಟಾ ಅನಾಲಿಸಿಸ್ ಮತ್ತು ಮಷಿನ್ ಲರ್ನಿಂಗ್‌ಗೆ ರಾಜ್ಯದಲ್ಲಿ ಹೆಚ್ಚಿನ ಬೇಡಿಕೆಯಿದೆ.

ಇದಲ್ಲದೆ ರಾಜ್ಯದ ಅಲಯನ್ಸ್ ಯೂನಿವರ್ಸಿಟಿ, ರೇವಾ ಯೂನಿವರ್ಸಿಟಿ, ಮೈಸೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್, ಗಾರ್ಡನ್ ಸಿಟಿ ಯೂನಿವರ್ಸಿಟಿ, ಮೈಸೂರಿನ ಮಹಾರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವಿದ್ಯಾವರ್ಧಕ ಕಾಲೇಜ್ ಆಫ್ ಎಂಜಿನಿಯರಿಂಗ್, ಆರ್‌ಎನ್‌ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಂಡ್ಯದ ಪಿ.ಇ.ಎಸ್. ಕಾಲೇಜ್ ಆಫ್ ಎಂಜಿನಿಯರಿಂಗ್, ಆರ್‌ವಿ ಯೂನಿವರ್ಸಿಟಿ, ಕ್ರೈಸ್ಟ್ ಯೂನಿವರ್ಸಿಟಿ ಮತ್ತು ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸಂಸ್ಥೆಗಳು ಸೇರಿದಂತೆ ಹಲವು ಪ್ರಮುಖ ಶಿಕ್ಷಣ ಸಂಸ್ಥೆಗಳೊಂದಿಗೆ ಕೋರ್ಸೆರಾ ಪಾಲುದಾರಿಕೆ ಹೊಂದಿದ್ದು, ವಿದ್ಯಾರ್ಥಿಗಳಿಗೆ ಉದ್ಯಮಶೀಲತಾ ಕೌಶಲ್ಯಗಳನ್ನು ಒದಗಿಸುತ್ತಿದೆ.

ಕೋರ್ಸೆರಾ-ಉಡೆಮಿ ವಿಲೀನ

2012ರಲ್ಲಿ ಆರಂಭವಾದ 'ಕೋರ್ಸೆರಾ' ಇತ್ತೀಚೆಗಷ್ಟೇ ಮತ್ತೊಂದು ಪ್ರಮುಖ ಆನ್‌ಲೈನ್ ಕಲಿಕಾ ವೇದಿಕೆ 'ಉಡೆಮಿ' ಜೊತೆ ವಿಲೀನಗೊಂಡು ವಿಶ್ವದ ಅತಿದೊಡ್ಡ ಸ್ಕಿಲ್ ಡೆವಲಪ್ಮೆಂಟ್ ವೇದಿಕೆಯಾಗಿ ಹೊರಹೊಮ್ಮಿದೆ. ಪ್ರಸ್ತುತ ಈ ಜಂಟಿ ವೇದಿಕೆಯು ವಿಶ್ವಾದ್ಯಂತ 30 ಕೋಟಿಗೂ ಅಧಿಕ ವಿದ್ಯಾರ್ಥಿಗಳನ್ನು ಹಾಗೂ 12,000 ಕ್ಕೂ ಹೆಚ್ಚು ಉದ್ಯಮ-ಗ್ರಾಹಕರನ್ನು ಹೊಂದಿದೆ.