‘ಹೊಸ ಧರ್ಮಗಳ ಉದಯ’ ಪಾಠಕ್ಕೆ ಕತ್ತರಿ: ವಿವಾದಕ್ಕೀಡಾದ ಸರ್ಕಾರದ ನಡೆ
6ನೇ ತರಗತಿ 7ನೇ ಪಾಠದಲ್ಲಿ ಪ್ಯಾರಾ ಕಡಿತ| ವೈದಿಕ ಧರ್ಮ ಪದ್ಧತಿ ಬಗ್ಗೆ ಆಕ್ಷೇಪ ಇರುವ ಪಠ್ಯ| ಏಕಾಏಕಿ ಆದೇಶ, ಕಾರಣ ಉಲ್ಲೇಖ ಮಾಡದ ಸರ್ಕಾರ| ವೈದಿಕ ಧರ್ಮದ ದೋಷಗಳನ್ನು ಎತ್ತಿ ಹಿಡಿದು, ಇದರಿಂದಾಗಿಯೇ ಹೊಸ ಧರ್ಮಗಳ ಉದಯವಾದವು ಎನ್ನುವುದು ಈ ಪಾಠದಲ್ಲಿರುವ ತಿರುಳು| ಇದಕ್ಕೆ ಈಗ ಕೊಕ್ಕೆ ಹಾಕಿದ ಸರ್ಕಾರ|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಫೆ.20): 6ನೇ ತರಗತಿ ಸಮಾಜ ವಿಜ್ಞಾನ ವಿಷಯದ ಹೊಸ ಧರ್ಮಗಳ ಉದಯ ಎನ್ನುವ 7ನೇ ಪಾಠದ 82, 83, 87 ಪುಟದಲ್ಲಿನ ಕೆಲವೊಂದು ಪ್ಯಾರಾಗಳನ್ನು ಕಡಿತ ಮಾಡಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಪಠ್ಯವನ್ನು ಬೋಧನೆಗೆ (ಕಲಿಕೆಗೆ) ಹಾಗೂ ಮೌಲ್ಯಮಾಪನಕ್ಕೆ ಪರಿಗಣಿಸದಿರುವಂತೆ ಕಟ್ಟಪ್ಪಣೆ ಮಾಡಲಾಗಿದೆ. ಇದು ಈಗ ವಿವಾದಕ್ಕೀಡಾಗುತ್ತಿದೆ.
ವೈದಿಕ ಧರ್ಮದ ದೋಷಗಳನ್ನು ಎತ್ತಿ ಹಿಡಿದು, ಇದರಿಂದಾಗಿಯೇ ಹೊಸ ಧರ್ಮಗಳ ಉದಯವಾದವು ಎನ್ನುವುದು ಈ ಪಾಠದಲ್ಲಿರುವ ತಿರುಳು. ಇದಕ್ಕೆ ಈಗ ಕೊಕ್ಕೆ ಹಾಕಲಾಗಿದೆ. ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕರು ಇಂಥದ್ದೊಂದು ಸುತ್ತೋಲೆಯನ್ನು ಫೆ.17ರಂದು ಹೊರಡಿಸಿ, ರಾಜ್ಯದ ಎಲ್ಲ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ರವಾನೆ ಮಾಡಿ, ನಿಮ್ಮ ಹಂತದ ಅಧಿಕಾರಿಗಳಿಗೆ ಸುತ್ತೋಲೆಯನ್ನು ತಲುಪಿಸಿ, ಕಾರ್ಯಗತ ಮಾಡಿ, ಫೆ.28ರೊಳಗಾಗಿ ವರದಿ ಮಾಡುವಂತೆ ಸೂಚಿಸಿದ್ದಾರೆ.
ಖಾಸಗಿ ಶಾಲೆಗಳಿಗೆ ನೆರವು ನೀಡಲು ಸರ್ಕಾರಕ್ಕೆ ಪತ್ರ ಬರೆದ ಹೊರಟ್ಟಿ
ಕಾರಣ ನಮೂದಿಸಿಲ್ಲ:
ಈ ರೀತಿಯ ಪಠ್ಯವನ್ನು ಕಡಿತ ಮಾಡಲು ಆದೇಶ ಮಾಡಿರುವ ಪ್ರತಿಯಲ್ಲಿ ಯಾವುದೇ ನಿಖರ ಕಾರಣವನ್ನು ಉಲ್ಲೇಖಿಸಿಲ್ಲ. ಅಲ್ಲದೆ, ಹೀಗೆ ಕಡಿತ ಮಾಡುವ ಮುನ್ನ ಅದನ್ನೊಮ್ಮೆ ಸಾರ್ವಜನಿಕವಾಗಿ ಚರ್ಚೆಯನ್ನು ಮಾಡುವ ಗೋಜಿಗೆ ಹೋಗಿಲ್ಲ. ಏಕಾಏಕಿ ಆದೇಶ ಮಾಡಲಾಗಿದೆ ಮತ್ತು ಎಲ್ಲಿಯೂ ಕಾರಣ ಉಲ್ಲೇಖ ಮಾಡಿಲ್ಲ.