ಖಾಸಗಿ ಶಾಲೆಗಳಿಗೆ ನೆರವು ನೀಡಲು ಸರ್ಕಾರಕ್ಕೆ ಪತ್ರ ಬರೆದ ಹೊರಟ್ಟಿ
ಶುಲ್ಕ ಇಳಿಕೆ ಆದೇಶ ಪರಿಷ್ಕರಿಸುವಂತೆ ಮುಖ್ಯಮಂತ್ರಿ ಬಿಎಸ್‌ವೈಗೆ ಪತ್ರ ಬರೆದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ| ಫೆ. 23ರಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘಟನೆಗಳು ಮತ್ತು ಶಿಕ್ಷಕರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧಾರ|
ಬೆಂಗಳೂರು(ಫೆ.20): ಖಾಸಗಿ ಶಾಲೆಗಳ ಶುಲ್ಕ ನಿಗದಿ ಸಂಬಂಧ ಈಗಾಗಲೇ ಸರ್ಕಾರ ಮಾಡಿರುವ ಆದೇಶವನ್ನು ಪರಿಷ್ಕರಿಸುವ ಜೊತೆಗೆ ಆರ್ಥಿಕ ಸಂಕಷ್ಟದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಸೂಕ್ತ ಅನುದಾನ ಒದಗಿಸಬೇಕೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಕೈಗೊಂಡ ನಿರ್ಣಯದಂತೆ ಶುಲ್ಕ ನಿಗದಿಪಡಿಸಿ ಹೊರಡಿಸಿರುವ ಆದೇಶವನ್ನು ಪುನರ್ ಪರಿಶೀಲಿಸಿ ಪರಿಷ್ಕರಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ನೆರವಿಗೆ ಸರ್ಕಾರ ಧಾವಿಸಬೇಕು. ಖಾಸಗಿ ಶಾಲಾ ಶಿಕ್ಷಕರು, ಇತರೆ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಗಳು ಅನುಭವಿಸುತ್ತಿರುವ ಆರ್ಥಿಕ ಸಂಕಷ್ಟವನ್ನು ಪರಿಗಣಿಸಿ ನೇರವಾಗಿ ಪ್ರತ್ಯೇಕ ಅನುದಾನ ಬಿಡುಗಡೆ ಮಾಡುವುದು ಅತ್ಯಂತ ಅವಶ್ಯಕವಾಗಿದೆ ಎಂದು ಅವರು ಹೇಳಿದ್ದಾರೆ.
ಶಾಲೆ ಪ್ರಾರಂಭಕ್ಕೆ ರಾಜ್ಯ ಸರ್ಕಾರ ಅಧಿಕೃತ ಆದೇಶ: ಇಲ್ಲಿದೆ ಸಂಪೂರ್ಣ ಮಾಹಿತಿ
ಆರ್ಥಿಕ ಸಂಕಷ್ಟಕ್ಕೆ ಪರಿಹಾರವಾಗಿ ಅನುದಾನ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಫೆ.23ರಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘಟನೆಗಳು ಮತ್ತು ಶಿಕ್ಷಕರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ್ದಾರೆ. ಪರಿಸ್ಥಿತಿ ಕೈ ಮೀರುವ ಮುನ್ನ ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಖಾಸಗಿ ಆಡಳಿತ ಮಂಡಳಿಗಳ ಪ್ರತಿನಿಧಿಗಳೊಂದಿಗೆ ತುರ್ತಾಗಿ ಸಭೆ ನಡೆಸಿ ಅವರ ಸಮಸ್ಯೆ, ಬೇಡಿಕೆಗಳ ಪರಿಹಾರಕ್ಕೆ ಮಾಗೋರ್‍ಪಾಯಗಳನ್ನು ಕಂಡುಕೊಳ್ಳುವಂತೆ ಅವರು ಪತ್ರದಲ್ಲಿ ಕೋರಿದ್ದಾರೆ.
ಫೆ.23ಕ್ಕೆ ಪ್ರತಿಭಟನೆ:
ಶುಲ್ಕ ಕಡಿತ ವಾಪಸ್ ಪಡೆಯುವಂತೆ ಆಗ್ರಹಿಸಿ, ಸಂಕಷ್ಟದಲ್ಲಿರುವ ಶಾಲೆಗಳು ಹಾಗೂ ಶಿಕ್ಷಕರಿಗೆ ಆರ್ಥಿಕ ನೆರವು ನೀಡುವಂತೆ ಸರ್ಕಾರವನ್ನು ಆಗ್ರಹಿಸಿ ವಿವಿಧ ಖಾಸಗಿ ಸಂಘಟನೆಗಳು ಫೆ.23ರಂದು ನಗರದ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಬೃಹತ್ ಪ್ರತಿಭಟನಾ ರಾರಯಲಿ ಹಾಗೂ ಸಮಾವೇಶ ಹಮ್ಮಿಕೊಂಡಿವೆ.